ಹುಬ್ಬಳ್ಳಿ: ‘ಪಶ್ಚಿಮ ಬಂಗಾಳದಲ್ಲಿ ಕೊಲ್ಲುವ ರಾಜಕಾರಣ ನಡೆದಿದ್ದು, ಆತಂಕ ಸೃಷ್ಟಿಸಲಾಗುತ್ತಿದೆ. ಅಲ್ಲಿನ ಮಾಲ್ಡಾದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.
‘ದೇಶದಾದ್ಯಂತ ಕೇಂದ್ರ ಸರ್ಕಾರವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ನಡೆದಿದೆ’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಮಣಿಪುರದಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ ನಡೆದಿದೆ. ಹಿಂದಿನ ಸರ್ಕಾರಗಳ ತಪ್ಪು ನಿರ್ಣಯಗಳಿಂದ ನೆರೆಯ ರಾಷ್ಟ್ರಗಳಿಂದ ನುಸುಳುಕೋರರು ಈಶಾನ್ಯ ರಾಜ್ಯಗಳಿಗೆ ಬಂದಿದ್ದಾರೆ. ಅಂತಹವರನ್ನು ಹೊರಹಾಕುವ ಕೆಲಸ ಕೇಂದ್ರ ಸರ್ಕಾರದಿಂದ ನಿರಂತರ ನಡೆದಿದೆ. ಅದಕ್ಕೆ ಸಹಜವಾಗಿ ಆಕ್ರೋಶ ವ್ಯಕ್ತವಾಗಿ, ಸಂಘರ್ಷಕ್ಕೆ ಕಾರಣವಾಗುತ್ತದೆ’ ಎಂದರು.
‘ಈಶಾನ್ಯ ರಾಜ್ಯಗಳನ್ನು ಹಿಂದಿನ ಯುಪಿಎ ಸರ್ಕಾರ ಮತ್ತು 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ಮಾಡಿತು. ಇದರಿಂದ ಅಲ್ಲಿನ ಜನರು ಭಾರತವನ್ನು ಒಪ್ಪಿಕೊಂಡಿರಲಿಲ್ಲ. ಈಗ ಅವರು ಭಾರತವನ್ನು ತಮ್ಮ ದೇಶವೆಂದು ಒಪ್ಪಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳು ನಡೆದಿವೆ. ಇದನ್ನು ಸಹಿಸದವರು ಗಲಾಟೆ ಮಾಡುತ್ತಿದ್ದಾರೆ’ ಎಂದರು.
‘ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಮೂಡಿಸಲು ಕೇಂದ್ರ ಸರ್ಕಾರ ಬದ್ಧವಿದೆ. ಅವರ ಸಮಸ್ಯೆ ಮತ್ತು ಸೌಲಭ್ಯಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಿದೆ. ಆದರೆ, ವಿರೋಧ ಪಕ್ಷದವರು ಸಂಸತ್ತಿನಲ್ಲಿ ಚರ್ಚಿಸುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.