ADVERTISEMENT

ವಿಧಾನಸಭೆ ಚುನಾವಣೆ: ಜಗದೀಶ ಶೆಟ್ಟರ್‌ ಸೋಲಿಸಲು ಯಡಿಯೂರಪ್ಪ ಕರೆ

ಕ್ಯೂಬಿಕ್ಸ್‌ ಹೋಟೆಲ್‌ನಲ್ಲಿ ನಡೆದ ವೀರಶೈವ ಲಿಂಗಾಯತರ ಸಭೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2023, 6:26 IST
Last Updated 26 ಏಪ್ರಿಲ್ 2023, 6:26 IST
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ಹುಬ್ಬಳ್ಳಿ ಕ್ಯೂಬಿಕ್ಸ್‌ ಹೋಟೆಲ್‌ನಲ್ಲಿ ಸಭೆ ನಡೆಯಿತು. /ಪ್ರಜಾವಾಣಿ ಚಿತ್ರ
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ಹುಬ್ಬಳ್ಳಿ ಕ್ಯೂಬಿಕ್ಸ್‌ ಹೋಟೆಲ್‌ನಲ್ಲಿ ಸಭೆ ನಡೆಯಿತು. /ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ನಗರದ ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ರಾತ್ರಿ ಹು–ಧಾ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ವೀರಶೈವ ಲಿಂಗಾಯತ ಸಮುದಾಯದವರ ಸಭೆ ನಡೆಸಿದರು. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿರುವ ಜಗದೀಶ ಶೆಟ್ಟರ್‌ ಅವರನ್ನು ಸೋಲಿಸಲು ಸಮುದಾಯದ ಮುಖಂಡರಿಗೆ ಕರೆ ನೀಡಿದರು.

‘ಶೆಟ್ಟರ್‌ ಪಕ್ಷಕ್ಕೆ ಮಾಡಿರುವ ದ್ರೋಹ ತಿಳಿಸಲೆಂದೇ ವೀರಶೈವ ಲಿಂಗಾಯತರನ್ನು ಆಹ್ವಾನಿಸಿದ್ದು’ ಎಂದು ಸಭೆಯಲ್ಲಿ ಮೂರು–ನಾಲ್ಕು ಬಾರಿ ಪುನರುಚ್ಚರಿಸಿದರು. ಪಕ್ಷದಲ್ಲಿ ಶೆಟ್ಟರ್‌ ಅವರಿಗೆ ಯಾವೆಲ್ಲ ಸಂದರ್ಭದಲ್ಲಿ, ಯಾವ್ಯಾವ ಸ್ಥಾನ ನೀಡಿ ನಾಯಕನನ್ನಾಗಿ ಮಾಡಲಾಗಿದೆ ಎಂದು ಎಳೆಎಳೆಯಾಗಿ ವಿವರಿಸಿ, ‘ಅವರು ಪಕ್ಷ ದ್ರೋಹಿಯಾಗಿ ಕಾಂಗ್ರೆಸ್‌ ಕೈ ಹಿಡಿದಿರುವುದು ಅಕ್ಷಮ್ಯ. ಅವರನ್ನು ಸೋಲಿಸುವುದೇ ಸಮಾಜದವರ ಗುರಿಯಾಗಬೇಕು’ ಎಂದು ವಿನಂತಿಸಿಕೊಂಡರು.

‘ಬುಧವಾರ ನಗರದಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ 10–15 ಸಾವಿರದಷ್ಟು ಮಂದಿ ಪಾಲ್ಗೊಳ್ಳಬೇಕು. ಪಕ್ಷದ ಪರವಾದ ಘೋಷಣೆ ಮನೆಯಲ್ಲಿ ಕುಳಿತಿರುವ ಶೆಟ್ಟರ್‌ಗೆ ಕೇಳಿ ನಡುಕ ಹುಟ್ಟಬೇಕು’ ಎಂದರು.

ADVERTISEMENT

ಯಡಿಯೂರಪ್ಪರ ಮಾತು ಮುಗಿಯುತ್ತಿದ್ದಂತೆ ಸಮುದಾಯದ ಮುಖಂಡರೊಬ್ಬರು, ‘ಯಡಿಯೂರಪ್ಪನವರೇ, ನೀವು ನಮ್ಮ ಸಮುದಾಯದ ದೊಡ್ಡ ನಾಯಕರು. ನೀವು ಒಂದು ಕರೆ ನೀಡಿದರೆ ಸಾಕು. ಅದನ್ನು ನಾವು ಶಿರಸಾ ವಹಿಸಿ ಪಾಲಿಸುತ್ತೇವೆ’ ಎಂದು ಹೇಳಿದಾಗ ಸಭೆಯಲ್ಲಿ ಕರತಾಡನ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಜಗದೀಶ ಶೆಟ್ಟರ್‌ ನಮಗೆ ಮಾದರಿ ವ್ಯಕ್ತಿಯಾಗಿದ್ದರು. ಈಗ ಅವರ ಎದುರಿಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮಹೇಶ ಟೆಂಗಿನಕಾಯಿ ಸ್ಪರ್ಧಿಸುತ್ತಿದ್ದಾರೆ. ನಿಮ್ಮ ಕೈಯ್ಯಲ್ಲಿ ಬೆಳೆದ ಹುಡುಗ ಅವರಾಗಿದ್ದು, ಎತ್ತಿ ಬೆಂಗಳೂರಿಗೆ ಕಳುಹಿಸುವುದು ನಿಮ್ಮ ಕೈಯ್ಯಲ್ಲಿದೆ’ ಎಂದರು.

‘ರಾಜಕೀಯಕ್ಕೆ ಹೊಸ ವ್ಯಕ್ತಿಗಳು ಬರಬೇಕು. ಮುಂಬರುವ ದಿನಗಳಲ್ಲಿ ವಿಶ್ವದ ಹಿರಿಯಣ್ಣ ಆಗಬೇಕು. ದೇಶದ ಸಂಸ್ಕೃತಿ ಬದಲಾಗಬೇಕೆಂದರೆ ಕರ್ನಾಟಕದ ಸಹಕಾರ ಸಹ ಅತಿ ಅಗತ್ಯ’ ಎಂದರು.

ಮಹೇಶ ಟೆಂಗಿನಕಾಯಿ ಮಾತನಾಡಿ, ‘ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಬಿಜೆಪಿ ಕಲಿಸಿದೆ. ನಾನು ಟಿಕೆಟ್ ಆಕಾಂಕ್ಷಿ ಸಹ ಆಗಿರಲಿಲ್ಲ. ಕಾರ್ಯಕರ್ತನಾದ ನನ್ನನ್ನು ಗುರುತಿಸಿ ಹು–ಧಾ ಸೆಂಟ್ರಲ್‌ ಕ್ಷೇತ್ರದ ಟಿಕೆಟ್‌ ನೀಡಿದೆ. ಈ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದ್ದು, ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ. ಮತದಾನದ ದಿನಕ್ಕೆ ಸಮಯ ಕಡಿಮೆಯಿರುವುದರಿಂದ ಎಲ್ಲ ಮತದಾರರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಸಭೆ ಮಾಡಲಾಗಿದೆ’ ಎಂದರು.

ಧಾರವಾಡ ಜಿಲ್ಲೆಯ ಬಹುತೇಕ ಎಲ್ಲ ಲಿಂಗಾಯತ ಮುಖಂಡರು, ಲಿಂಗಾಯತ ಸಮುದಾಯದ ಪದಾಧಿಕಾರಿಗಳು ಹಾಗೂ ಹು-ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ರಾಜಕೀಯದಿಂದ ದೂರವಿದ್ದು ಉದ್ಯಮ ಹಾಗೂ ಇನ್ನಿತರ ಕಾರ್ಯಕ್ಷೇತ್ರಗಳಲ್ಲಿ ನಿರತರಾಗಿದ್ದ ಲಿಂಗಾಯತ ಸಮಾಜದವರು ಸಹ ಭಾಗವಹಿಸಿದ್ದರು.

ಹು-ಧಾ ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿ ಕಿರಣ, ರಾಜಣ್ಣ ಕೊರವಿ, ಶಂಕ್ರಣ್ಣ ಮುನವಳ್ಳಿ, ಚನ್ನು ಹೊಸಮನಿ, ರಮೇಶ ಪಾಟೀಲ, ಶಿವಾನಂದ ಸಣ್ಣಕ್ಕಿ, ಬಸು ಸಣ್ಣಕ್ಕಿ, ಫಕ್ಕೀರಪ್ಪ ಬೂಸದ, ಸುರೇಶ ಕಿರೇಸೂರ, ಶಶಿ ಸಾಲಿ ಇದ್ದರು.

Cut-off box - ‘ಈಶ್ವರಪ್ಪ ಹೇಳಿಕೆ ವೈಯಕ್ತಿಕ’ ‘ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಸ್ಪಷ್ಟ ಬಹುಮತ ಪಡೆದು ಆಡಳಿತಕ್ಕೆ ಬರಲಿದೆ. ನಾಳೆ ಹುಬ್ಬಳ್ಳಿ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಸಭೆ ರ‍್ಯಾಲಿ ನಡೆಸಿ ಮತಯಾಚಿಸಲಾಗುವುದು’ ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿದರು. ‘ಮುಸ್ಲಿಂ ಮತಗಳು ಬೇಡ’ ನ್ನುವ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ಅದು ಈಶ್ವರಪ್ಪನವರ ವೈಯಕ್ತಿಕ ಹೇಳಿಕೆ. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಬಿಜೆಪಿಗೆ ಎಲ್ಲ ಸಮುದಾಯದವರ ಬೆಂಬಲವಿದೆ’ ಎಂದರು. ‘ಮುಂದಿನ ಮುಖ್ಯಮಂತ್ರಿ ಸಿ.ಟಿ. ರವಿ’ ಎನ್ನುವ ಈಶ್ವರಪ್ಪ ಅವರ ಹೇಳಿಕೆಗೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.