ಹುಬ್ಬಳ್ಳಿ: ಬಂಗಾರದ ಉಂಗುರ ಕಳವು ಮಾಡಿದ ಅಪರಾಧಿಗೆ ಇಲ್ಲಿನ ಒಂದನೇ ಜೆಎಂಎಫ್‌ಸಿ ಕೋರ್ಟ್ ಎರಡು ವರ್ಷ ಕಠಿಣ ಜೈಲು ಶಿಕ್ಷೆ, ₹5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಮಂಟೂರ ರಸ್ತೆಯ ಹ್ಯೂಜನ್ ಚರ್ಚ್ ನಿವಾಸಿ ಆಟೊ ಚಾಲಕ ಇರ್ಫಾನ್ ದಾವಲಸಾಬ್ ವಿಜಾಪುರ ಶಿಕ್ಷೆಗೆ ಒಳಗಾದ ವ್ಯಕ್ತಿ. ಇವನು 2016ರ ಜೂನ್ 7ರಂದು ವಿಜಯನಗರ ವಿಭಾ ಪ್ರಭು ಅವರ ಮನೆ ಒಳಗೆ ನುಗ್ಗಿ, ಬಂಗಾರದ ಉಂಗುರ ಕಳವು ಮಾಡಿದ್ದನು. ಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ನ್ಯಾಯಾಧೀಶ ಸುಶಾಂತ ಚೌಗಲೆ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಶ್ರೀಕಾಂತ ದಯಣ್ಣವರ್ ವಾದ ಮಂಡಿಸಿದ್ದರು.
₹88 ಸಾವಿರ ವಂಚನೆ: ನಗರದ ಬ್ಯೂಟಿಷಿಯನ್ ಮಹಿಳೆಗೆ ವ್ಯಕ್ತಿಯೊಬ್ಬ ವಾಟ್ಸ್ ಆ್ಯಪ್ ಮೂಲಕ ಕ್ಯೂ ಆರ್ ಕೋಡ್ ಕಳುಹಿಸಿ ಸ್ಕ್ಯಾನ್ ಮಾಡಲು ಹೇಳಿ, ಅವರ ಬ್ಯಾಂಕ್ ಖಾತೆಯಿಂದ ₹88 ಸಾವಿರ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.
ಮಧುಮಕ್ಕಳಿಗೆ ಅಲಂಕಾರ ಮಾಡುವುದಿದೆ ಎಂದು ಮಹಿಳೆಗೆ ಕರೆ ಮಾಡಿ ತಿಳಿಸಿದ್ದ. ಅದಕ್ಕೆ ಮುಂಗಡವಾಗಿ ಹಣ ಪಾವತಿಸುವುದಾಗಿ ಹೇಳಿ, ಕ್ಯೂ ಆರ್ ಕೋಡ್ ಕಳಹಿಸಿದ್ದ. ಅದನ್ನು ನಂಬಿ ಮಹಿಳೆ ಸ್ಕ್ಯಾನ್ ಮಾಡಿದಾಗ ಹಣ ವರ್ಗಾವಣೆಯಾಗಿದೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳಸೂತ್ರ ಕಳವು: ಕಾಳಿದಾಸನಗರ ಶ್ರೀನಿವಾಸ ಹೈಟ್ಸ್ ಅಪಾರ್ಟಮೆಂಟ್ ಬಳಿ ನಡೆದು ಹೋಗುತ್ತಿದ್ದ ಸರಸ್ವತಿ ಹೆಗಡೆ ಎಂಬುವವರ ₹75 ಸಾವಿರ ಮೌಲ್ಯದ ಮಂಗಳ ಸೂತ್ರ ಬೈಕ್‌ನಲ್ಲಿ ಬಂದ ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.