ಹುಬ್ಬಳ್ಳಿ: ಬೇರೆಯವರಿಗೆ ಖೆಡ್ಡಾ ತೋಡಲು ಹೋದರೆ ತಾವೇ ಖೆಡ್ಡಾಕ್ಕೆ ಬೀಳುತ್ತಾರೆ ಎಂಬ ಮಾತಿನಂತೆ ರಾಜ್ಯ ಬಿಜೆಪಿಯ ಕಥೆಯೂ ಆಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದರು.
ನಗರದ ಬದಾಮಿ ನಗರದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ ನೀಡಿದ ಬಳಿಕ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹಿರಿಯ ನಾಯಕ ಶೆಟ್ಟರ್ ಸೇರಿದಂತೆ ಹಲವು ನಾಯಕರನ್ನು ಸೋಲಿಸಲು ಬಿಜೆಪಿಯ ಕೆಲವರು ಷಡ್ಯಂತ್ರ ಮಾಡಿದ್ದರು. ಅವರ ಷಡ್ಯಂತ್ರಕ್ಕೆ ಅವರೇ ಬಲಿಯಾಗಲಿದ್ದಾರೆ. ಬಿಜೆಪಿಯಲ್ಲಿರುವ ಕೆಲವೇ ಸಜ್ಜನ ರಾಜಕಾರಣಿಗಳನ್ನು ಹೊರ ಹಾಕುವ ಕೆಲಸ ನಡೆದಿದೆ. ಶೆಟ್ಟರ್ ಅವರು, ಆ ಷಡ್ಯಂತ್ರಕ್ಕೆ ಸೆಡ್ಡು ಹೊಡೆದು, ಕಾಂಗ್ರೆಸ್ ಗೆ ಬಂದಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬಂದಿದೆ. ಧಾರವಾಡ ಜಿಲ್ಲೆಯಷ್ಟೇ ಅಲ್ಲದೆ, ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದರು.
40 ಸೀಟಿಗೆ ಸೀಮಿತ: ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಹಾನಿಕಾರಕವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ 40 ಪರ್ಸೆಂಟ್ ಸರ್ಕಾರ 40 ಸೀಟುಗಳಿಗೆ ಸೀಮಿತವಾಗಲಿದೆ. ಬಿಜೆಪಿ ಲಿಂಗಾಯತ, ಒಕ್ಕಲಿಗ, ದಲಿತ ಸೇರಿದಂತೆ ಹಲವು ಸಮುದಾಯಗಳಿಗೆ ಅವಮಾನ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಜನರ ಮತ ಮತ್ತು ವಿಶ್ವಾಸವನ್ನು ಖರೀದಿಸುವ ಹುನ್ನಾರವನ್ನು ಬಿಜೆಪಿ ನಡೆಸಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಡಬಲ್ ಎಂಜಿನ್ ಸರ್ಕಾರ ಡಬಲ್ ದ್ರೋಹ ಮಾಡುತ್ತಿದೆ. ಹಾಗಾಗಿ, ಜನರು ಕಾಂಗ್ರೆಸ್ ಪಕ್ಷವನ್ನು ಬೆಬಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿಯಲ್ಲಿ ಸಿ.ಎಂ ಸ್ಥಾನಕ್ಕೆ ಪೈಪೋಟಿ: ಬಿಜೆಪಿಯಲ್ಲಿ ಬಿ.ಎಲ್. ಸಂತೋಷ್, ಪ್ರಲ್ಹಾದ ಜೋಶಿ, ಸಿ.ಟಿ. ರವಿ, ಮುರುಗೇಶ ನಿರಾಣಿ, ಶೋಭಾ ಕರಂದ್ಲಾಜೆ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ. ಆಗಾಗ ಬಿ.ಎಸ್.ಯಡಿಯೂರಪ್ಪ ಅವರ ಟ್ಯುಬ್ ಲೈಟ್ ಸಹ ಬೆಳಗುತ್ತೆ.ಬಿಜೆಪಿಗೆ 40 ಸೀಟು ಬರೋದು ಕಷ್ಟವಿದೆ ಎಂದರು.
ನಾವು ಪದವಿಗಾಗಿ ಹೋರಾಟ ಮಾಡ್ತಿಲ್ಲ.
ಸಿ.ಎಂ ವಿಚಾರ ಬಂದಾಗ ಪಕ್ಷದ ನಿಲುವು ಏನು ಎಂಬುದನ್ನು ದೆಹಲಿಯಲ್ಲಿ ನಮ್ಮ ನಾಯಕರು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ನವರು ರಾಜ್ಯ ಮತ್ತು ದೇಶದ ವಿಕಾಸಕ್ಕಾಗಿ ಹೋರಾಟ ಮಾಡುವ ಸಂಕಲ್ಪ ಮಾಡಿದ್ದಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.