ಹುಬ್ಬಳ್ಳಿ: ‘ಕಳಸಾ– ಬಂಡೂರಿ ಯೋಜನೆ ಜಾರಿಗೊಳಿಸುವ ವಿಷಯದಲ್ಲಿ ರಾಜಕೀಯ ನಾಯಕರು ಪರಸ್ಪರ ಆರೋಪ ಮಾಡುತ್ತಿದ್ದಾರೆ. ಗಣೇಶ ಹಬ್ಬದ ಬಳಿಕ ರೈತ ಸಂಘದಿಂದ ಬಹಿರಂಗ ವೇದಿಕೆಯೊಂದನ್ನು ಸಜ್ಜುಗೊಳಿಸುತ್ತಿದ್ದು, ಎಲ್ಲ ಪಕ್ಷಗಳ ನಾಯಕರು, ನೀರಾವರಿ ತಜ್ಞರು ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಬಹಿರಂಗವಾಗಿ ಚರ್ಚಿಸಲು ಮುಂದೆ ಬರಬೇಕು‘ ಎಂದು ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಸಿದ್ದಣ್ಣ ತೇಜಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಸ್ಯೆ ಪರಿಹಾರದ ವಿಷಯದಲ್ಲಿ ಗೊಂದಲ ನಿರ್ಮಾಣ ಮಾಡುವುದು ಬೇಡ. ಎಲ್ಲರೂ ಒಂದೇ ವೇದಿಕೆಯಲ್ಲಿ ಚರ್ಚಿಸಿದರೆ ಗೊಂದಲಗಳು ನಿವಾರಣೆ ಆಗುತ್ತವೆ’ ಎಂದು ತಿಳಿಸಿದರು.
‘200 ಕಿ.ಮೀಗೂ ಹೆಚ್ಚು ಉದ್ದ ಹೈಟೆನ್ಶನ್ ವಿದ್ಯುತ್ ತಂತಿ ಅಳವಡಿಸುವುದಕ್ಕೆ ಗೋವಾ ಸರ್ಕಾರಕ್ಕೆ ಕೇಂದ್ರವು ಅನುಮೋದನೆ ನೀಡಿದೆ. ಈ ವಿದ್ಯುತ್ ತಂತಿ ಅಳವಡಿಸುತ್ತಿರುವ ಮಾರ್ಗದಲ್ಲಿ ಆನೆ ಕಾರಿಡಾರ್, ಹುಲಿ ಕಾರಿಡಾರ್ ಸೇರಿದಂತೆ ವಿವಿಧ ವನ್ಯಜೀವಿಗಳಿವೆ. ಆದರೆ ಕಳಸಾ– ಬಂಡೂರಿ ಯೋಜನೆಗಾಗಿ 40 ಕಿ.ಮೀ ಉದ್ದಕ್ಕೂ ಕಾಮಗಾರಿ ಕೈಗೊಳ್ಳುವುದಕ್ಕೆ ಕೇಂದ್ರವು ಅನುಮೋದನೆ ನೀಡುತ್ತಿಲ್ಲ. ತಾರತಮ್ಯ ನೀತಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ’ ಎಂದರು.
‘ಮಹದಾಯಿ ಅರಣ್ಯ ಮಾರ್ಗದಲ್ಲಿ ಯಾವುದೇ ಹುಲಿಗಳಿಲ್ಲ. ಸಮೀಕ್ಷೆಯಲ್ಲೂ ಹುಲಿಗಳು ಇರುವುದು ಕಂಡುಬಂದಿಲ್ಲ. ವಾಸ್ತವ ಸ್ಥಿತಿಗೆ ವಿರುದ್ಧವಾದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿಯ ವರದಿಯನ್ನಾಧರಿಸಿ ಯೋಜನೆಗೆ ಅನುಮೋದನೆ ನೀಡದಿರುವುದು ಸರಿಯಲ್ಲ. ಈ ಹಂತದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಆದರೆ, ಸಚಿವರು ಇಚ್ಛಾಶಕ್ತಿ ತೋರಿಸುತ್ತಿಲ್ಲ’ ಎಂದು ಹೇಳಿದರು.
ಪದಾಧಿಕಾರಿಗಳಾದ ಬಾಬಾಜಾನ್ ಮುಧೋಳ, ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರವಿರಾಜ ಕಂಬಳಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.