ADVERTISEMENT

ಜನತಾ ದರ್ಶನ 25ರಂದು: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 5:42 IST
Last Updated 21 ಸೆಪ್ಟೆಂಬರ್ 2023, 5:42 IST
ಗುರುದತ್ತ ಹೆಗಡೆ
ಗುರುದತ್ತ ಹೆಗಡೆ   

ಧಾರವಾಡ: ನಗರದ ಕೆ.ಸಿ.ಡಿ ಕಾಲೇಜಿನ ಸೃಜನಾ ರಂಗಮಂದಿರದಲ್ಲಿ ಸೆ.25ರಂದು ಜನತಾ ದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳಿಗ್ಗೆ 11 ಗಂಟೆ ಕಾರ್ಯಕ್ರಮ ಆರಂಭವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರು ಅಧ್ಯಕ್ಷತೆ ವಹಿಸುವರು. ಎಲ್ಲ ಇಲಾಖೆಗಳ ಅಧಿಕಾರಿಗಳು ಭಾಗವಹಿಸುವರು ಎಂದು ತಿಳಿಸಿದರು.

ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಯಲಿದೆ. ಕಂದಾಯ, ಆರೋಗ್ಯ ಸಹಿತ ಯಾವುದೇ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಾರ್ವಜನಿಕರು ಸಮಸ್ಯೆಗಳನ್ನು ತಿಳಿಸಬಹುದು. ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ADVERTISEMENT

IPGRS (https://ipgrs.karnataka.gov.in/) ಪೋರ್ಟ್‌ಲ್‌ನಲ್ಲಿ ಸೆ.21ರಿಂದ ಸಾರ್ವಜನಿಕರು ಮನವಿಗಳನ್ನು ಅಪಲೋಡ್‌ ಮಾಡಬಹುದು. ಆಯಾ ತಾಲ್ಲೂಕು ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿಗಳನ್ನು ನೀಡಬಹುದು. ತಾಲ್ಲೂಕು ಕಚೇರಿ ನೌಕರರು ಮನವಿಗಳನ್ನು ಪೋರ್ಟಲ್‌ಗೆ ಅಪ್‌ಲೋಡ್‌ ಮಾಡುತ್ತಾರೆ. ಮನವಿಗಳನ್ನು ಸ್ವೀಕರಿಸಿ ಟೋಕನ್‌ ಅಥವಾ ನಂಬರ್‌ ನೀಡಲಾಗುವುದು. ಜನತಾ ದರ್ಶನದಲ್ಲಿ ಸಮಸ್ಯೆ, ಮನವಿ ಪರಿಶೀಲಿಸಲಾಗುವುದು ಎಂದು ವಿವರ ನೀಡಿದರು.

15 ದಿನಗಳ ನಂತರ ತಾಲ್ಲೂಕು ಕೇಂದ್ರಗಳಲ್ಲೂ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಧಿಕಾರಿ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರ ಪಾವತಿಸಲಾಗಿದೆ. ಏಪ್ರಿಲ್‌ನಿಂದ ಈವರೆಗೆ 22 ಪ್ರಕರಣಗಳು ವರದಿಯಾಗಿದ್ದವು, ಈ ಪೈಕಿ 9 ಪ್ರಕರಣ ಪರಿಹಾರಕ್ಕೆ ತಿರಸ್ಕೃತವಾಗಿವೆ. ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ಕಾರ ನಿರ್ದೇಶನ ನೀಡಿದ ತಕ್ಷಣ ಕ್ರಮ ವಹಿಸಲಾಗುವುದು. ಮಾರ್ಗಸೂಚಿ ಆಧರಿಸಿ ಬರಪೀಡಿತ ತಾಲ್ಲೂಕು ಘೋಷಣೆಯಾಗಿದೆ ಎಂದು ಅವರು ಉತ್ತರಿಸಿದರು.

ಕೆರೆಗಳ ತೂಬುಗಳ ದುರಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆಯವರಿಗೆ ಕ್ರಮ ವಹಿಸಲು ಸೂಚನೆ ನೀಡಲಾಗುವುದು. ವೃದ್ಧಾಪ್ಯ ವೇತನ ಸೌಲಭ್ಯಕ್ಕೆ ನೋಂದಣಿ ಕಾರ್ಯ ಇತ್ಯಾದಿಗೆ ನೌಕರರು ಹಣ ಕೇಳಿದರೆ ಜನರು ದೂರು ನೀಡಬಹುದು, ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ ಇದ್ದರು.

Highlights - IPGRS ಪೋರ್ಟ್‌ಲ್‌ ಅಥವಾ ತಾಲ್ಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಲು ಅವಕಾಶ ಸಾರ್ವಜನಿಕರು ಸಮಸ್ಯೆ ತಿಳಿಸಿ, ಪರಿಹರಿಸಿಕೊಳ್ಳಲು ವೇದಿಕೆ ಪ್ರತಿ ತಿಂಗಳು ಕಾರ್ಯಕ್ರಮ ಆಯೋಜನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.