ADVERTISEMENT

ನಷ್ಟ ತಡೆಯಲು ಬಿಜೆಪಿಗೆ ಶೆಟ್ಟರ್ ವಾಪಸ್: ಶಂಕರ ಪಾಟೀಲ ಮುನೇನಕೊಪ್ಪ

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 14:42 IST
Last Updated 29 ಜನವರಿ 2024, 14:42 IST
<div class="paragraphs"><p>ಶಂಕರ ಪಾಟೀಲ ಮುನೇನಕೊಪ್ಪ</p></div>

ಶಂಕರ ಪಾಟೀಲ ಮುನೇನಕೊಪ್ಪ

   

ಹುಬ್ಬಳ್ಳಿ: ‘ಬಿ.ಎಸ್‌. ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ರಚಿಸಿದಾಗ, ಬಿಜೆಪಿಗೆ ನಷ್ಟವಾಗಿತ್ತು. ಜಗದೀಶ ಶೆಟ್ಟರ್ ತೊರೆದಾಗಲೂ ಅಂಥದ್ದೇ ನಷ್ಟವಾದ ಕಾರಣ ಅವರನ್ನು ಪುನಃ ಪಕ್ಷಕ್ಕೆ ಕರೆತರಲಾಯಿತು’ ಎಂದು ಶೆಟ್ಟರ್‌ ಅವರ ಆಪ್ತ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

‘ಕಳೆದ ಚುನಾವಣೆಯಲ್ಲಿ ಕೆಲ ನಾಯಕರು ಪಕ್ಷ ತೊರೆದ ಸಂದರ್ಭದಲ್ಲಿ ನಾಯಕರು ಮತ್ತು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದರು. ಆದ್ದರಿಂದ ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ತೊರೆದ ನಾಯಕರನ್ನು ವಾಪಸ್ ಪಕ್ಷಕ್ಕೆ ಕರೆಯಿಸಿಕೊಳ್ಳುವ ಪ್ರಕ್ರಿಯೆಗೆ ವೇಗ ಸಿಕ್ಕಿದೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಕಳೆದ ಚುನಾವಣೆ ವೇಳೆ ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ಶೆಟ್ಟರ್‌ ಅವರು ಪಕ್ಷ ತೊರೆದಿದ್ದರು. ಅದನ್ನು ಕೇಂದ್ರದ ನಾಯಕರು ಸರಿಪಡಿಸಿದ್ದಾರೆ. ಸೂಕ್ತ ಸ್ಥಾನಮಾನ ಮತ್ತು ಗೌರವ ಕೊಡುವುದಾಗಿ ಭರವಸೆ ನೀಡಿ, ವಾಪಸ್‌ ಕರೆಸಿಕೊಂಡಿದ್ದಾರೆ’ ಎಂದರು.

ಬಣಗಳ ನಿರ್ವಹಣೆ ಅವಶ್ಯ: ಬಿಜೆಪಿ ಧಾರವಾಡ ಜಿಲ್ಲಾ ಘಟಕದಲ್ಲಿ ಎರಡು–ಮೂರು ಬಣಗಳಿವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲವನ್ನೂ ನಿರ್ವಹಿಸುವ ಜವಾಬ್ದಾರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೇಲಿದೆ. ಸಣ್ಣಪುಟ್ಟ ಅಸಮಾಧಾನಗಳನ್ನು ಸರಿಪಡಿಸಲಾಗುವುದು’ ಎಂದರು.

ಲಿಂಗಾಯತರಿಗೆ ಅನ್ಯಾಯವಾಗಿಲ್ಲ

‘ಲಿಂಗಾಯತರಿಗೆ ಅತಿ ಹೆಚ್ಚಿನ ಅವಕಾಶ ಬಿಜೆಪಿ ನೀಡಿದೆ. ಸಮುದಾಯದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು  ಜಗದೀಶ ಶೆಟ್ಟರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದೆ. ಅಲ್ಲದೇ, ನನ್ನನ್ನೂ ಸೇರಿ ಹಲವು ಲಿಂಗಾಯತ ನಾಯಕರಿಗೆ ಸಚಿವ ಸ್ಥಾನ ನೀಡಿದೆ. ಬಿಜೆಪಿಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿಲ್ಲ’ ಎಂದರು.

‘ಕಾಂಗ್ರೆಸ್‌ ಸೇರುವಂತೆ ಅಲ್ಲಿನ ಕೆಲ ನಾಯಕರು ನನ್ನನ್ನು ಆಹ್ವಾನಿಸಿದ್ದು ನಿಜ. ಕಾಂಗ್ರೆಸ್‌ ವಿರೋಧಿಸಿಯೇ ಬೆಳೆದ ನಾನು ಆ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ.  ಹಿಂದೆಯೂ ಇರಲಿಲ್ಲ, ಮುಂದೆಯೂ ಇಲ್ಲ’ ಎಂದರು.

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಅಭ್ಯರ್ಥಿ. ಯಾವುದೇ ಬದಲಾವಣೆಗಳು ಇಲ್ಲ. ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ.
ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.