ADVERTISEMENT

ಸಂದರ್ಶನ | ನವಲಗುಂದ ಕ್ಷೇತ್ರದ ಅಭ್ಯರ್ಥಿಗಳ ಕನಸು

ಪ್ರಜಾವಾಣಿ ವಿಶೇಷ
Published 27 ಏಪ್ರಿಲ್ 2023, 5:20 IST
Last Updated 27 ಏಪ್ರಿಲ್ 2023, 5:20 IST
ಕೆ.ಎನ್.ಗಡ್ಡಿ, ಎನ್‌.ಎಚ್‌. ಕೋನರಡ್ಡಿ, ಶಂಕರ ಪಾಟೀಲ ಮುನೇನಕೊಪ್ಪ
ಕೆ.ಎನ್.ಗಡ್ಡಿ, ಎನ್‌.ಎಚ್‌. ಕೋನರಡ್ಡಿ, ಶಂಕರ ಪಾಟೀಲ ಮುನೇನಕೊಪ್ಪ   

ರೈತರ ಬಂಡಾಯದ ನೆಲೆಯಾಗಿರುವ ನವಲಗುಂದ ಕ್ಷೇತ್ರದಲ್ಲಿ ಚುನಾವಣೆ ಬಿಸಿಯೇರಿದೆ. ಪ್ರಮುಖ ರಾಜಕೀಯಗಳ ಪಕ್ಷಗಳ ಅಭ್ಯರ್ಥಿಯಾಗಿರುವ ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ, ಕಾಂಗ್ರೆಸ್‌ನ ಎನ್‌.ಎಚ್‌. ಕೋನರಡ್ಡಿ, ಜೆಡಿಎಸ್‌ನ ಕೆ.ಎನ್‌. ಗಡ್ಡಿ ಕಣಕ್ಕಿಳಿದಿದ್ದಾರೆ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅವರು ಹೊಂದಿರುವ ಕನಸುಗಳ ಬಗ್ಗೆ, ಪರಿಕಲ್ಪನೆ ಬಗ್ಗೆ ‘ಪ್ರಜಾವಾಣಿ’ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಮತದಾರರು ಬಿಜೆಪಿ ಕೈಬಿಡಲ್ಲ: ಶಂಕರ ಪಾಟೀಲ ಮುನೇನಕೊಪ್ಪ

ಚುನಾವಣೆ ವಾತಾವರಣ ಹೇಗಿದೆ?

ADVERTISEMENT

ತುಂಬಾ ಒಳ್ಳೆಯ ವಾತಾವರಣ ಇದೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ನನಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಪ್ರಜ್ಞಾವಂತ ಮತದಾರರು ಬಿಜೆಪಿಯ ಕೈಬಿಡಲ್ಲ ಎನ್ನುವ ವಿಶ್ವಾಸವಿದೆ.

ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೀರಿ?

ಮಹದಾಯಿ ಯೋಜನೆ ತರಲು ಹೋರಾಟ ನಡೆಸಿದವರಲ್ಲಿ ನಾನೂ ಒಬ್ಬ. ಈ ಭಾಗದ ಜನರಿಗೆ ನೀರಿನ ಅವಶ್ಯಕತೆ ಇದೆ. ಜಮೀನಿಗೆ ನೀರು ಹರಿಸಲು ರೈತರಿಗೂ ಅವಶ್ಯಕತೆ ಇದೆ. ಅದಕ್ಕಾಗಿ ನಾವು ಹೋರಾಟ ನಡೆಸಿದ್ದೇವು. ಆಗ ಭರವಸೆ ಕೊಟ್ಟಂತೆ ನಾವು ಮಹದಾಯಿ ಯೋಜನೆಗೆ ಕೇಂದ್ರದಿಂದ ಅನುಮೋದನೆ ತಂದಿದ್ದೇವೆ. ಟೆಂಡರ್ ಕೂಡ ಕರೆದಿದ್ದೇವೆ. ಇದರ ಜೊತೆಗೆ ಪ್ರತಿ ಗ್ರಾಮಗಳಲ್ಲಿ ಶಾಲೆ ತೆರೆಯಲು ಆದ್ಯತೆ ನೀಡಿದ್ದೇನೆ. ಜಲಮಿಷನ್‌ ಯೋಜನೆಯಡಿ ಮನೆಮನೆಗೆ ನೀರು ತಲುಪಿಸುವ ಕೆಲಸ ಮಾಡುತ್ತಿದ್ದೇನೆ. ಇವೆಲ್ಲ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಮತಯಾಚಿಸುತ್ತಿದ್ದೇನೆ.

ಹಿಂದಿನ ಅವಧಿಯಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ ಮಾಡಿದ ಪ್ರಮುಖ ಕೆಲಸಗಳಾವವು?

ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಿಸಲು ಯೋಜನೆ ರೂಪಿಸಿದ್ದೇನೆ. ಅದಕ್ಕಾಗಿ 15 ಎಕರೆ ಜಮೀನು ಖರೀದಿಸಲಾಗಿದೆ. ಇದು ಪೂರ್ಣಗೊಂಡ ನಂತರ, ಸುಮಾರು 10 ಸಾವಿರ ಜನರಿಗೆ ಉದ್ಯೋಗಾವಕಾಶ ಸಿಗಲಿವೆ. ಇದಲ್ಲದೇ, ಈ ಕ್ಷೇತ್ರದಲ್ಲೊಂದು ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಅಗತ್ಯ ಕ್ರಮಕೈಗೊಂಡಿದ್ದೇನೆ. ಆರಂಭಿಕ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ. ಮುಖ್ಯ ಕಾಲುವೆಗಳನ್ನು ಪುನರ್‌ನಿರ್ಮಿಸಲಾಗಿದೆ. ಕಾಲುವೆಯ ಕೊನೆಯ ಭಾಗದ (ಟೇಲ್‌ಎಂಡ್‌) ಹೊಲಗಳಿಗೆ ನೀರು ಹಾಯಿಸಲು ಏತನೀರಾವರಿ ಯೋಜನೆ ಪೂರ್ಣಗೊಳಿಸಿದ್ದೇನೆ. ಇದರಿಂದ ಸುಮಾರು 10 ಸಾವಿರ ಎಕರೆ ಜಮೀನುಗಳಿಗೆ ನೀರು ಸಿಗುತ್ತಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ನವಿಲುತೀರ್ಥ ಜಲಾಶಯದಿಂದ ಸೈದಾಪುರ ಗ್ರಾಮಕ್ಕೆ ನೀರು ತರಲು ಪೈಪ್‌ ಅಳವಡಿಸುವ ಯೋಜನೆ ರೂಪಿಸಿದ್ದೇನೆ. ಮುಂಬರುವ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಗ್ರಾಮದ ಪ್ರತಿ ಮನೆಗೆ ನೀರು ತಲುಪಲಿದೆ. ತುಪ್ಪರಿ ಹಳ್ಳ ಪ್ರವಾಹ ನಿಯಂತ್ರಣ ಯೋಜನೆ ರೂಪಿಸಿದ್ದೇನೆ.

ಮೀಸಲಾತಿ ಪ್ರಮಾಣದ ಮರುವರ್ಗೀಕರಣ ಲಾಭವಾಗಲಿದೆಯೇ?

ಎಲ್ಲ ಜಾತಿಗಳ ಜನರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಯಾರಿಗೂ ಅನ್ಯಾಯ ಮಾಡಿಲ್ಲ. ಇದು ಪಕ್ಷಕ್ಕೆ ಪ್ಲಸ್‌ ಪಾಯಿಂಟ್‌ ಆಗಲಿದೆ.

 ನಿಮಗೆ ಯಾರು ಪ್ರತಿಸ್ಪರ್ಧಿ?

ಮತದಾರರು ಪ್ರಜ್ಞಾವಂತರಾಗಿದ್ದಾರೆ. ಅವರೇ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಅನ್ನು ಈಗಾಗಲೇ ಕ್ಷೇತ್ರದ ಜನರು ತಿರಸ್ಕರಿಸಿದ್ದಾರೆ. 

ನನ್ನ ಕೆಲಸಗಳನ್ನು ಜನ ಮರೆತಿಲ್ಲ: ಎನ್‌.ಎಚ್‌. ಕೋನರಡ್ಡಿ

ಚುನಾವಣಾ ಕಣ ಹೇಗಿದೆ?

ಬಿಜೆಪಿ ವಿರೋಧಿ ಅಲೆ ಎಲ್ಲೆಡೆ ಕಾಣುತ್ತಿದೆ. ಬಿಜೆಪಿ ಸರ್ಕಾರ ನಡೆಸಿದ ಜನವಿರೋಧಿ ಆಡಳಿತಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಲಾಭ ಕಾಂಗ್ರೆಸ್‌ಗೆ ಸಿಗಲಿದೆ. ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ ಕೈ ಹಿಡಿಯಲಿದ್ದಾರೆ.

ಜನರು ನಿಮಗೆ ಏಕೆ ಮತ ಹಾಕಬೇಕು?

ನಾನು 2013–18ರ ಅವಧಿಯಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದೆ. ಆಗ ಕ್ಷೇತ್ರದ ಅಭಿವೃದ್ಧಿಗಾಗಿ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿದ್ದೆ. ಆಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಅವರ ನೆರವಿನಿಂದ ಸುಮಾರು ₹ 3,300 ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ಮಂಜೂರು ಮಾಡಿಸಿದ್ದೆ. ಆಶ್ರಯ ಮನೆಗಳನ್ನು ನಿರ್ಮಿಸಲು 41 ಎಕರೆ ಜಾಗ ಖರೀದಿಸಿ, ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದೆ. ಅಣ್ಣಿಗೇರಿಗೆ ಕುಡಿಯುವ ನೀರು ಪೂರೈಸಲು 76 ಎಕರೆ ಜಾಗವನ್ನು ಖರೀದಿಸಿ, ಚೆಕ್‌ಡ್ಯಾಂ ನಿರ್ಮಿಸಿದ್ದೆ. ಇವೆಲ್ಲ ಕೆಲಸಗಳನ್ನು ಜನರು ಇನ್ನೂ ಮರೆತಿಲ್ಲ. ಇವುಗಳನ್ನು ನೋಡಿ ಮತ ಹಾಕುತ್ತಾರೆ ಎನ್ನುವ ವಿಶ್ವಾಸ ನನಗಿದೆ.

ನಿಮಗಿರುವ ಪ್ಲಸ್‌ ಪಾಯಿಂಟ್‌ ಯಾವುದು?

ನಾನು ಕ್ಷೇತ್ರದಲ್ಲಿಯೇ ವಾಸವಾಗಿದ್ದೇನೆ. ಯಾವಾಗಲೂ ದಿನದ 24ಗಂಟೆಯೂ ಜನರಿಗೆ ಸಿಗುತ್ತೇನೆ. ಜನ ಯಾವುದೇ ಕ್ಷಣದಲ್ಲಿಯಾದರೂ ಬಂದು ನನ್ನನ್ನು ಭೇಟಿಯಾಗಬಹುದು. ಅವರ ಕಷ್ಟ–ಸುಖಗಳನ್ನು ನನ್ನೊಂದಿಗೆ ಹಂಚಿಕೊಳ್ಳಬಹುದು.

ಚುನಾವಣೆಯಲ್ಲಿ ನಿಮಗೆ ಯಾರು ಪ್ರತಿಸ್ಪರ್ಧಿ, ಬಿಜೆಪಿ ಅಥವಾ ಜೆಡಿಎಸ್‌?

ಬಿಜೆಪಿಯೇ ನನ್ನ ಎದುರಾಳಿ. ಪ್ರಸ್ತುತ ಶಾಸಕರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರು ನವಲಗುಂದದಲ್ಲಿ ಇರುವುದಿಲ್ಲ. ಜನರ ಕೈಗೆ ಸಿಗುವುದಿಲ್ಲ. ಜನರಿಗೆ ಸ್ಪಂದಿಸುವುದಿಲ್ಲ. ಹೆಚ್ಚೇನೂ ಹೇಳಲ್ಲ. ಜೆಡಿಎಸ್‌ ಅಭ್ಯರ್ಥಿ ಗಡ್ಡಿ ಅವರ ಬಗ್ಗೆ ಏನೂ ಮಾತನಾಡಲ್ಲ. ನಾನು ಜನಸೇವಕನಾಗಿದ್ದೇನೆ. ಜನರ ಸೇವೆ ಮಾಡಲು ಬಯಸಿದ್ದೇನೆ. ಜನ ಅವಕಾಶ ನೀಡುವರು ಎನ್ನುವ ವಿಶ್ವಾಸ ನನಗಿದೆ.

ಕ್ಷೇತ್ರದಲ್ಲಿರುವ ಪ್ರಮುಖ ಸಮಸ್ಯೆಗಳೇನು?

ಮಹದಾಯಿ ಯೋಜನೆ ಇನ್ನೂ ಆರಂಭವಾಗಿಯೇ ಇಲ್ಲ. ಬಿಜೆಪಿ ಕರೆದಿರುವ ಟೆಂಡರ್‌ ಬೋಗಸ್‌ ಆಗಿದೆ. ಅದಕ್ಕಾಗಿಯೇ ಚುನಾವಣೆ ಆಯೋಗವು ತಡೆಯಾಜ್ಞೆ ನೀಡಿದೆ. ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿವೆ.

‘ಪಂಚರತ್ನ’ ಭರವಸೆಗಳೇ ಕೈಹಿಡಿಯಲಿವೆ: ಕೆ.ಎನ್‌. ಗಡ್ಡಿ

ಚುನಾವಣಾ ಕಣ ಹೇಗಿದೆ?

2018ರ ವೇಳೆ ನನಗೆ ಕಾಂಗ್ರೆಸ್‌ ಟಿಕೆಟ್‌ ತಪ್ಪಿತ್ತು. ಆಗ ಸುಮ್ಮನಿದ್ದೆ. ಈ ಸಲವೂ ಕಾಂಗ್ರೆಸ್‌ ಟಿಕೆಟ್‌ ನೀಡದೇ ಇದ್ದಾಗ ನಾನು ನಿರ್ಲಿಪ್ತನಾಗಿದ್ದೆ. ಆದರೆ, ನನ್ನ ಕ್ಷೇತ್ರದ ಜನ, ಕಾರ್ಯಕರ್ತರು ಮತ್ತೆ ಸ್ಪರ್ಧಿಸುವಂತೆ ಒತ್ತಾಯಿಸಿದರು. ಅವರ ಸಲಹೆಯ ಮೇರೆಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಸವದತ್ತಿಗೆ ಹೋಗಿ ಭೇಟಿಯಾದೆ. ಆ ಕ್ಷಣಕ್ಕೆ ನನಗೆ ಬಿ ಫಾರಂ ಕೊಟ್ಟು, ಸ್ಪರ್ಧಿಸುವಂತೆ ಸೂಚಿಸಿದರು. ಮರಳಿ ಬಂದ ನಂತರ ಸ್ಥಳೀಯ ಮುಖಂಡರು, ಕಾರ್ಯಕರ್ತರ ಜೊತೆ ಮಾತನಾಡಿ ನಾಮಪತ್ರ ಸಲ್ಲಿಸಿದ್ದೇನೆ. ಎಲ್ಲೆಡೆ ಪ್ರಚಾರ ನಡೆಸಿದ್ದೇನೆ. ಎಚ್‌.ಡಿ.ಕುಮಾರಸ್ವಾಮಿ ಈಗಾಗಲೇ ನೀಡಿರುವ ಪಂಚರತ್ನ ಭರವಸೆಗಳು ನನ್ನ ಕೈ ಹಿಡಿಯುವವು ಎನ್ನುವ ವಿಶ್ವಾಸ ನನಗಿದೆ.

ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೀರಿ?

ನಾನು ಎರಡು ಸಲ ಕ್ಷೇತ್ರದ ಶಾಸಕನಾಗಿದ್ದೆ. ಒಂದು ಬಾರಿ ಸಚಿವನಾಗಿಯೂ ಕೆಲಸ ಮಾಡಿದ್ದೆ. ರಸ್ತೆ, ವಿದ್ಯುತ್‌, ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮಕೈಗೊಂಡೆ. ನನ್ನ ಅಧಿಕಾರದ ಅವಧಿಯಲ್ಲಿ ಬೆಣ್ಣೆ ಹಳ್ಳಕ್ಕೆ ಸೇತುವೆ ನಿರ್ಮಾಣ, ನವಲಗುಂದ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ, ಪ್ರತಿ ಗ್ರಾಮಕ್ಕೂ ಆಶ್ರಯ ಮನೆಗಳು, ಕೆರೆಗಳನ್ನು ನಿರ್ಮಿಸಿದ್ದೆ. ಹಳ್ಳಿ ಹಳ್ಳಿಗೂ ರಸ್ತೆ ಸಂಪರ್ಕ ಕಲ್ಪಿಸಿದ್ದೆ. ಆ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಇಟ್ಟುಕೊಂಡು ಮತ ಕೇಳುತ್ತಿದ್ದೇನೆ. 

ಸತತ ವಿದ್ಯುತ್ ತೊಂದರೆ ಅನುಭವಿಸುತ್ತಿದ್ದ ಪಟ್ಟಣಕ್ಕೆ 110 ಕೆ.ವಿ.ವಿದ್ಯುತ್ ಸರಬರಾಜು ಕೇಂದ್ರವನ್ನು ಸ್ಥಾಪಿಸಿದ್ದೆ. ಮಿನಿ ವಿಧಾನಸೌಧ ಕಟ್ಟಡ ನಿರ್ಮಿಸಿದ್ದೆ. ಬಸ್‌ ನಿಲ್ದಾಣ ನಿರ್ಮಿಸಲು ಜಮೀನು ಖರೀದಿಸಲಾಗಿತ್ತು.

ನಿಮಗೆ ಯಾರು ಪ್ರತಿಸ್ಪರ್ಧಿ?

ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಕಣದಲ್ಲಿ ಇರುವ ಎಲ್ಲರೂ ನನಗೆ ಪ್ರತಿಸ್ಪರ್ಧಿಯಾಗಿದ್ದಾರೆ. ಮತದಾರರು ಯಾರ ಕೈ ಹಿಡಿಯುತ್ತಾರೆಯೋ ಅವರು ಗೆದ್ದಂತೆ.

ಮತದಾರರಿಗೆ ಏನು ಭರವಸೆ ನೀಡುತ್ತೀರಿ?

ಅಧಿಕಾರ ಬಂದಮೇಲೆಯೇ ಹೊಸ ಹೊಸ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಮಹದಾಯಿ ನೀರು ತರಲು ಎಲ್ಲ ಅಗತ್ಯ ಕ್ರಮಕೈಗೊಳ್ಳುವೆ. ನೀರು, ರಸ್ತೆ ಸೇರಿದಂತೆ ಮೂಲಸೌಕರ್ಯಕ್ಕೆ ಮಹತ್ವ ನೀಡುವೆ. ಎಲ್ಲ ಗ್ರಾಮಗಳಿಗೆ ಶಾಲೆ– ಕಾಲೇಜು ತೆರೆಯುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.