ADVERTISEMENT

ಕಲಘಟಗಿ | ಕಾಮಗಾರಿ ವಿಳಂಬ; ಜನರ ಪರದಾಟ

24X7 ಕುಡಿಯುವ ನೀರಿನ ಕಾಮಗಾರಿ ಗುಣಮಟ್ಟಕ್ಕೆ ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 4:46 IST
Last Updated 10 ನವೆಂಬರ್ 2024, 4:46 IST
ಕಲಘಟಗಿಯ ಹೊರವಲಯದ ಕಲಘಟಗಿ– ಮುಂಡಗೋಡು ರಾಜ್ಯ ಹೆದ್ದಾರಿ ಪಕ್ಕದಲ್ಲಿ ನೀರಿನ ಪೈಪ್ ಅಳವಡಿಕೆ ಮಾಡುತ್ತಿರುವುದು
ಕಲಘಟಗಿಯ ಹೊರವಲಯದ ಕಲಘಟಗಿ– ಮುಂಡಗೋಡು ರಾಜ್ಯ ಹೆದ್ದಾರಿ ಪಕ್ಕದಲ್ಲಿ ನೀರಿನ ಪೈಪ್ ಅಳವಡಿಕೆ ಮಾಡುತ್ತಿರುವುದು   

ಕಲಘಟಗಿ: 24×7 ಕುಡಿಯುವ ನೀರು ಪೂರೈಸುವ ಯೋಜನೆ ಕಾಮಗಾರಿಗಾಗಿ ಪಟ್ಟಣದಲ್ಲಿ  ಎಲ್ಲೆಂದರಲ್ಲಿ ಚರಂಡಿ ಹಾಗೂ ಸಿ.ಸಿ ರಸ್ತೆ ಅಗೆದು ಬಿಟ್ಟಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಕಾಮಗಾರಿ ವಿಳಂಬವಾಗುತ್ತಿರುವುದು ಒಂದೆಡೆಯಾದರೆ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಪಟ್ಟಣದ ವ್ಯಾಪ್ತಿಯ 17 ವಾರ್ಡ್‌ಗಳಲ್ಲಿ ಮನೆ ಮನೆಗೆ ನೀರು ಪೂರೈಕೆ ಮಾಡಲು ₹36 ಕೋಟಿ ವೆಚ್ಚದಲ್ಲಿ 64 ಕಿ.ಮೀ ಪೈಪ್‌ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ.

ADVERTISEMENT

‘ಟೆಂಡರ್‌ ನಿಯಮದಂತೆ ಮೂರು ಅಡಿ ಆಳದ ತಗ್ಗು ತೆಗೆದು ಪೈಪ್‌ಲೈನ್ ಅಳವಡಿಕೆ ಮಾಡಬೇಕು. ಆದರೆ, ಗುತ್ತಿಗೆದಾರರು ನಿಯಮ ಉಲ್ಲಂಘಿಸಿ ಒಂದೂವರೆಯಿಂದ ಎರಡು ಅಡಿ  ಆಳದ ತಗ್ಗು ತೆಗೆದು ಪೈಪ್‌ ಅಳವಡಿಸುತ್ತಿದ್ದಾರೆ’ ಎಂದು ಕೆಲವು ವಾರ್ಡ್‌ಗಳ ನಿವಾಸಿಗಳು ಆರೋಪಿಸಿದ್ದಾರೆ.

ಈಚೆಗೆ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹಾಗೂ ಸಾರ್ವಜನಿಕರು ಯೋಜನೆ ಕುರಿತು ಆಕ್ರೋಶ ಹೊರಹಾಕಿದ್ದರು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಗಮನ ಹರಿಸುತ್ತಿಲ್ಲ ಎಂಬುದು ಬಹುತೇಕ ನಿವಾಸಿಗಳ ದೂರು. 

‘ಗುತ್ತಿಗೆದಾರರು ನಿಯಮ ಗಾಳಿಗೆ ತೂರಿದ್ದಾರೆ. ಅವರಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿಗೆ ಒಂದು ತಿಂಗಳ ಹಿಂದೆ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಜೋಳದ ಓಣಿಯ ಮುಖಂಡ ಮಂಜುನಾಥ ವಾಲಿಶೆಟ್ಟರ ದೂರಿದರು. 

‘ಬಸವೇಶ್ವರ ನಗರ ಹಾಗೂ ವಿವಿಧ ಕಡೆ ಒಂದೂವರೆ ಅಡಿ ಮಾತ್ರ ತಗ್ಗು ತೆಗೆದು ಪೈಪ್‌ ಅಳವಡಿಸಿದ್ದಾರೆ. ಕೆಲವೆಡೆ ರಸ್ತೆ ಅಗೆದು ಹಾಗೆ ಬಿಟ್ಟಿದ್ದು, ತಗ್ಗು ಗುಂಡಿಗಳಿಂದಾಗಿ ನಿವಾಸಿಗಳು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ’ ಎಂದು ಬಸವೇಶ್ವರ ನಗರದ ಸಮಾಜ ಸೇವಕ ಸುನೀಲ ಕಮ್ಮಾರ ಹೇಳಿದರು. 

‘ನಿಯಮದಂತೆ ತಗ್ಗು ತೆಗೆದು ಪೈಪ್‌ ಅಳವಡಿಸುತ್ತಿಲ್ಲ ಎಂಬ ಬಗ್ಗೆ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಕಾಮಗಾರಿ ಮುಗಿದ ನಂತರ ಅಗೆದ ರಸ್ತೆ ಸರಿಪಡಿಸಲಾಗುವುದು’ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸುನೀಲ್ ಹಳಪೇಟಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.