ಧಾರವಾಡ: ಸಮಾಜದ ಮುಖ್ಯವಾಹಿನಿಗೆ ಬರಲು ಹಾತೊರೆಯುತ್ತಿರುವ ತೃತೀಯ ಲಿಂಗಿಗಳು ಜಿಲ್ಲೆಯಲ್ಲಿ ಕೆಲವೇ ಸಂಖ್ಯೆಯಲ್ಲಿದ್ದರೂ, ಮತದಾನ ಪ್ರಮಾಣ ಶೇ 6ರಷ್ಟು ಎಂಬುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಲೈಂಗಿಕ ಅಲ್ಪಸಂಖ್ಯಾತರನ್ನು ಸುಪ್ರೀಂ ಕೋರ್ಟ್ 2014ರಲ್ಲಿ ತೃತೀಯ ಲಿಂಗಿಗಳು ಎಂದು ಕರೆಯಿತು. ಅದಾದ ನಂತರ ಅವರಿಗೂ ಮತದಾನದ ಹಕ್ಕನ್ನು ಕಲ್ಪಿಸಲಾಯಿತು. ಅದರಂತೆಯೇ ಜಿಲ್ಲೆಯಲ್ಲಿ ಈ ಬಾರಿ 89 ತೃತೀಯ ಲಿಂಗಿ ಮತದಾರರು ಮತದಾನದ ಹಕ್ಕನ್ನು ಪಡೆದಿದ್ದರು.
ಆದರೆ ನವಲಗುಂದ, ಕುಂದಗೋಳದಲ್ಲಿ ತಲಾ 2, ಹುಬ್ಬಳ್ಳಿ ಧಾರವಾಡ ಪೂರ್ವ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ ತಲಾ ಒಬ್ಬರು ಮಾತ್ರ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಆದರೆ ಉಳಿದ 83 ಜನ ಈ ಬಾರಿಯ ವಿಧಾನಸಭಾ ಚುನಾವಣೆಯ ಮತದಾನದಿಂದ ದೂರವೇ ಉಳಿದಿರುವುದಕ್ಕೆ ಸ್ವೀಪ್ ಸಮಿತಿಯೂ ಉತ್ತರ ಹುಡುಕುತ್ತಿದೆ.
ಮತಗಟ್ಟೆಗೆ ಬಂದವರಲ್ಲಿ ಹಲವರು ಮತದಾನದ ಹಕ್ಕು ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಜತೆಗೆ ಅವರನ್ನು ಸ್ವೀಪ್ ಸಮಿತಿ ಸಂಪರ್ಕಿಸಿ ಮತ ಹಾಕುವಂತೆ ಪ್ರೇರೇಪಿಸಿರುವ ಕುರಿತೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಹುಬ್ಬಳ್ಳಿ–ಧಾರವಾಡದಲ್ಲಿ ಅತಿ ಹೆಚ್ಚು, 39 ತೃತೀಯ ಲಿಂಗಿ ಮತದಾರರು ಇದ್ದಾರೆ. ಆದರೆ ಇಲ್ಲಿ ಒಬ್ಬರೂ ಮತದಾನ ಮಾಡಿಲ್ಲ. ಇದರೊಂದಿಗೆ ಧಾರವಾಡ ಹಾಗೂ ಕಲಘಟಗಿ ಕ್ಷೇತ್ರಗಳಲ್ಲೂ ತೃತೀಯ ಲಿಂಗಿ ಮತದಾರರ ಮತದಾನ ಪ್ರಮಾಣ ಶೂನ್ಯವೇ ಆಗಿದೆ.
ಬಹಳಷ್ಟು ತೃತೀಯ ಲಿಂಗಿಗಳು ಮತದಾನದಿಂದ ದೂರ ಉಳಿದಿರುವ ಕುರಿತು ಅನಿಸಿಕೆ ಹಂಚಿಕೊಂಡ ಇದೇ ಸಮುದಾಯದ ಸಮರ ಸಂಸ್ಥೆ ನಿರ್ದೇಶಕಿ ರಾಜರತ್ನಾ, ‘ಅಸಲಿಗೆ ಜಿಲ್ಲೆಯಲ್ಲಿ ಸುಮಾರು 250ರಷ್ಟು ತೃತೀಯ ಲಿಂಗಿಗಳು ಇದ್ದಾರೆ. ಆದರೆ ಅವರಲ್ಲಿ ಹಲವರು ಸಮಾಜದ ಭಯದಿಂದ, ಧಾರ್ಮಿಕ ಭಾವನೆಯಿಂದ, ಆಸ್ತಿಯ ಕಾರಣದಿಂದ ಯಾವ ದಾಖಲೆಯಲ್ಲೂ ತಮ್ಮನ್ನು ತೃತೀಯ ಲಿಂಗಿಗಳು ಎಂದು ನಮೂದಿಸಿಲ್ಲ. ಹೆಚ್ಚು ಜನ ಪುರುಷರಾಗಿಯೇ ಉಳಿದಿದ್ದಾರೆ’ ಎಂದು ತಿಳಿಸಿದರು.
‘ಹೀಗೆ ದಾಖಲೆಯಲ್ಲಿ ತೃತೀಯಲಿಂಗಿ ಅಲ್ಲದವರಲ್ಲಿ ಬಹುತೇಕರು ಈ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಆದರೆ ತೃತೀಯ ಲಿಂಗಿಗಳು ಎಂದು ಘೋಷಿಸಿಕೊಂಡವರಲ್ಲಿ ಹಲವರು ಬೆಂಗಳೂರಿನಲ್ಲಿ ಭಿಕ್ಷಾಟಣೆಯಲ್ಲಿ ತೊಡಗಿಕೊಂಡು ಬದುಕು ನಡೆಸುತ್ತಿದ್ದಾರೆ. ಅವರಲ್ಲಿ ಬಹುತೇಕರು ಮತದಾನಕ್ಕೆ ಜಿಲ್ಲೆಗೆ ಬಾರದ ಹಾಗೂ ಹೈದರಾಬಾದ್‌ನಲ್ಲಿ ಸಮುದಾಯದ ಒಂದು ಕಾರ್ಯಕ್ರಮ ನಡೆಯುತ್ತಿದ್ದು, ಅಲ್ಲಿಗೂ ಹೋಗಿರುವ ಸಾಧ್ಯತೆ ಇದೆ’ ಎಂದು ತಿಳಿಸಿದರು.
‘ನಗರದ ಸಾರಸ್ವತಪುರದಲ್ಲಿರುವ ಸಮರ ಸಂಸ್ಥೆಯಲ್ಲಿ ಪ್ರತಿ ತಿಂಗಳು ತೃತೀಯ ಲಿಂಗಿಗಳ ಸಭೆ ನಡೆಸುತ್ತೇವೆ. ಕಳೆದ ತಿಂಗಳು ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದ್ದೇವೆ. ಮತದಾನದಲ್ಲಿ ಎಲ್ಲರೂ ಭಾಗವಹಿಸುವಂತೆಯೂ ಅವರ ಮನವೊಲಿಸಲಾಯಿತು’ ಎಂದು ರಾಜರತ್ನಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.