ADVERTISEMENT

ಹುಬ್ಬಳ್ಳಿ: ಗಡಗಡ ನಡುಗುವ ಪೊಲೀಸ್‌ ಠಾಣೆ!

ಭಾರಿ ವಾಹನ ಸಂಚರಿಸಿದರೆ ಅಲುಗಾಡುವ ಕಟ್ಟಡ; ಜೀವಭಯದಲ್ಲಿ ಸಿಬ್ಬಂದಿ

ನಾಗರಾಜ್ ಬಿ.ಎನ್‌.
Published 13 ಅಕ್ಟೋಬರ್ 2024, 6:20 IST
Last Updated 13 ಅಕ್ಟೋಬರ್ 2024, 6:20 IST
ಹುಬ್ಬಳ್ಳಿ ಪಿ.ಬಿ. ರಸ್ತೆ ಪಕ್ಕ ರಾಜಕಾಲುವೆ ಮೇಲೆ ನಿರ್ಮಾಣವಾಗಿರುವ ಕಮರಿಪೇಟೆ ಪೊಲೀಸ್‌ ಠಾಣೆ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ ಪಿ.ಬಿ. ರಸ್ತೆ ಪಕ್ಕ ರಾಜಕಾಲುವೆ ಮೇಲೆ ನಿರ್ಮಾಣವಾಗಿರುವ ಕಮರಿಪೇಟೆ ಪೊಲೀಸ್‌ ಠಾಣೆ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಈ ಠಾಣೆಯ ಎದುರು ಸರಕು ತುಂಬಿದ ಒಂದು ಲಾರಿ ಸಾಗಿದರೂ ಸಾಕು, ಠಾಣೆಯ ಇಡೀ ಕಟ್ಟಡ ಗಡಗಡ ನಡುಗುತ್ತದೆ. ಒಳಗಿದ್ದ ಸಿಬ್ಬಂದಿಯೆಲ್ಲ ಜೀವಭಯದಿಂದ ಹೊರಗೆ ಓಡಿ ಬರುತ್ತಾರೆ.

ಇದು ಹುಬ್ಬಳ್ಳಿಯ ಬೆಂಗಳೂರು-ಪುಣೆ ಮುಖ್ಯರಸ್ತೆಯ ಪಕ್ಕದಲ್ಲಿರುವ ಕಮರಿಪೇಟೆ ಪೊಲೀಸ್‌ ಠಾಣೆಯ ಸದ್ಯದ ಸ್ಥಿತಿ. ಈ ಠಾಣೆ ನಿರ್ಮಾಣವಾಗಿ 15 ವರ್ಷಗಳಾಗಿವೆ. ಕಟ್ಟಡ ಗಟ್ಟಿಮುಟ್ಟಾಗಿದೆ. ಆದರೆ, ರಾಜಕಾಲುವೆ ಮೇಲೆ ನಿರ್ಮಾಣದಿಂದ ಸಮಸ್ಯೆ ಸೃಷ್ಟಿಯಾಗಿದೆ. ಕಾಲುವೆಯ ತಳಭಾಗ ಶಿಥಿಲ ಆಗಿದ್ದಲ್ಲದೆ, ಪಕ್ಕದಲ್ಲೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಹ ರಾಜಕಾಲುವೆ ಮೇಲೆಯೇ ಇದೆ.‌ ಪರಿಣಾಮ ಭಾರವಾದ ವಾಹನ ರಸ್ತೆಯಲ್ಲಿ ಸಂಚರಿಸಿದರೆ, ಕಾಲುವೆ ತಡೆಗೋಡೆ ಅಲುಗಾಡಿ ಪೊಲೀಸ್ ಠಾಣೆಯ ಕಟ್ಟಡವೂ ಅಲುಗಾಡುತ್ತದೆ.

ಗಣೇಶ ಮೂರ್ತಿ ವಿಸರ್ಜನೆಯ ದಿನ ರಾತ್ರಿ, ಠಾಣೆ ಎದುರಿನ ರಸ್ತೆಯಲ್ಲಿ ಭಾರಿ ವಾಹನ ಸಂಚರಿಸಿತ್ತು.‌ ಆಗ ಸಂಪೂರ್ಣ ಠಾಣೆಯೇ ನಡುಗಿದೆ. ಒಳಗಿದ್ದ ಎಲ್ಲ ಸಿಬ್ಬಂದಿ ಒಮ್ಮೆಲೇ ಎದ್ದೆ–ಬಿದ್ದೆ ಎಂಬಂತೆ ಹೊರಗಡೆ ಓಡಿ ಬಂದರು. ಯಾವುದೇ ಕ್ಷಣ ಕಾಲುವೆಯ ತಳಪಾಯ ಕುಸಿದು, ಠಾಣೆಯ ಕಟ್ಟಡವೂ ನೆಲಸಮ ಆಗುತ್ತದೆ ಎಂಬ ಆತಂಕ ಪೊಲೀಸರಿಗೆ ಕಾಡುತ್ತಿದೆ.

ADVERTISEMENT

‘ಒಂದು ವರ್ಷದ ಈಚೆಗೆ ಠಾಣೆಯ ಕಟ್ಟಡ ಜಾಸ್ತಿ ಅಲುಗಾಡಲು ಶುರುವಾಗಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಹುಬ್ಬಳ್ಳಿ ನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವುದರಿಂದ ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸರಕು ತುಂಬಿದ ಬೃಹತ್ ವಾಹನಗಳು ಠಾಣೆ ಎದುರು ಸಂಚರಿಸುವಾಗ, ಮುಂಜಾಗ್ರತೆಯಾಗಿ ನಾವೆಲ್ಲ ಹೊರಗೆ ಬರುತ್ತೇವೆ. ಠಾಣೆಯ ಹೊರಗೆ ಇರುವ ಸೆಂಟ್ರಿಯ ಕೆಲಸ ದೊಡ್ಡ ವಾಹನಗಳನ್ನು ವೀಕ್ಷಿಸಿ ಒಳಗಿದ್ದ ಸಿಬ್ಬಂದಿಗೆ ಮಾಹಿತಿ ನೀಡುವುದೇ ಆಗಿದೆ’ ಎಂದು ಠಾಣೆಯ ಸಿಬ್ಬಂದಿ ಹೇಳುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ‘ರಾಜಕಾಲುವೆ ಮೇಲೆ ಕಟ್ಟಡ ನಿರ್ಮಿಸಿರುವುದರಿಂದ ಸಮಸ್ಯೆಯಾಗಿದೆ. ವಾಹನಗಳ ಸಂಚಾರದಿಂದ ಕಟ್ಟಡ ಅಲುಗಾಡುತ್ತಿರುವ ಕುರಿತು ಮಾಹಿತಿಯಿದ್ದು, ಬೇರೆಡೆಗೆ ಸ್ಥಳಾಂತರಿಸುವ ಕುರಿತು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ಪೊಲೀಸ್‌ ಕಮಿಷನರ್‌ಗೆ ಪತ್ರ: ‘ರಾಜಕಾಲುವೆ ಮೇಲೆ ಠಾಣೆ ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆಯಾಗುತ್ತಿದೆ. ಕೆಳಗಡೆ ಹೂಳು, ಕಸ ಸಿಲುಕಿಕೊಳ್ಳುತ್ತಿದ್ದು, ಅದರಿಂದ ನಾಲಾ ತುಂಬಿ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುತ್ತದೆ. 2024ರ ಮೇ 15ರಂದು ಜಿಲ್ಲಾಧಿಕಾರಿ, ಆಯುಕ್ತರು, ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳಾಂತರ ಕುರಿತು ಮೌಖಿಕ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಠಾಣೆ ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಪಾಳಿಕೆ 9ರ ವಲಯಾಧಿಕಾರಿ ಮೇ 23ರಂದೇ ಪೊಲೀಸ್‌ ಕಮಷನರ್‌ಗೆ ಪತ್ರ ಬರೆದು ತಿಳಿಸಿದ್ದಾರೆ.

ಈಶ್ವರ ಉಳ್ಳಾಗಡ್ಡಿ
ಠಾಣೆ ಸ್ಥಳಾಂತರ ಕುರಿತು ಪೊಲೀಸ್‌ ಇಲಾಖೆಗೆ ಪತ್ರ ಬರೆಯಲಾಗಿದೆ. ತುರ್ತು ಕ್ರಮವಾಗಿ ನಾಲಾದಲ್ಲಿ ತುಂಬಿದ್ದ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗುವುದು
ಈಶ್ವರ ಉಳ್ಳಾಗಡ್ಡಿ ಆಯುಕ್ತ ಹುಬ್ಬಳ್ಳಿ–ಧಾರವಾಡ ಮಹಾನಗರ
ಕಟ್ಟಡ ತೆರವಿಗೆ ಸೂಚನೆ
‘ಕಮರಿಪೇಟೆ ಪೊಲೀಸ್ ಠಾಣೆ ರಾಜಕಾಲುವೆ ಮೇಲೆ ನಿರ್ಮಿಸಿರುವ ಕಟ್ಟಡದಲ್ಲಿ ಇರುವುದರಿಂದ ಅದು ಅಪಾಯದ ಸ್ಥಿತಿಯಲ್ಲಿದೆ. ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ತೆರವು ಮಾಡಬೇಕು’ ಎಂದು ಲೋಕಲೋಪಯೋಗಿ ಇಲಾಖೆ ಕಟ್ಟಡ ಸಾಮರ್ಥ್ಯದ ಕುರಿತು ಪರಿಶೀಲನಾ ವರದಿಯನ್ನು ಪೊಲೀಸ್‌ ಕಮಿಷನರ್ ಕಚೇರಿಗೆ ರವಾನಿಸಿದೆ. ಅದನ್ನು ಪೊಲೀಸ್ ಗೃಹ ಮಂಡಳಿಗೆ ರವಾನಿಸಲಾಗಿದ್ದು ಅಲ್ಲಿಂದ‌ ಕಟ್ಟಡ ತೆರವುಗೊಳಿಸಲು ಲೋಕೋಪಯೋಗಿ ಇಲಾಖೆಗೆ ಪತ್ರ ಬಂದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ‌. ‘ಕಟ್ಟಡ ತೆರವು ನಂತರ ತಾತ್ಕಾಲಿಕ ಠಾಣೆಗೆ ಅಲ್ಲಿಯೇ ಸಮೀಪವಿರುವ ಸಮುದಾಯ ಭವನ ಗುರುತಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.