ಹುಬ್ಬಳ್ಳಿ: ‘ಹುಬ್ಬಳ್ಳಿ ಹಾಗೂ ವಿಜಯಪುರಕ್ಕೆ ಬಂದಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಮಿತಿಯೇ ಅಲ್ಲ. ಬಿಜೆಪಿ ಸದಸ್ಯರು ಬಂದಿದ್ದಾರೆ ಅಷ್ಟೆ. ಅವರು ಇಲ್ಲಿ ರಾಜಕೀಯ ಮಾಡಲು ಬಂದಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜೆಪಿಸಿ ಅಂದರೆ ಅದಕ್ಕೊಂದು ಮಾರ್ಗಸೂಚಿ ಇದೆ. ಅವರು ಬರುವುದಕ್ಕಿಂತ ಮುಂಚೆ ಸರ್ಕಾರಕ್ಕೆ, ಅಧಿಕಾರಿಗಳಿಗೆ ತಿಳಿಸಬೇಕು. ಎಲ್ಲ ಸದಸ್ಯರು ಬರಬೇಕು. ಇಲ್ಲಿ ಕೇವಲ ಅಧ್ಯಕ್ಷರೊಬ್ಬರು ಬಂದಿದ್ದಾರೆ. ಅವರು ತಮ್ಮ ಪಕ್ಷದ ಕೆಲಸಕ್ಕೆ ಬಂದಿದ್ದಾರೆ. ಅಧ್ಯಕ್ಷರ ಜೊತೆ ಬಂದಿರುವ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಅವರೇನು ಸಮಿತಿ ಸದಸ್ಯರೇ?’ ಎಂದು ವ್ಯಂಗ್ಯವಾಡಿದರು.
‘ಧಾರವಾಡ ಜಿಲ್ಲೆಯಲ್ಲಿ ರೈತರಿಗೆ ನೋಟಿಸ್ ನೀಡಿರುವುದು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಇದ್ದಾಗ. ಬೇಕಿದ್ದರೆ ಜಿಲ್ಲಾಧಿಕಾರಿ ಅವರನ್ನು ಕೇಳಿನೋಡಿ. ವಿಜಯಪುರದಲ್ಲಿಯೂ ಇದೇ ಆಗಿದೆ. ನೋಟಿಸ್ ವಾಪಸ್ ಪಡೆಯಲು ಈಗಾಗಲೇ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಯಾವ ರೈತರನ್ನೂ ಒಕ್ಕಲೆಬ್ಬಿಸಲ್ಲ. ಅವರ ಜಮೀನನ್ನು ಕಿತ್ತುಕೊಳ್ಳಲ್ಲ. ಅವರನ್ನು ಉಳಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.