ನವಲಗುಂದ: ಮಾಜಿ ಶಾಸಕ ಹಾಗೂ ಮುಖಂಡ ಎನ್.ಎಚ್.ಕೋನರಡ್ಡಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಎದ್ದಿದೆ.
ಈಚೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಜೆಡಿಎಸ್ ಹೀನಾಯವಾಗಿ ನಿರಾಸೆ ಕಂಡಿತ್ತು. 2013ರ ಪಾಲಿಕೆ ಚುನಾವಣೆಯಲ್ಲಿ ಒಂಬತ್ತು ಸ್ಥಾನಗಳನ್ನು ಗಳಿಸಿದ್ದ ಪಕ್ಷ ಈ ಸಲ ಒಂದು ಸ್ಥಾನಕ್ಕೆ ಇಳಿದಿತ್ತು. ಇದರ ಹಿನ್ನೆಲೆಯಲ್ಲಿ ಕೋನರಡ್ಡಿ ಅವರು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಈ ರಾಜೀನಾಮೆ ಅಂಗೀಕಾರವಾಗುವ ಮೊದಲೇ ಅವರು ಕಾಂಗ್ರೆಸ್ ಸೇರುವ ಸುದ್ದಿ ಹರಿದಾಡುತ್ತಿದೆ.
ನಂತರ ನಡೆದ ಬೆಳವಣಿಗೆಯಲ್ಲಿ ಕೋನರಡ್ಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನುವ ಸುದ್ದಿಯೂ ಕ್ಷೇತ್ರದ ನಾಯಕರಿಂದ ಕೇಳಿಬರುತ್ತಿದೆ.
‘ಕೋನರಡ್ಡಿಯವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪಕ್ಷದ ಮುಖಂಡರಲ್ಲಿ ಚರ್ಚೆ ನಡೆಸಿದ್ದು ನಿಜ. ಕಳೆದ ಆರು ತಿಂಗಳಿಂದ ಈ ಬೆಳವಣಿಗೆ ನಡೆದಿದೆ. ಮುಂಬರುವ ವಿಧಾನಸಭೆಗೆ ಕಾಂಗ್ರೆಸ್ ಟಿಕೆಟ್ ಖಚಿತತೆ ಹಾಗೂ ಪಕ್ಷದಲ್ಲಿ ಯಾವ ಸ್ಥಾನಮಾನ ಕೊಡುತ್ತಾರೆ ಎನ್ನುವುದನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಈ ಕುರಿತು ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡುತ್ತಿದ್ದಾರೆ’ ಎಂದು ಕೋನರಡ್ಡಿ ಅವರ ಆಪ್ತರೂ ಆದ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.
ತಳಮಳ: ಕೋನರಡ್ಡಿ ಕಾಂಗ್ರೆಸ್ ಸೇರ್ಪಡೆ ಸುದ್ದಿ ಹರಿದಾಡುತ್ತಿದ್ದಂತೆ ಮೂಲ ಕಾಂಗ್ರೆಸ್ಸಿಗರಲ್ಲಿ ಹಾಗೂ ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದೆ.
ಕಳೆದ ವಿಧಾನಸಭೆಯ ಪರಾಜಿತ ಅಭ್ಯರ್ಥಿ ವಿನೋದ ಅಸೂಟಿ, ಮಾಜಿ ಸಚಿವ ಕೆ.ಎನ್.ಗಡ್ಡಿ, ವಿಜಯ ಕುಲಕರ್ಣಿ, ಶಿವಾನಂದ ಕರಿಗಾರ, ಪುರಸಭೆ ಅಧ್ಯಕ್ಷ ಮಂಜು ಜಾಧವ, ಅಲ್ಪಸಂಖ್ಯಾತರ ಮುಖಂಡ ಉಸ್ಮಾನ ಬಬರ್ಚಿ ಟಿಕೆಟ್‌ನ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
-----
ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸುದ್ದಿ ಹರಿದಾಡುತ್ತಿರುವುದು ಅಚ್ಚರಿ ಮೂಡಿಸಿದೆ. ವಿಧಾನಸಭೆ ಚುನಾವಣೆ 18 ತಿಂಗಳು ಬಾಕಿ ಇದ್ದು ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುವೆ
ಎನ್.ಎಚ್. ಕೋನರಡ್ಡಿ
ಜೆಡಿಎಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.