ADVERTISEMENT

ಧಾರವಾಡ: 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ 27ರಂದು 

ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 14:04 IST
Last Updated 24 ಫೆಬ್ರುವರಿ 2024, 14:04 IST
ಲಿಂಗರಾಜ ಅಂಗಡಿ
ಲಿಂಗರಾಜ ಅಂಗಡಿ   

ಧಾರವಾಡ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದಲ್ಲಿ ಫೆಬ್ರುವರಿ 27ರಂದು 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲೂರು ವೆಂಕಟರಾವ್ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಬೆಂಗಳೂರಿನ ನಿವೃತ್ತ ಕುಲಪತಿ ಮಲ್ಲೇಪುರಂ ವೆಂಕಟೇಶ ಉದ್ಘಾಟನೆ ನೆರೆವೇರಿಸುವರು ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರುವರು. ಕೇಂದ್ರ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿ ವ.ಚ. ಚನ್ನೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಪಾಲ್ಗೊಳ್ಳುವರು. ಪ್ರೊ.ಸಂತೋಷ ಹಾನಗಲ್ಲ ಸಮ್ಮೇಳನದ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ADVERTISEMENT

ಬೆಳಿಗ್ಗೆ 8.30ಕ್ಕೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶ ಎಸ್.ಎಸ್. ಕೆಳದಿಮಠ ಧ್ವಜಾರೋಹಣ ನೆರೆವೇರಿಸುವರು. 9 ಗಂಟೆಗೆ ಕಲಾಭವನದಿಂದ ಸಮ್ಮೇಳನದ ಮೆರವಣಿಗೆ ನಡೆಯಲಿದೆ. ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಚಾಲನೆ ನೀಡುವರು ಎಂದರು.

ಮಧ್ಯಾಹ್ನ 12.30ಕ್ಕೆ ಉಪನ್ಯಾಸ ಗೋಷ್ಠಿ ನಡೆಯಲಿದೆ. ಅಮೃತಾ ಮಡಿವಾಳರ ಸಾಹಿತ್ಯದಲ್ಲಿ ರಾಷ್ಟ್ರೀಯ ಪ್ರಜ್ಞೆ, ಶರಣಮ್ಮ ಗೋರೆಬಾಳ ಕನ್ನಡ ಸಾಹಿತ್ಯದಲ್ಲಿ ತಾಯಿ ವಿಷಯ ಮಂಡಿಸುವರು. ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸುವರು. 2.30ಕ್ಕೆ ಕವಿಗೋಷ್ಠಿ ನಡೆಯಲಿದೆ. ಆಕಾಶವಾಣಿ ನಿರ್ದೇಶಕ ಬಸು ಬೇವಿನಗಿಡದ ಉದ್ಘಾಟನೆ ನೆರೆವೇರಿಸುವರು. ಸಂಜೆ 4.30ಕ್ಕೆ 36 ದತ್ತಿ ದಾನಿಗಳಿಗೆ ಸನ್ಮಾನಿಸಲಾಗುವುದು ಎಂದು ಹೇಳಿದರು.

5 ಗಂಟೆಗೆ ಸಮಾರೋಪ ಸಮಾರೋಪ ಸಮಾರಂಭ ನಡೆಯಲಿದೆ. ಬೆಂಗಳೂರಿನ ವೀರಲೋಕ ಪಬ್ಲಿಕೇಶನ್ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ ಸಮಾರೋಪ ಭಾಷಣ ಮಾಡುವರು. ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಪ್ರಾಚ್ಯ ಶಾಸ್ತ್ರದ ಮುಖ್ಯಸ್ಥ ವೈ. ಎಂ. ಮುಗಳಿ, ಡಾ. ದ.ರಾ. ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಿ.ಎಂ. ಹಿರೇಮಠ ಪಾಲ್ಗೊಳ್ಳುವರು ಎಂದರು.

6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿವೆ ಎಂದರು.

ಮಾರ್ತಾಂಡಪ್ಪ ಕತ್ತಿ, ಎಫ್.ವಿ. ಕಣವಿ, ಶ್ರೀಧರ ಗಸ್ತಿ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.