ADVERTISEMENT

ಕಳಸಾ ಬಂಡೂರಿ ಕಾಮಗಾರಿ ಆರಂಭಿಸುವ ಸುದ್ದಿ ಕೊಡಿ: ಸುಭಾಸಚಂದ್ರ ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 15:29 IST
Last Updated 18 ಜುಲೈ 2024, 15:29 IST

ಹುಬ್ಬಳ್ಳಿ: ‘ಇದೇ ತಿಂಗಳು ಜುಲೈ 21ರಂದು ನಡೆಯುವ ರೈತ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಬರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಕಳಸಾ ಬಂಡೂರಿ ಯೋಜನೆ ಕಾಮಗಾರಿ ಆರಂಭವಾಗುವ ಒಳ್ಳೆಯ ಸುದ್ದಿಯನ್ನು ಘೋಷಣೆ ಮಾಡಬೇಕು’ ಎಂದು ನವಲಗುಂದದ ಮಲಪ್ರಭ, ಮಹಾದಾಯಿ, ಕಳಸಾಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ರೈತ ಹೋರಾಟ ಸಮಿತಿಯ ಸುಭಾಸಚಂದ್ರ ಪಾಟೀಲ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆತ್ಮಕ್ಕೆ ಶಾಂತಿಕೋರಲು ಮಾಲಾರ್ಪಣೆ ಮಾಡುವುದಕ್ಕೆ ಬರುವ ಪ್ರತಿಯೊಬ್ಬ ರಾಜಕಾರಣಿಯು ಆತ್ಮಾವಲೋಕನ ಮಾಡಿಕೊಂಡು ಬರಬೇಕು. ಕಳಸಾ ಬಂಡೂರಿ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳುವುದಾಗಿ ತಮ್ಮಷ್ಟಕ್ಕೇ ತಾವೇ ಈ ಹಿಂದೆ ಕಾಲಮಿತಿ ಘೋಷಿಸಿಕೊಂಡಿದ್ದರು. ಈ ಸಮಸ್ಯೆಯನ್ನು ತಾರ್ಕೀಕವಾಗಿ ಅಂತ್ಯಗೊಳಿಸದೆ ಮೌನ ವಹಿಸಿರುವುದು ಸರಿಯಲ್ಲ ಎಂದರು.

ರೈತರು ಏಕ ತಿರುವಳಿಯಾಗಿ ಸಾಲ ತೀರಿಸಿದಾಗ ಎಲ್ಲ ಬ್ಯಾಂಕುಗಳು ಮತ್ತೆ ಸಾಲ ಕೊಡುವುದಕ್ಕೆ ಕ್ರಮ ವಹಿಸಬೇಕು. ರೈತರಿಂದ ಸಿಬಿಲ್‌ ವರದಿ ಕೇಳುವುದನ್ನು ತೆಗೆದು ಹಾಕಬೇಕು. 65 ವರ್ಷ ಮೇಲ್ಪಟ್ಟ ರೈತರಿಗೂ ನೇರವಾಗಿ ಸಾಲ ಕೊಡುವ ನೀತಿ ಅನುಸರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ನವಲಗುಂದದಲ್ಲಿ ನಡೆಯುತ್ತಿರುವ ರೈತರ ಧರಣಿ 3,280 ದಿನಗಳಿಗೆ ತಲುಪಿದೆ. ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಎನ್‌.ಎಚ್‌.ಕೋನರಡ್ಡಿ ಅವರು ಪಕ್ಷಾತೀತವಾಗಿ ಸ್ಪಂದಿಸಿ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಇದೀಗ ಇಬ್ಬರು ಭರವಸೆಯನ್ನು ಮರೆತಿದ್ದಾರೆ ಎಂದರು.

ಬೇಡಿಕೆ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆ ಎದುರು ಧರಣಿ ಆರಂಭಿಸಲಾಗುವುದು ಎಂದು ತಿಳಿಸಿದರು.

ರೈತ ಮುಖಂಡರಾದ ಬಸನಗೌಡ ಫಕ್ಕೀರಗೌಡ, ಮಲ್ಲೇಶ ಎಸ್‌.ಉಪ್ಪಾರ, ಸಿದ್ಲಿಂಗಪ್ಪ ಹಳ್ಳದ, ಮುರಗೆಪ್ಪ ಪಲ್ಲೇದ, ಶಿವಣ್ಣ ಹುಬ್ಬಳ್ಳಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.