ಧಾರವಾಡ: ‘ಐರೋಪ್ಯ ರಾಷ್ಟ್ರದಲ್ಲಿನ ಉದ್ಯೋಗಾವಕಾಶ ಮತ್ತು ಉನ್ನತ ಶಿಕ್ಷಣ ಕುರಿತು ಮಾಹಿತಿ ನೀಡುವ ಸಲುವಾಗಿ ಜ. 16ರಂದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ‘ಹೊರೈಝಾನ್–2020’ ಎಂಬ ಐರೋಪ್ಯ ಮಾಹಿತಿ ದಿನವನ್ನು ಆಚರಿಸಲಾಗುತ್ತಿದೆ’ ಎಂದು ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಡಾ. ರಮೇಶ ನಾಯಕ್ ತಿಳಿಸಿದರು.
‘ಸೆನೆಟ್ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಐರೋಪ್ಯ ಒಕ್ಕೂಟದ 15 ರಾಷ್ಟ್ರಗಳೊಂದಿಗೆ ಫ್ರಾನ್ಸ್ ಮತ್ತು ಇಟಲಿ ರಾಷ್ಟ್ರದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳ ವಿದ್ಯಾರ್ಹತೆ ಮತ್ತು ಜ್ಞಾನಕ್ಕೆ ಅನುಗುಣವಾಗಿ ಅಲ್ಲಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಲಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಫ್ರಾನ್ಸ್‌ನ ರಾಷ್ಟ್ರೀಯ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ಕಾವೇರಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಇದಕ್ಕಾಗಿ ಇಡೀ ರಾಜ್ಯದಲ್ಲೇ ಕರ್ನಾಟಕ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಶೋಧನಾ ಕ್ಷೇತ್ರವನ್ನು ಇನ್ನಷ್ಟು ಸದೃಢಗೊಳಿಸುವುದು ಮತ್ತು ಜಾಗತಿಕ ಮಟ್ಟದಲ್ಲಿನ ಸವಾಲುಗಳನ್ನು ಎದುರಿಸಲು ನುರಿತ ಸಂಶೋಧಕರನ್ನು ಸಜ್ಜಗೊಳಿಸುವ ಕುರಿತು ಐರೋಪ್ಯ ಒಕ್ಕೂಟದ ಈ ತಂಡ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಕಾರ್ಯಾಗಾರವು ಜ. 16ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಜರುಗಲಿದೆ’ ಎಂದು ಮಾಹಿತಿ ನೀಡಿದರು.
‘ಪಾಲ್ಗೊಳ್ಳಲಿರುವ 17 ರಾಷ್ಟ್ರಗಳ ಪ್ರತಿನಿಧಿಗಳು ತಮ್ಮಲ್ಲಿನ ಅವಕಾಶಗಳ ಕುರಿತು ಮಾಹಿತಿ ನೀಡಲಿದ್ದಾರೆ. ಪಾಲ್ಗೊಳ್ಳುವವರ ಸ್ವವಿವರ ಪಡೆಯಲಿದ್ದಾರೆ. ಇದರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದವರು ಮಾತ್ರವಲ್ಲದೆ, ಇತರ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೂ ಪಾಲ್ಗೊಳ್ಳಬಹದು’ ಎಂದು ಡಾ. ರಮೇಶ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.