ನವಲಗುಂದ: ‘ಜನಸ್ಪಂದನದಲ್ಲಿ ಬಂದಂತಹ ಅಹವಾಲುಗಳನ್ನು ಇಲಾಖಾ ಅಧಿಕಾರಿಗಳು ಕಾನೂನು ಪ್ರಕಾರ ವಿಲೇವಾರಿ ಮಾಡಬೇಕು. ಒಂದೊಮ್ಮೆ ಅದು ಸರ್ಕಾರದ ಹಂತದಲ್ಲಿ ಬಗೆ ಹರಿಸುವಂತಿದ್ದಲ್ಲಿ ಪ್ರಸ್ತಾವನೆಯೊಂದಿಗೆ ಫಾಲೋ ಅಪ್ ಕೂಡ ಮಾಡಬೇಕು’ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಪಟ್ಟಣದ ಶಿಕ್ಷಕರ ಸಹಕಾರಿ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ ನವಲಗುಂದ ವಿಧಾನಸಭಾ ಕ್ಷೇತ್ರ ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಸಕರ ಮನವಿ: ನನ್ನ ಕ್ಷೇತ್ರದಲ್ಲಿ ರೈತರ ಪರಿಹಾರದ ಸಮಸ್ಯೆಯಾಗಿದ್ದು ಜಿಲ್ಲಾಧಿಕಾರಿಗಳು ಸ್ವಲ್ಪ ಮುತುವರ್ಜಿ ವಹಿಸಿ ರೈತರಿಗೆ ಕೂಡಲೇ ಪರಿಹಾರವನ್ನು ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗಳಲ್ಲಿ ಶಾಸಕ ಎನ್ ಎಚ್ ಕೋನರಡ್ಡಿ ಮನವಿ ಮಾಡಿದರು.
ಸೌಹಾರ್ದಯುತವಾಗಿ ಬಗೆಹರಿಸಿ: ಜಮೀನಿಗೆ ಹೋಗಲು ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕೆಂಬ ಅಹವಾಲನ್ನು ಉಲ್ಲೇಖಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು, ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯ್ತಿ ಇಒ ಸ್ಥಳ ಪರಿಶೀಲನೆ ಮಾಡಲು ಸೂಚಿಸಿದರು. ಹಲವು ವರ್ಷಗಳಿಂದ ರಸ್ತೆಗಳಿದ್ದಲ್ಲಿ ನಿಯಮಾನುಸಾರ ರಸ್ತೆ ಮಾಡಿಕೊಡಲು ಮುಂದಾಗಬೇಕು. ಒಂದೊಮ್ಮೆ ಖಾಸಗಿ ವ್ಯಕ್ತಿಗಳ ಜಾಗ ಆಗಿದ್ದಲ್ಲಿ ಸಂಬಂಧಪಟ್ಟವರೊಂದಿಗೆ ಸೌಹಾರ್ದಯುತವಾಗಿ ಮಾತನಾಡಿ ಅನುಮತಿ ಪಡೆದು ರಸ್ತೆ ನಿರ್ಮಾಣ ಮಾಡಬೇಕು ಎಂದರು.
ಗೊಬ್ಬರಗುಂಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕೂಡಲೇ ಕ್ರಮ ಜರುಗಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಹಾಗೂ ತಹಶೀಲ್ದಾರ್ ಕಚೇರಿಯ ಗುತ್ತಿಗೆಯಾಧಾರ ಸಿಬ್ಬಂದಿಯ ಅಧಿಕಾರ ದುರ್ಬಳಕೆ ಕುರಿತು ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಿದರು.
‘8 ದಿನಕ್ಕೊಮ್ಮೆ ನಗರದಲ್ಲಿ ಕುಡಿಯುವ ನೀರು ಬಿಡುವುದರಿಂದ ತುಂಬಿಡಲು ತೊಂದರೆಯಾಗುತ್ತಿದೆ. ಇನ್ನೂ ಡೆಂಗಿ ಹಾವಳಿ ಹೆಚ್ಚಾಗುತ್ತಿದೆ’ ಎಂದು ಮಾಬುಸಾಬ ಯರಗುಪ್ಪಿ ಜಿಲ್ಲಾಡಳಿತದ ಗಮನಕ್ಕೆ ತಂದರು. ಇದಕ್ಕೆ ಪ್ರತಿ್ಕರಿಯಿಸಿದ ಶಾಸಕ ಕೋನರಡ್ಡಿ, ಮುಂದೆ 7 ದಿನಕ್ಕೊಮ್ಮೆ ನೀರು ಬಿಡುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.
174 ಅರ್ಜಿ ಸ್ವೀಕೃತ
ಜನಸ್ಪಂದನ ಕಾರ್ಯಕ್ರಮದಲ್ಲಿ ಅಬಕಾರಿ, ಕಂದಾಯ, ಆರೋಗ್ಯ, ಆಹಾರ, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ನವಲಗುಂದ ತಾಲ್ಲೂಕು-110 ಅಣ್ಣಿಗೇರಿ ತಾಲ್ಲೂಕು-46 ಹುಬ್ಬಳ್ಳಿ ತಾಲ್ಲೂಕು-18 ಸೇರಿ ಒಟ್ಟು 174 ಅರ್ಜಿಗಳು ಸ್ವೀಕೃತವಾಗಿವೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಸ್ವರೂಪ್.ಟಿ.ಕೆ, ಎಸ್ಪಿ ಡಾ. ಗೋಪಾಲ ಬ್ಯಾಕೋಡ್, ತಹಶೀಲ್ದಾರರಾದ ಸುಧೀರ ಸಾವಕಾರ, ರಾಜು ಮಾವರಕರ, ತಾ.ಪಂ. ಇಒ ಭಾಗ್ಯಶ್ರೀ ಜಹಗೀರದಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ರಾಣಿ ಚನ್ನಮ್ಮ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಮಲ್ಲಾಡ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.