ಹುಬ್ಬಳ್ಳಿ: ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣ, ಲಂಚ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಎರಡನೇ ಹಂತದ ಜನಚೈತನ್ಯ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏಪ್ರಿಲ್ 11ರಿಂದ ಮೊದಲ ಹಂತದ ಜನಚೈತನ್ಯ ಯಾತ್ರೆ ಆರಂಭಿಸಿ 11ಜಿಲ್ಲೆಗಳಲ್ಲಿ ಸಂಚರಿಸಲಾಗಿತ್ತು. ಎರಡನೇ ಹಂತದ ಯಾತ್ರೆಯನ್ನು ಜುಲೈ 15ರಿಂದ ಆರಂಭಿಸಲಾಗಿದ್ದು, 15 ಜಿಲ್ಲೆಗಳಲ್ಲಿ ಸಂಚರಿಸಲಾಗುವುದು’ ಎಂದರು.
‘ಜುಲೈ 21ರಂದು ನವಲಗುಂದ– ನರಗುಂದ ರೈತ ಹುತಾತ್ಮ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲ ಜಿಲ್ಲೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ’ ಎಂದರು.
‘2023ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಈಗಾಗಲೇ 50 ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಮುಂಬರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಸಮಾನ ಮನಸ್ಕ ಪಕ್ಷಗಳೊಂದಿಗೆ ಕೈಜೋಡಿಸುವ ಕುರಿತು ಚಿಂತನೆ ನಡೆಯುತ್ತಿದೆ’ ಎಂದು ತಿಳಿಸಿದರು.
‘ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕೊನೆಗೊಳಿಸಲು ಪಕ್ಷವು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಇನ್ನು ಮುಂದೆ ಸಾರ್ವಜನಿಕರು ಈ ಹೋರಾಟವನ್ನು ಮುಂದುವರಿಸಬೇಕು. ಪಾಲಿಸ್ಟರ್ ಧ್ವಜ ಬಳಕೆಗೆ ಸರ್ಕಾರ ಅನುಮತಿ ನೀಡಿದ್ದು ಖಂಡನೀಯ. ಖಾದಿಗೆ ತನ್ನದೇ ಆದ ಮಹತ್ವ ಇದೆ. ಇದರಿಂದ ಸಾಕಷ್ಟು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಪಾಲಿಸ್ಟರ್ ಧ್ವಜ ಖಂಡಿಸಿ ಜನರು ಹೋರಾಟಕ್ಕೆ ಮುಂದಾದರೆ ಅವರಿಗೆ ಬೆಂಬಲ ನೀಡಲಾಗುವುದು’ ಎಂದರು.
ಸುಮಿತ್ರಾ ಹಳ್ಳಿಕೇರಿ, ಎಸ್.ಎಚ್.ಲಿಂಗೇಗೌಡ, ಬಸಣ್ಣ, ಮಹೇಶ ಇದ್ದರು.
ಕಚೇರಿಯಲ್ಲಿ ಅವ್ಯವಸ್ಥೆ; ಪ್ರತಿಭಟನೆ
ಹುಬ್ಬಳ್ಳಿ: ‘ನಗರ ಮತ್ತು ಗ್ರಾಮೀಣ ತಹಶೀಲ್ದಾರ್ ಕಚೇರಿಗಳಲ್ಲಿ ಅವ್ಯವಸ್ಥೆ ಹೆಚ್ಚುತ್ತಿದ್ದು, ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ. ಕೂಡಲೇ ದೋಷಗಳನ್ನು ಸರಿಪಡಿಸಿಕೊಂಡು ಸಾರ್ವಜನಿಕರಿಗೆ ತ್ವರಿತ ಸೇವೆ ನೀಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸದಸ್ಯರು ಇಲ್ಲಿನ ಮಿನಿವಿಧಾನಸೌಧದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
‘ಸರ್ಕಾರಿ ಹಾಗೂ ಹೊರಗುತ್ತಿಗೆ ನೌಕರರು ಗುರುತಿನ ಚೀಟಿಯಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿಯೊಂದು ವಿಭಾಗದಲ್ಲೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಅಧಿಕಾರಿಗಳ ಬಳಿ ಇರುವ ಸರ್ಕಾರಿ ದಾಖಲೆ ಪತ್ರಗಳು ಅವರ ಬಳಿ ಕಂಡು ಬರುತ್ತಿವೆ. ಕರ್ತವ್ಯದ ವೇಳೆ ಸಿಬ್ಬಂದಿ ಕಚೇರಿಯಲ್ಲಿರದೆ ಎಲ್ಲೆಲ್ಲಿಯೋ ಇರುತ್ತಾರೆ. ಉದ್ದೇಶ ಪೂರ್ವಕವಾಗಿ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡುತ್ತಿದ್ದಾರೆ’ ಎಂದು ಆರೋಪಿಸಿ, ಲೋಪದೋಷಗಳ ಪಟ್ಟಿಯನ್ನು ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ಅವರಿಗೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.