ADVERTISEMENT

ವಿಶ್ವವಿದ್ಯಾಲಯಳಿಗೆ ಕುಲಪತಿ ನೇಮಕ: ರಚನೆಯಾಗದ ಶೋಧನಾ ಸಮಿತಿ

ಬಿ.ಜೆ.ಧನ್ಯಪ್ರಸಾದ್
Published 27 ನವೆಂಬರ್ 2024, 0:20 IST
Last Updated 27 ನವೆಂಬರ್ 2024, 0:20 IST
ಕರ್ನಾಟಕ ವಿಶ್ವವಿದ್ಯಾಲಯ (ಪ್ರಾತಿನಿಧಿಕ ಚಿತ್ರ)
ಕರ್ನಾಟಕ ವಿಶ್ವವಿದ್ಯಾಲಯ (ಪ್ರಾತಿನಿಧಿಕ ಚಿತ್ರ)   

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ, ಮಂಡ್ಯ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ಸರ್ಕಾರವು ಶೋಧನಾ ಸಮಿತಿಗಳನ್ನು ಇನ್ನೂ ರಚಿಸಿಲ್ಲ. ಕುಲಪತಿಗಳ ನೇಮಕ ಆಗದ ಕಾರಣ ಈ ವಿಶ್ವವಿದ್ಯಾಲಯಗಳಲ್ಲಿ ಹಲವು ಪ್ರಕ್ರಿಯೆಗಳು ನನೆಗುದಿಗೆ ಬಿದ್ದಿವೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಎರಡು ತಿಂಗಳ ಹಿಂದೆ, ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಮತ್ತು ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಕುಲಪತಿ ಕೆಲ ದಿನಗಳ ಹಿಂದೆ ನಿವೃತ್ತರಾಗಿದ್ದಾರೆ. ಆಡಳಿತ ನಿರ್ವಹಣೆಗೆ ಪ್ರಭಾರ ಕುಲಪತಿಗಳನ್ನು ನೇಮಿಸಲಾಗಿದೆ.

ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಿಕ್ಷಕರ ನೇಮಕಾತಿಗೆ ಕಳೆದ ವರ್ಷ ಅಧಿಸೂಚನೆ ಪ್ರಕಟಿಸಿ ಸ್ಪರ್ಧಾ ಪರೀಕ್ಷೆ ನಡೆಸಲಾಗಿದೆ. ಈ ಮಧ್ಯೆ ಕುಲಪತಿಯ ನಿವೃತ್ತಿಯಿಂದ ನೇಮಕಾತಿ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಂಡಿದೆ. 1949ರ ಆಗಸ್ಟ್‌ನಲ್ಲಿ ಆರಂಭವಾದ ಈ ವಿಶ್ವವಿದ್ಯಾಲಯ ಈಗ ಅಮೃತ ಮಹೋತ್ಸವ ವರ್ಷ ಆಚರಿಸುತ್ತಿದೆ. ಆದರೆ, ಅಮೃತ ಮಹೋತ್ಸವ ಕಾರ್ಯಕ್ರಮಗಳು ಇನ್ನು ಆರಂಭವಾಗಿಲ್ಲ.

ADVERTISEMENT

ಕರ್ನಾಟಕ ವಿಶ್ವವಿದ್ಯಾಲಯದ ಮಂಜೂರಾದ ಹುದ್ದೆಗಳ ಪೈಕಿ ಅರ್ಧಕ್ಕೂ ಹೆಚ್ಚು ಖಾಲಿ ಇವೆ. ನೇಮಕಾತಿಗೆ ಅನುಮೋದನೆ ದೊರತಿಲ್ಲ. ವಿಶ್ವವಿದ್ಯಾಲಯವು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

‘ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

‘ಹೊಸ ಕುಲಪತಿ ನೇಮಕಾತಿಗೆ ಸರ್ಕಾರವು ಶೀಘ್ರವೇ ಶೋಧನಾ ಸಮಿತಿ ರಚಿಸಬೇಕು. ವಿಶ್ವವಿದ್ಯಾಲಯವನ್ನು ಬೆಳೆಸುವ ಮತ್ತು ಕೀರ್ತಿಯನ್ನು ಹೆಚ್ಚಿಸುವಂಥ ವ್ಯಕ್ತಿಯನ್ನು ಕುಲಪತಿಯಾಗಿ ನೇಮಕ ಮಾಡಲು ಕ್ರಮ ವಹಿಸಬೇಕು’ ಎಂದು ಕುಲಪತಿ ಹುದ್ದೆಯ ಆಕಾಂಕ್ಷಿಯೊಬ್ಬರು ತಿಳಿಸಿದರು.

ಶೋಧನಾ ಸಮಿತಿಗೆ ವಿಶ್ವವಿದ್ಯಾಲಯದಿಂದ ಒಬ್ಬರು ನಾಮನಿರ್ದೇಶನ ಸದಸ್ಯರ ಹೆಸರು ಕಳಿಸಲಾಗಿದೆ. ಸರ್ಕಾರವು ಸೂಚಿಸಿದ ಬಳಿಕ ಕುಲಪತಿ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗುವುದು
. ಎ.ಚನ್ನಪ್ಪ ಕುಲಸಚಿವ ಕರ್ನಾಟಕ ವಿಶ್ವವಿದ್ಯಾಲಯ

‘ಶೋಧನಾ ಸಮಿತಿ ರಚನೆಗೆ ಕ್ರಮ’

‘ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿಶ್ವವಿದ್ಯಾಲಯ ರಾಜ್ಯಪಾಲರಿಂದ ನಾಮನಿರ್ದೇಶನ ಸದಸ್ಯರ ಪ್ರಸ್ತಾವ ಬಂದ ತಕ್ಷಣ ಸರ್ಕಾರದ ನಾಮ‌ನಿರ್ದೇಶನ ಸದಸ್ಯರನ್ನು ನೇಮಿಸಿ ಶೋಧನಾ ಸಮಿತಿಗಳನ್ನು ರಚಿಸಿ ಮುಖ್ಯಮಂತ್ರಿಯವರ ಅನುಮೋದನೆಗೆ ಕಳುಹಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ತಿಳಿಸಿದರು. ‘ಶೋಧನಾ ಸಮಿತಿ ರಚನೆ ಬಳಿಕ ಅರ್ಜಿ ಆಹ್ವಾನಿಸಲಾಗುವುದು. ಮೂರೂ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಕ್ಕೆ ಕ್ರಮ ವಹಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.