ನವಲಗುಂದ: ಕನ್ನಡ ಸಾಹಿತ್ಯ ಚಟುವಟಿಕೆ ನಡೆಸಲು ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನ ಇಲ್ಲದೆ ಸಾಹಿತ್ಯ ಚಟುವಟಿಕೆ ಎಲ್ಲೆಂದರಲ್ಲಿ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
ಕವಿಗಳು, ಸಾಹಿತಿಗಳು, ಕಾದಂಬರಿಕಾರರು, ಕಥೆಗಾರರು ನಾಡಿನ ಸಾಹಿತ್ಯಕಾರರು ನೆಲೆಸಿದ ಈ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನ ಇಲ್ಲದಿರುವುದು ಕನ್ನಡ ಸಾಹಿತ್ಯ ಮನಸುಗಳ ನೋವಿನ ಸಂಗತಿ.
ಕನ್ನಡ ನಾಡು ನುಡಿಯ ಸೇವೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಜಾನಪದ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು, ನವಿಲುಗರಿ ಸಾಹಿತ್ಯ ವೇದಿಕೆ, ಶಿಕ್ಷಕರ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಡಾ.ರಾಜ್‌ಕುಮಾರ್ ಅಭಿಮಾನಿ ಬಳಗ ಹಾಗೂ ಹಲವಾರು ಕನ್ನಡ ಪರ ಸಂಘಟನೆಗಳು ನವಲಗುಂದ ತಾಲ್ಲೂಕಿನಲ್ಲಿ ಹಲವು ಕಾರ್ಯಕ್ರಮ ಸಭೆ, ಸಮಾರಂಭ ಮಾಡುತ್ತಿರುತ್ತವೆ.
'ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದ ಪಂಪ ಜನಿಸಿದ ನಾಡಿದು. ನಲವಡಿ ಶ್ರೀಕಂಠ ಶಾಸ್ತ್ರೀಗಳಂತಹ ಶ್ರೇಷ್ಠ ನಾಟಕ ರಚನೆಕಾರರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ‘ಹಳ್ಳ ಬಂತು ಹಳ್ಳ‘ದಂತಹ ಶ್ರೇಷ್ಠ ಕಾದಂಬರಿ ಈ ನಾಡಿಗೆ ನೀಡಿದ ಶ್ರೀನಿವಾಸ ವೈದ್ಯರಿದ್ದ ನೆಲವಿದು.
ಜಾನಪದ ಕೋಗಿಲೆ ಫಕ್ಕೀರಮ್ಮ ಗುಡಿಸಾಗರ ಇವರ ಗೀಗೀ ಪದದ ನಾದವನ್ನು ಕನ್ನಡಿಗರ ಕರ್ಣದಲ್ಲಿ ಶಾಶ್ವತವಾಗಿ ಮೊಳಗಿಸಿದವರ ಜಾನಪದದ ಕಣಜ ನವಲಗುಂದವಿದು. ಇದಕ್ಕೆಲ್ಲ ಕಳಸವಿಟ್ಟಂತೆ ಆ ಕಾಲದಲ್ಲಿಯೇ ಕನ್ನಡದ ಕಂಪನ್ನು ನಾಡಿನ ತುಂಬ ಪಸರಿಸಿದ ಗವಿಮಠದ ಬಸವಲಿಂಗ ಸ್ವಾಮಿಗಳ ಪುಣ್ಯ ಭೂಮಿ ನವಲಗುಂದ.
ಶ್ರೀಶೈಲ ಹುದ್ದಾರ, ಶಿವಾನಂದ ಗಾಳಿ, ಧಾರವಾಡ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗರಾಜ ಅಂಗಡಿ, ಮಕ್ಕಳ ಸಾಹಿತಿ ಕಡದಳ್ಳಿಯ ಚಂದ್ರೇಗೌಡ, ಕುಲಕರ್ಣಿರವರಂತಹ ಸಾಹಿತಿಗಳು ಗೀಗೀ ಪದದ ಪರಂಪರೆಯನ್ನು ಜೀವಂತವಾಗಿರಿಸಿ ಗುರು ಶಿಷ್ಯ ಪರಂಪರೆಯ ಮುಖೇನ ಜಾನಪದ ಕಲೆ ಮುಂದುವರಿಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದರಾದ ಇಮಾಮಸಾಬ ವಲ್ಲೆಪ್ಪನವರ, ಸಾವಿತ್ರಿಬಾಯಿ ಪೂಜಾರವರ ತವರು ನೆಲದಲ್ಲಿ ಇದುವರೆಗೂ ಒಂದು ಕನ್ನಡ ಭವನ ಇಲ್ಲದಿರುವದು ಬೇಸರದ ಸಂಗತಿ.
ಕನ್ನಡ ಸಾಹಿತ್ಯ ಪರಿಷತ್ತು 8 ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದೆ. ಸಾವಿರಾರು ಅಜೀವ ಸದಸ್ಯರನ್ನು ಹೊಂದಿದೆ. ಅವರೆಲ್ಲರೂ ಸೇರಿ ಸಭೆ ಸೇರಲು ಕನ್ನಡದ ಕಾರ್ಯಕ್ರಮ ಆಯೋಜಿಸಲು ಕನ್ನಡ ಭವನ ತಾಲ್ಲೂಕಿನ ಕೇಂದ್ರ ಸ್ಥಾನ ನವಲಗುಂದದಲ್ಲಿ ತುರ್ತಾಗಿ ಆಗಬೇಕೆಂಬುದು ತಾಲ್ಲೂಕಿನ ಕನ್ನಡಿಗರ ಆಶಯವಾಗಿದೆ.
ಇದಕ್ಕೆ ಬೇಕಾಗುವ ಜಾಗವನ್ನು ತಾಲ್ಲೂಕು ಆಡಳಿತ, ಸ್ಥಳೀಯ ಸಂಸ್ಥೆ ಪುರಸಭೆ ಮಾಡಬೇಕಾಗಿದೆ. ಅದಕ್ಕೆ ಬೇಕಾದ ಅನುದಾನವನ್ನು ಸರ್ಕಾರ ಕೂಡಲೇ ಮಂಜೂರ ಮಾಡಿಸಿ, ಕನ್ನಡ ಭವನ ನಿರ್ಮಾಣ ಮಾಡಬೇಕಿದೆ.
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಕಷ್ಟು ಸಾಹಿತ್ಯ, ಚಟುವಟಿಕೆಗಳು ನಡೆಯುತ್ತಾ ಬಂದಿವೆ. ಆದರೆ ಸಾಹಿತ್ಯ ಚಟುವಟಿಕೆ ನಡೆಸಲು ಸ್ವಂತ ಭವನ ಇಲ್ಲ ಈ ಭಾಗದ ಜನಪ್ರತಿನಿಧಿಗಳು, ಕನ್ನಡ ಸಾಹಿತ್ಯ ಭವನಕ್ಕೆ ಮುಂದಾಗದಿರುವುದು ಇಲ್ಲಿನ ಕನ್ನಡ ಮನಸುಗಳಿಗೆ ಬಹಳ ನೋವುಂಟು ಮಾಡಿದೆ. ಈಗಲಾದರೂ ನವಲಗುಂದದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ಕ್ರಮವಹಿಸಲಿ ಎನ್ನುವುದು ಸ್ಥಳೀಯರು ಮನವಿ.
ಸಾಹಿತ್ಯಪರ ಕಾರ್ಯಕ್ರಮವನ್ನು ನೌಕರ ಭವನ ಶಿಕ್ಷಕರ ಭವನದಲ್ಲಿ ಮಾಡುವಂತಹ ಸ್ಥಿತಿ ಇದೆ. ನವಲಗುಂದ ಹಾಗೂ ಅಣ್ಣಿಗೇರಿ ನಗರಗಳಲ್ಲಿ ಒಂದೊಂದು ಕನ್ನಡ ಭವನದ ಅವಶ್ಯಕತೆ ಇದೆ.ಸಿದ್ದಯ್ಯ ಗದಿಗೆಯ್ಯ ಹಿರೇಮಠ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ನವಲಗುಂದ
ನವಲಗುಂದ ತಾಲ್ಲೂಕಿನ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣಕ್ಕೆ ಕನ್ನಡ ಭವನದ ಅವಶ್ಯಕತೆ ಇದೆ. ಇದರಿಂದ ಕನ್ನಡ ಪರ ಚಟುವಟಿಕೆಗಳು ನಿರಂತರವಾಗುತ್ತವೆ.ಎ.ಬಿ.ಕೊಪ್ಪದ ಅಧ್ಯಕ್ಷರು ಕರ್ನಾಟಕ ಜಾನಪದ ಪರಿಷತ್ತು ನವಲಗುಂದ
ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ಕನ್ನಡ ಭವನ ನಿರ್ಮಾಣಕ್ಕೆ ಮನವಿ ಮಾಡುತ್ತೇನೆ. ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ.ಎನ್.ಎಚ್.ಕೋನರಡ್ಡಿ ಶಾಸಕ ನವಲಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.