ಹುಬ್ಬಳ್ಳಿ: ‘ಧಾರವಾಡ ಜಿಲ್ಲೆಯಲ್ಲಿರುವ ಕೆರೆಗಳಿಗೆ ಹರಿಯುತ್ತಿರುವ ಒಳಚರಂಡಿ ನೀರಿನ ಹರಿವನ್ನು ಬೇರೆಡೆ ತಿರುಗಿಸಲಾಗುತ್ತದೆ. ಸಂಸ್ಕರಿಸಿದ ನೀರು ಮಾತ್ರ ಕೆರೆಗೆ ಹರಿಯುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕೈಗಾರಿಕಾ ಇಲಾಖೆ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದ್ದಾರೆ.
ಧಾರವಾಡ ಜಿಲ್ಲೆಯ ಕೆರೆಗಳನ್ನು ಸಂರಕ್ಷಿಸಿ, ಅಭಿವೃದ್ಧಿಗೊಳಿಸಬೇಕು ಎಂದು ಎವೊಲ್ವ್ ಲೈವ್ಸ್ ಫೌಂಡೇಷನ್‌ನ ಪ್ರಾಜೆಕ್ಟ್ ಸೋಲ್ ಹಾಗೂ ಸಿಟಿಜನ್ಸ್ ಲೀಡ್‌ನ ಸದಸ್ಯರು ಕೈಗಾರಿಕಾ ಇಲಾಖೆ ಸಚಿವ ಜಗದೀಶ ಶೆಟ್ಟರ್ ಅವರಿಗೆ ಭಾನುವಾರ ಮನವಿ ಸಲ್ಲಿಸಿದಾಗ, ಸಚಿವರು ಈ ಭರವಸೆ ನೀಡಿದರು ಎಂದು ಫೌಂಡೇಷನ್‌ನ ಸಿಇಒ ಒಟಿಲ್ಲೆ ಅನ್ಬನ್‌ಕುಮಾರ್ ತಿಳಿಸಿದರು.
‘ಪ್ರಜಾವಾಣಿ ಮೆಟ್ರೊ’ದಲ್ಲಿ ಪ್ರಕಟವಾಗುತ್ತಿರುವ ‘ನಮ್ ಕೆರಿ ಕಥಿ’ ಲೇಖನ ಮಾಲೆಯನ್ನು ಉಲ್ಲೇಖಿಸಿ, ಅದರ ಪ್ರತಿಗಳೊಂದಿಗೆ ಮನವಿ ಸಲ್ಲಿಸಲಾಯಿತು ಎಂದರು.
‘ಕೆರೆಗಳಿಗೆ ಹರಿಯುತ್ತಿರುವ ಒಳಚರಂಡಿ ನೀರು ತಡೆದು, ಅದನ್ನು ಸಂಸ್ಕರಿಸಿ ಬಿಡಲು ಎಸ್‌ಟಿಪಿ ಅಳವಡಿಸಲಾಗುತ್ತದೆ. ಕೆರೆಗಳ ಸರ್ವೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಕೆರೆಯ ಸುತ್ತಮುತ್ತ ಗಿಡಗಳನ್ನು ನೆಟ್ಟು, ಮಣ್ಣು ಸವಕಳಿ ತಡೆಯಲು ಹಾಗೂ ನೀರಿನ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಶೆಟ್ಟರ್ ತಿಳಿಸಿದರು’ ಎಂದರು.
‘ದೊಡ್ಡ ಕೆರೆಗಳ ಹೂಳು ತೆಗೆಯಲು ಅಗತ್ಯ ಹಣ ನಮ್ಮ ಬಳಿ ಇಲ್ಲ. ಸಣ್ಣ ಕೆರೆಗಳ ಹೂಳು ತೆಗೆಯಬಹುದು. ಬಜೆಟ್‌ನಲ್ಲಿ ನಗರೋತ್ಥಾನ ಯೋಜನೆಯಡಿ ಹಣ ನೀಡಿದರೆ ಅದರಲ್ಲಿ ಎಲ್ಲ ಕೆರೆಗಳ ಅಭಿವೃದ್ಧಿಗೆ ವೆಚ್ಚ ಮಾಡಲಾಗುತ್ತದೆ.ಧಾರವಾಡದಲ್ಲಿರುವ ಕೆರೆಗಳ ರಕ್ಷಣೆಗೆ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶೆಟ್ಟರ್ ಭರವಸೆ ನೀಡಿದರು’ ಎಂದು ಒಟಿಲ್ಲೆ ತಿಳಿಸಿದರು.
ಎವೊಲ್ವ್ ಲೈವ್ಸ್ ಫೌಂಡೇಷನ್‌ನ ಪ್ರಾಜೆಕ್ಟ್ ಸೋಲ್ ಹಾಗೂ ಸಿಟಿಜನ್ಸ್ ಲೀಡ್‌ನ ಸದಸ್ಯರಾದ ರಾಜೇಶ್‌ಕುಮಾರ್, ಸೌಮ್ಯಾ ಕುಂಬಾರ್, ಡಾ. ಮಹಾಂತೇಶ ತಪಶೆಟ್ಟಿ, ರೂಪಾ ಶೆಟ್ಟಿ, ವನಿತಾ ತ್ಯಾಗರಾಜನ್, ತ್ಯಾಗರಾಜನ್ ಮೋಹನ್ ಹಾಗೂ ಇಮ್ಯಾನುಯಲ್ ಪತಾರೆ ಅವರು ಮನವಿ ಸಲ್ಲಿಸಿದ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.