ಜಗಳೂರು: ತೀವ್ರ ಬರಗಾಲದಿಂದ ತತ್ತರಿಸಿರುವ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಇಲ್ಲಿನ ತಹಶೀಲ್ದಾರ್ ಕಚೇರಿಗೆ ಮುಗಿಬಿದ್ದು, ‘ನಮಗೆ ಬರ ಪರಿಹಾರ ಮೊತ್ತ ದೊರೆತಿಲ್ಲ’ ಎಂದು ದೂರಿದ್ದಾರೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್.ಡಿ.ಆರ್.ಎಫ್) ಜಗಳೂರು ತಾಲ್ಲೂಕಿನ 26,273 ರೈತರಿಗೆ ಪ್ರತಿ ₹ 8,500 ಪರಿಹಾರ ಬಿಡುಗಡೆ ಮಾಡಿದೆ. ಆದರೆ, ತಾಂತ್ರಿಕ ಕಾರಣಗಳಿಂದಾಗಿ 4,200ಕ್ಕೂ ಹೆಚ್ಚು ರೈತರಿಗೆ ಪರಿಹಾರದ ಹಣ ಜಮಾ ಆಗಿಲ್ಲ.
ಹಣ ಪಾವತಿಯಾಗದ ಕಾರಣ ಕಳವಳಗೊಂಡ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ರೈತರು ಏಕಕಾಲಕ್ಕೆ ಪಟ್ಟಣದ ತಹಶೀಲ್ದಾರ್ ಕಚೇರಿಗೆ ಮುಗಿಬಿದ್ದು ಅಧಿಕಾರಿಗಳಿಗೆ ಈ ಕುರಿತ ದೂರು ಸಲ್ಲಿಸಿದರು.
‘ಕಳೆದ ವರ್ಷ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಗೆ ಸಾಲ ಮಾಡಿದ್ದೆ. ತೀವ್ರ ಬರಗಾಲದಿಂದಾಗಿ 5 ಎಕೆರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಒಣಗಿ ನಷ್ಟವಾಗಿದೆ. ಆದರೆ ಸರ್ಕಾರ ನನಗೆ ಬರ ಪರಿಹಾರ ನೀಡಿಲ್ಲ. ಇದಕ್ಕೆ ಸ್ಪಷ್ಟ ಕಾರಣ ತಿಳಿಯುತ್ತಿಲ್ಲ’ ಎಂದು ಜಗಳೂರು ಗೊಲ್ಲರಹಟ್ಟಿ ಗ್ರಾಮದ ರೈತ ವಿ. ವೆಂಕಟೇಶ ‘ಪ್ರಜಾವಾಣಿ’ ಎದುರು ನೋವು ತೋಡಿಕೊಂಡರು.
‘ಕೆಲವು ದಿನಗಳ ಹಿಂದೆ ರಾಜ್ಯ ಸರ್ಕಾರದಿಂದ ಮಧ್ಯಂತರ ಪರಿಹಾರ ರೂಪದಲ್ಲಿ ಪ್ರತಿ ರೈತರಿಗೆ ₹ 2,000 ಪಾವತಿಸಲಾಗಿದೆ. ಆಗ ಯಾವುದೇ ತೊಂದರೆ ಎದುರಾಗಿರಲಿಲ್ಲ. ಈಗ ತಾಂತ್ರಿಕ ಕಾರಣಗಳಿಂದಾಗಿ 4,000ಕ್ಕೂ ಹೆಚ್ಚು ರೈತರಿಗೆ ಪರಿಹಾರ ಪಾವತಿಯಾಗಿಲ್ಲ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಸ್ಪಷ್ಟಪಡಿಸಿದರು.
ಹಣ ಪಾವತಿಯಾಗದ ರೈತರ ನೆರವಿಗಾಗಿ ತಹಶೀಲ್ದಾರ್ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಅಲ್ಲದೇ ತೋಟಗಾರಿಕೆ ಕಚೇರಿ, ರೈತ ಸಂಪರ್ಕ ಕೇಂದ್ರ ಮತ್ತು ಕಂದಾಯ ಇಲಾಖೆ ಕಚೇರಿಗೆ ತೆರಳಿ ಈ ಮಾಹಿತಿ ನೀಡಿದಲ್ಲಿ ಎಲ್ಲರಿಗೂ ಪರಿಹಾರ ಸಂದಾಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಪರಿಹಾರ ಹಣ ಪಾವತಿಯಲ್ಲಿನ ಸಮಸ್ಯೆಯಿಂದಾಗಿ ನೂರಾರು ರೈತರು ಕಚೇರಿಗೆ ಬರುತ್ತಿದ್ದಾರೆ. ತಾಂತ್ರಿಕ ಕಾರಣಗಳ ಕಾರಣ ರೈತರಿಗೆ ಪರಿಹಾರ ಹಣ ಪಾವತಿಯಲ್ಲಿ ಸಮಸ್ಯೆಯಾಗಿದೆ. ಕೆಲವೇ ದಿನಗಳಲ್ಲಿ ರೈತರ ಖಾತೆಗಳಿಗೆ ಹಣ ಜಮಾ ಆಗಲಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ತಹಶೀಲ್ದಾರ್ ಚಂದ್ರಶೇಖರ ನಾಯ್ಕ ಹೇಳಿದರು.
ರೈತರಿಗೆ ತಹಶೀಲ್ದಾರ್ ಕಚೇರಿಯ ಸಹಾಯವಾಣಿ ಕೇಂದ್ರ ಅಥವಾ ಕಚೇರಿಯಲ್ಲಿ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ತಹಶೀಲ್ದಾರ್, ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿದಲ್ಲಿ ಮಾತ್ರ ಪರಿಹಾರ ಸಿಗಬಹುದು ಎಂದು ರೈತ ಸಂಘಟನೆಗಳ ಪದಾಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.