ADVERTISEMENT

ಜೆಡಿಎಸ್‌ನವರು ದಲಿತರನ್ನು ಮಂತ್ರಿ ಮಾಡಲಿ: ಸಚಿವ ಆರ್‌.ಬಿ.ತಿಮ್ಮಾಪುರ ಸವಾಲು

ಪತ್ರಿಕಾಗೋಷ್ಠಿಯಲ್ಲಿ ಸಕ್ಕರೆ ಸಚಿವ ಆರ್‌.ಬಿ. ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 13:17 IST
Last Updated 29 ಡಿಸೆಂಬರ್ 2018, 13:17 IST
ಆರ್.ಬಿ.ತಿಮ್ಮಾಪುರ
ಆರ್.ಬಿ.ತಿಮ್ಮಾಪುರ   

ಹುಬ್ಬಳ್ಳಿ: ‘ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರಿಂದ ಗೃಹ ಖಾತೆಯನ್ನು ಕಿತ್ತುಕೊಂಡಿದ್ದರಿಂದ ದಲಿತರಿಗೆ ಅನ್ಯಾಯವಾಗಿದೆ ಎನ್ನುವ ಮೂಲಕ ಜೆಡಿಎಸ್‌ನ ಎಚ್‌.ಡಿ. ರೇವಣ್ಣ ಅವರು ದಲಿತರ ಬಗ್ಗೆ ಕಾಳಜಿ ತೋರಿಸಿದ್ದು ಶ್ಲಾಘನೀಯ. ಆದರೆ, ನಮ್ಮ ಪಕ್ಷದತ್ತ ಬೆಟ್ಟು ಮಾಡುವ ಬದಲು ತಮ್ಮದೇ ಪಕ್ಷದಿಂದ ದಲಿತರನ್ನು ಸಚಿವರನ್ನಾಗಿ ಮಾಡಿ ತೋರಿಸಲಿ’ ಎಂದು ಸಕ್ಕರೆ ಸಚಿವ ಆರ್‌.ಬಿ. ತಿಮ್ಮಾಪುರ ಸವಾಲು ಹಾಕಿದರು.

ಸಚಿವರಾಗಿ ಮೊದಲ ಬಾರಿಗೆ ಶನಿವಾರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಸಂವಾದ ನಡೆಸಿದರು.

‘ಕಾಂಗ್ರೆಸ್‌ ಪಕ್ಷವು ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ದಲಿತರಿಗೇ ಹೆಚ್ಚು ಅವಕಾಶ ನೀಡಿದೆ. ಜೊತೆಗೆ, ಉತ್ತರ ಕರ್ನಾಟಕಕ್ಕೆ ಇಷ್ಟೊಂದು ಪ್ರಾತಿನಿಧ್ಯ ಯಾವಾಗಲೂ ಸಿಕ್ಕಿರಲಿಲ್ಲ’ ಎಂದರು.

ADVERTISEMENT

ಸುಗಮ ಸರ್ಕಾರ ನಡೆಸಲು ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆ ಎಂದು ಬಸವರಾಜ ಹೊರಟ್ಟಿ ಅವರು ಏಕೆ ಹೇಳಿದ್ದಾರೋ ಗೊತ್ತಿಲ್ಲ. ಈ ಸಂಬಂಧ ಅವರೊಂದಿಗೆ ಮಾತನಾಡುವೆ ಎಂದರು.

‘ರಾಜ್ಯದ ಕಬ್ಬು ಬೆಳೆಗಾರರಿಗೇ ಹೆಚ್ಚಿನ ದರವನ್ನು ಇಲ್ಲಿನ ಕಾರ್ಖಾನೆಗಳು ನೀಡುತ್ತಿದ್ದು, ಯಾವ ರಾಜ್ಯದಲ್ಲಿಯೂ ಇಷ್ಟೊಂದು ದರ ನಿಗದಿ ಮಾಡಿಲ್ಲ’ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಕಬ್ಬಿಗೆ ಹೆಚ್ಚು ದರ ನೀಡುತ್ತಾರೆ ಎಂಬುದೆಲ್ಲ ಸುಳ್ಳು. ನಾವು ಅತ್ಯಂತ ಹೆಚ್ಚಿನ ದರಕ್ಕೆ ಖರೀದಿ ಮಾಡುತ್ತಿದ್ದು, ಬಾಕಿ ಇರುವ ರೈತರ ಹಣವನ್ನು ಕಾರ್ಖಾನೆಗಳಿಂದ ಕೊಡಿಸಲು ಶೀಘ್ರವೇ ಕ್ರಮ ಕೈಗೊಳ್ಳುವೆ. ನಾನು ಕಬ್ಬು ಬೆಳೆಗಾರನಾಗಿದ್ದರಿಂದ ರೈತರ ಕಷ್ಟಗಳು ಗೊತ್ತು. ಕಾರ್ಖಾನೆಯವರ ಸಮಸ್ಯೆಗಳನ್ನು ಇನ್ನಷ್ಟೇ ತಿಳಿದುಕೊಳ್ಳಬೇಕು. ರೈತರ ಹಿತ ಕಾಯುವುದು ಎಷ್ಟು ಮುಖ್ಯವೋ ಕಾರ್ಖಾನೆಗಳು ಉಳಿಯುವಂತೆಯೂ ನೋಡಿಕೊಳ್ಳಬೇಕಿದೆ ಎಂದರು.

‘ಎಫ್‌ಆರ್‌ಪಿಯನ್ನು ಕೇಂದ್ರ ಸರ್ಕಾರವೇ ನಿಗದಿ ಮಾಡುತ್ತದೆ. ಇದರಲ್ಲಿ ನಮ್ಮ ಪಾತ್ರವೇನೂ ಇರುವುದಿಲ್ಲ. ಆದರೆ, ಕಬ್ಬಿನ ಬಾಕಿಯನ್ನು ಕೊಡಿಸಲು ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

’ಮಂಡ್ಯದ ಮೈಷುಗರ್‌ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದ್ದು, ಶೀಘ್ರವೇ ಈ ಸಂಬಂಧ ಅಧಿಕಾರಿಗಳ ಸಭೆಯನ್ನು ನಡೆಸುವೆ’ ಎಂದು ತಿಮ್ಮಾಪುರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.