ಹುಬ್ಬಳ್ಳಿ: ‘ಬಿಜೆಪಿ ಪಕ್ಷವು ಹಿರಿಯರಿಗೆ ಗೌರವ ಕೊಡುತ್ತಿಲ್ಲ. ಹೀಗಾಗಿ, ಕಾಂಗ್ರೆಸ್ ಪಕ್ಷದ ಜಾತ್ಯತೀತ ಸಿದ್ಧಾಂತವನ್ನು ಒಪ್ಪಿಕೊಂಡು ಬಿಜೆಪಿ ನಾಯಕರು ನಮ್ಮ ಪಕ್ಷವನ್ನು ಸೇರುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಮಾಡಲು ಹೊರಟವರಿಗೆ ತಮ್ಮವರನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಟೀಕಿಸಿದರು.
ನಗರದ ಕಾರವಾರ ರಸ್ತೆಯ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಭಾನುವಾರ ಪಕ್ಷ ಸೇರಿದ ಎಐಎಂಐಎಂ ಪಕ್ಷದ ಮುಖಂಡ ಆಸಿಫ್ ಬಳ್ಳಾರಿ ಮತ್ತು ಇತರ ಮುಖಂಡರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿ ಅವರು ಮಾತನಾಡಿದರು.
‘ನೇರವಾಗಿ ಹೋರಾಡದೆ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ಹೀನ ಕೃತ್ಯ ನಡೆದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಜಾತಿ ಮತ್ತು ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವ ಪಕ್ಷಗಳಿಗೆ ತಕ್ಕ ಉತ್ತರ ನೀಡಬೇಕು’ ಎಂದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಯೂಸೂಫ್ ಖೈರಾತಿ, ಅಬ್ಬಾಸ ಕುಮಟಾಕರ, ಬಾಬಾಜಾನ್ ಟೋಕರಿ, ಇರ್ಫಾನ್ ರಾಮದುರ್ಗ, ಖಾದರ್ ನೀಲಗಾರ, ಆಸಿಫ್ ತಾಂಡೂರ, ನಾಸಿರ್ ಪಠಾಣ, ಗಂಗಾಧರ ದೊಡ್ಡವಾಡ, ಪ್ರಕಾಶ ಬುರಬುರೆ, ಶರೀಫ ಅದ್ವಾನಿ, ವೀರಣ್ಣ ಹಿರೇಹಾಳ, ಇನಾಯತ್‌ಖಾನ್ ಪಠಾಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.