ಹುಬ್ಬಳ್ಳಿ: ನವಜಾತ ಶಿಶುಗಳ ಅನುಕೂಲಕ್ಕಾಗಿ ನಗರದ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ (ಕೆಎಂಸಿ–ಆರ್‌ಐ) ಸ್ಥಾಪಿಸಲಾಗಿರುವ ‘ಜೀವಾಮೃತ’ ತಾಯಿಯ ಎದೆಹಾಲು ಸಂಗ್ರಹ ಕೇಂದ್ರಕ್ಕೆ ಈವರೆಗೆ 1,027 ತಾಯಂದಿರು ಎದೆಹಾಲು ನೀಡಿದ್ದಾರೆ.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್, ರೋಟರಿ ಕ್ಲಬ್ ಆಫ್ ಕೊಪೆಲ್ (ಯುಎಸ್‌ಎ), ರೋಟರಿ ಇಂಟರ್‌ನ್ಯಾಷನಲ್ ವತಿಯಿಂದ ಕೆಎಂಸಿ–ಆರ್‌ಐನ ಚಿಕ್ಕ ಮಕ್ಕಳ ವಿಭಾಗದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಪ್ರಸಕ್ತ ವರ್ಷ ಏಪ್ರಿಲ್ 12ರಂದು ಕೇಂದ್ರ ಉದ್ಘಾಟನೆಯಾಗಿದ್ದು, ಏಪ್ರಿಲ್ 20ರಿಂದ ಎದೆ ಹಾಲು ಸಂಗ್ರಹ ಆರಂಭಿಸಲಾಗಿದೆ.
ಈವರೆಗೆ ಒಟ್ಟು 228.305 ಲೀಟರ್ ಎದೆಹಾಲು ಸಂಗ್ರಹವಾಗಿದ್ದು, ಅದರಲ್ಲಿ 201.42 ಲೀಟರ್ ಹಾಲನ್ನು ಪಾಶ್ಚರೈಸ್ ಮಾಡಿ, ಅವಧಿ ಪೂರ್ವ ಜನಿಸಿದ ಶಿಶುಗಳು ಸೇರಿದಂತೆ, ಒಟ್ಟು 136 ಶಿಶುಗಳಿಗೆ (191.13 ಲೀಟರ್) ನೀಡಲಾಗಿದೆ. ಪ್ರತಿ ಮಗುವಿಗೆ ಪ್ರತಿ ದಿನಕ್ಕೆ 100ರಿಂದ 120 ಮಿಲಿ ಲೀಟರ್ ಹಾಲು ನೀಡಲಾಗುತ್ತದೆ. ದಿನಕ್ಕೆ 2–3 ಲೀಟರ್ ಹಾಲು ಬೇಕಾಗುತ್ತದೆ.
‘ಕೆಎಂಸಿ–ಆರ್‌ಐನಲ್ಲಿ ಪ್ರತಿ ದಿನ 20ಕ್ಕೂ ಹೆಚ್ಚು ಶಿಶುಗಳು ಜನಿಸುತ್ತವೆ. ಅವಧಿಪೂರ್ವ ಜನಿಸಿದ ಕಾರಣಕ್ಕೆ ಶಿಶುಗಳಿಗೆ ಉಸಿರಾಟದ ತೊಂದರೆ, ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆ ಕಂಡುಬರುತ್ತದೆ. ಅಂತಹ ಶಿಶುಗಳಿಗೆ ನೇರವಾಗಿ 3–7 ದಿನಗಳವರೆಗೆ ತಾಯಿಯ ಎದೆಹಾಲು ಕುಡಿಯಲು ಸಾಧ್ಯವಾಗುವುದಿಲ್ಲ. ಅಂತಹ ತಾಯಂದಿರಿಂದ ಎದೆಹಾಲು ಸಂಗ್ರಹಿಸಲಾಗುತ್ತದೆ’ ಎಂದು ಜೀವಾಮೃತ ಯೋಜನೆಯ ಸಂಚಾಲಕ ಪ್ರೊ. ಪ್ರಕಾಶ ವಾರಿ ತಿಳಿಸಿದರು.
ಹೆರಿಗೆ ನಂತರ ಕೆಲವು ತಾಯಂದಿರಿಗೆ ರಕ್ತದೊತ್ತಡ ಸೇರಿದಂತೆ ಇನ್ನಿತರ ಕಾರಣಗಳಿಂದ ಎದೆಹಾಲು ಬರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಈ ರೀತಿ ಸಂಗ್ರಹಿಸಿದ ಎದೆಹಾಲನ್ನು ಶಿಶುಗಳಿಗೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈಚೆಗೆ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಹೆರಿಗೆ ನಂತರ ಅವರು ರಕ್ತದೊತ್ತಡ ಹೆಚ್ಚಾಗಿ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಯಿತು. ಅವರು ಚೇತರಿಸಿಕೊಂಡರೂ ಎದೆಹಾಲು ಬರುತ್ತಿರಲಿಲ್ಲ. ಹೀಗಾಗಿ ಶಿಶುಗಳಿಗೆ 20 ದಿನಗಳವರೆಗೆ ದಾನಿಗಳಿಂದ ಸಂಗ್ರಹಿಸಿದ್ದ ಎದೆಹಾಲು ನೀಡಲಾಯಿತು ಎಂದು ಅವರು ತಿಳಿಸಿದರು.
ಎದೆಹಾಲು ನೀಡಿದರೆ ತಾಯಿಯ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಕೆಲವರು ಸ್ವಯಂಪ್ರೇರಿತವಾಗಿ ಎದೆಹಾಲು ನೀಡುತ್ತಿದ್ದಾರೆ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗುವುದು.–ಡಾ.ಎಸ್.ಎಫ್.ಕಮ್ಮಾರ, ನಿರ್ದೇಶಕ ಕೆಎಂಸಿಆರ್‌ಐ
ಬೇರೆ ಕಡೆಯೂ ನೀಡಲು ಚಿಂತನೆ
ಬೇರೆ ಸರ್ಕಾರಿ ಖಾಸಗಿ ಆಸ್ಪತ್ರೆಗಳಿಂದಲೂ ಎದೆಹಾಲಿಗೆ ಬೇಡಿಕೆ ಬರುತ್ತಿದೆ. ಸದ್ಯ ನಮ್ಮ ಆಸ್ಪತ್ರೆಯಲ್ಲಿ ಜನಿಸಿದ ಶಿಶುಗಳಿಗೆ ಮಾತ್ರ ಇಲ್ಲಿ ಸಂಗ್ರಹಿಸಲಾದ ಎದೆಹಾಲು ಸಾಕಾಗುತ್ತಿದೆ. ಹೀಗಾಗಿ ಬೇರೆ ಕಡೆ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಸಂಚಾರಿ ವಾಹನದ ಮೂಲಕ ಎದೆಹಾಲು ಸಂಗ್ರಹಿಸುವ ಚಿಂತನೆ ಇದ್ದು ಅಗತ್ಯ ಇರುವ ಕಡೆಗೂ ನೀಡುವ ಉದ್ದೇಶ ಇದೆ ಎನ್ನುತ್ತಾರೆ ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್ ಕಮ್ಮಾರ.
ಮಗುವಿಗೆ ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಕೆಲವು ಕಾರಣಗಳಿಂದ ಮಕ್ಕಳಿಗೆ ಎದೆಹಾಲು ಸಿಗುವುದಿಲ್ಲ. ಇದರಿಂದ ತೂಕ ಇಳಿಕೆ ಅಪೌಷ್ಟಿಕತೆಯಿಂದ ಬಳಲುವ ಸಾಧ್ಯತೆ ಇರುತ್ತದೆ. ಹೀಗಾಗಿ ಶಿಶುಗಳಿಗೆ ತಾಯಿ ಹಾಲು ಕೊಡಲು ‘ಜೀವಾಮೃತ’ ಕೇಂದ್ರ ಸಹಕಾರಿಯಾಗಿದೆ ಎಂದು ಹೇಳಿದರು.
ತಾಯಿ ಎದೆ ಹಾಲು ಕೊಡದಿದ್ದರೆ ಹಾಲು ಉತ್ಪತ್ತಿಯಾಗುವುದು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದನ್ನು ಸಂಗ್ರಹ ಮಾಡಲಾಗುತ್ತದೆ. ಕೆಲವು ತಾಯಂದಿರು ತಾವೇ ಸ್ವಯಂಪ್ರೇರಿತವಾಗಿ ಹಾಲು ದಾನ ಮಾಡಿದ್ದಾರೆ. ಈಚೆಗೆ ಶಿಶು ಜನಿಸಿದ 2–3 ದಿನಕ್ಕೆ ಸಾವನ್ನಪ್ಪಿತ್ತು. ಆಗ ತಾಯಿ ಬೇರೆ ಮಕ್ಕಳ ಅನುಕೂಲಕ್ಕಾಗಿ 15–20 ದಿನ ಕೇಂದ್ರಕ್ಕೆ ಬಂದು ಎದೆ ಹಾಲು ನೀಡಿ ಹೋಗಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.