ಹುಬ್ಬಳ್ಳಿ: 'ಕಾಂಗ್ರೆಸ್ ಶಾಸಕರೇನು ಕುರಿ, ಕೋಣ, ಕತ್ತೆಗಳೇ? ತನಗೆ ಹಣ ಕೊಟ್ಟು ಖರೀದಿಸಲು ಬಂದಿದ್ದರು ಎಂದು ಒಬ್ಬ ಶಾಸಕರಾದರೂ ಹೇಳಿದ್ದಾರೆಯೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿಯಿಂದ ಮಾತನಾಡಬೇಕು' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.
'ಸರ್ಕಾರ ಬೀಳಿಸಲು ಬಿಜೆಪಿ ಶಾಸಕರನ್ನು ಹಣಕೊಟ್ಟು ಖರೀದಿಸಲು ಯತ್ನಿಸುತ್ತಿದೆ' ಎನ್ನುವ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ಸಿಎಂ ತಮ್ಮ ಮತ್ತು ಸರ್ಕಾರದ ಮೇಲಿರುವ ಆರೋಪಗಳ ವಿಷಯಾಂತರಕ್ಕೆ ಹೀಗೆಲ್ಲ ಅಸಂಬದ್ಧ ಅವಿವೇಕದ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹುಚ್ಚುತನದ ಮಾತುಗಳು ಪ್ರಜಾಪ್ರಭುತ್ವದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ' ಎಂದು ಅಸಮಧಾನ ವ್ಯಕ್ತಪಡಿಸಿದರು.
'ಬಿಜೆಪಿ ₹50 ಕೋಟಿ ಆಫರ್ ನೀಡಿದೆ ಎಂದು ಅಥವಾ ಮಧ್ಯವರ್ತಿಯ ಹೆಸರನ್ನು ಕಾಂಗ್ರೆಸ್ಸಿನ ಒಬ್ಬ ಶಾಸಕರಾದರೂ ಹೇಳಿದ್ದಾರೆಯೇ? ಕುರಿ, ಕೋಣಗಳನ್ನು ಮಾತ್ರ ಮಾರಾಟ ಮಾಡುತ್ತಾರೆ, ಶಾಸಕರನ್ನು ಯಾರೂ ಮಾರಾಟ ಮಾಡುವುದಿಲ್ಲ. ಸಿ.ಎಂ ಹಾಗೂ ಮತ್ತವರ ತಂಡದ ಆರೋಪ ನೋಡಿದರೆ ಕಾಂಗ್ರೆಸ್ ಶಾಸಕರನ್ನು ಇವರು ಮಾರುಕಟ್ಟೆಯಲ್ಲಿ ಇಟ್ಟಂತೆ ಕಾಣುತ್ತದೆ' ಎಂದು ವ್ಯಂಗ್ಯವಾಡಿದರು.
'ಒಬ್ಬೊಬ್ಬ ಶಾಸಕರಿಗೆ ₹50 ಕೋಟಿ ಅಂದರೆ, 50 ಶಾಸಕರಿಗೆ ₹2,500 ಕೋಟಿ ಆಗುತ್ತದೆ. ಸಿದ್ದರಾಮಯ್ಯ ಅವರಿಗೆ ಸ್ವಲ್ಪವಾದರೂ ಜ್ಞಾನವಿದೆಯೇ' ಎಂದು ಪ್ರಶ್ನಿಸಿದ ಸಚಿವ ಜೋಶಿ, 'ರಾಜಕಾರಣ ಮಾಡಬೇಕೆಂಬ ಕಾರಣಕ್ಕೆ ವ್ಯಾಪ್ತಿಮೀರಿ ಮಾತನಾಡುವುದು ಸರಿಯಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.