ಧಾರವಾಡ: ಪಿಎಚ್.ಡಿ. ಸೀಟನ್ನು ಇತರ ವರ್ಗಕ್ಕೆ ನಿಯಮಬಾಹಿರವಾಗಿ ವರ್ಗಾಯಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಣಯ ಕೈಗೊಳ್ಳಲುಪರಿಶಿಷ್ಟ ಜಾತಿ ಹಾಗೂ ಪಂಗಡದ ಆಯೋಗವು ರಾಜ್ಯಪಾಲರ ಮೊರೆ ಹೋಗಿದೆ.
ಮತ್ತೊಂದೆಡೆ ವಿಚಾರಣೆ ನಡೆಸುತ್ತಿದ್ದ ಆಯೋಗದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ಕರ್ನಾಟಕ ವಿಶ್ವವಿದ್ಯಾಲಯ, ಆಯೋಗದ ಮಧ್ಯಂತರ ಆದೇಶಕ್ಕೆ ತಡೆ ಪಡೆದಿದೆ.
ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಈ ವರ್ಷ 15 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಸೀಟು ನಿಗದಿಪಡಿಸಲಾಗಿತ್ತು. ಇದರಲ್ಲಿ 2 ಸೀಟು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜಾತಿ ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿಟ್ಟಿತ್ತು. ಪರಿಶಿಷ್ಟ ಜಾತಿಗೆ ಮೀಸಲಿದ್ದ ಸೀಟಿಗೆ ಆ ವರ್ಗದ ಅಭ್ಯರ್ಥಿಗಳು ಇಲ್ಲದ ಕಾರಣ ಇದನ್ನು ಬೇರೆ ಅಭ್ಯರ್ಥಿಗೆ ನೀಡಲಾಗಿದೆ ಎಂದು ವಿಭಾಗವು ವಿವರಣೆ ನೀಡಿತ್ತು. ಜತೆಗೆ 2021ರ ಜನವರಿಯಲ್ಲಿ ಅಧಿಸೂಚನೆ ಪ್ರಕಟಿಸಿದ್ದ ವಿಶ್ವವಿದ್ಯಾಲಯ, ಮಾರ್ಚ್‌ನಲ್ಲಿ ಕೆಲ ಪೂರಕ ಸುತ್ತೋಲೆಗಳನ್ನು ಹೊರಡಿಸಿದ್ದು ಗೊಂದಲಗಳಿಗೆ ಕಾರಣವಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಇದರಿಂದ ಅವಕಾಶ ಕಳೆದುಕೊಂಡ ಅಭ್ಯರ್ಥಿ ಸಚಿನ್ ಕುರಾಡೆ ಎಂಬುವವರು ಆಯೋಗದಲ್ಲಿ ಪ್ರಶ್ನಿಸಿದ್ದರು. ಪರಿಶಿಷ್ಟ ಜಾತಿಯಡಿ ಮೀಸಲಾತಿ ಬಯಸಿದ್ದ ಇವರು ಶೇ 74.13ರಷ್ಟು ಅಂಕ ಹೊಂದಿದ್ದರು. ನೆಟ್ ಹಾಗೂ ಕೆಸೆಟ್ ಪರೀಕ್ಷೆ ಉತ್ತೀರ್ಣರಾಗಿದ್ದರು. ವಿಚಾರಣೆ ನಡೆಸಿದ ಆಯೋಗವು, ಪ್ರಕರಣದ ಸಂಪೂರ್ಣ ವಿಚಾರಣೆ ನಡೆಯುವವರೆಗೂ ಪಿಎಚ್‌ಡಿ ಪ್ರಕ್ರಿಯೆ ಮುಂದುವರಿಸದಂತೆ ತಡೆ ನೀಡಿತ್ತು. ಹೆಚ್ಚುವರಿ ಸೀಟನ್ನು ಸೃಜಿಸಿ ನೀಡುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು.
ಮುಂದಿನ ವಿಚಾರಣೆ ಸಂದರ್ಭದಲ್ಲಿ ವಿವಾದಿತ ಸೀಟನ್ನು ಮಾತ್ರ ಕಾಯ್ದಿರಿಸಿ ಉಳಿದ 14 ಪಿಎಚ್‌ಡಿ ಸೀಟುಗಳಿಗಿದ್ದ ತಡೆಯನ್ನು ತೆರವುಗೊಳಿಸಿತು. ಜತೆಗೆ ಬ್ಯಾಕ್‌ಲಾಗ್ ಸೀಟುಗಳನ್ನು ಭರ್ತಿ ಮಾಡಲೂ ಸೂಚಿಸಿತು. ಈ ಪ್ರಕರಣ ಕುರಿತು ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಆಯೋಗವು ರಾಜ್ಯಪಾಲರನ್ನು ಕೋರಿದೆ.
ಆದರೆ, ಆಯೋಗದ ಮಧ್ಯಂತರ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ ಕವಿವಿ, ತನ್ನ 2012–13ನೇ ಸಾಲಿನ ನಿಯಮಾವಳಿಯಂತೆ ಹೆಚ್ಚುವರಿ ಸೀಟು ಸೃಜಿಸಲು ಸಾಧ್ಯವಿಲ್ಲ. ಹೀಗಾಗಿ ಆಯೋಗದ ನಿರ್ದೇಶನವು ವಿಶ್ವವಿದ್ಯಾಲಯದ ನಿಯಮಾವಳಿಗೆ ವಿರುದ್ಧವಾಗಿದೆ ಎಂದು ತನ್ನ ವಾದವನ್ನು ಮಂಡಿಸಿದೆ. ಈ ಪ್ರಕರಣದಲ್ಲಿಪರಿಶಿಷ್ಟ ಜಾತಿ ಹಾಗೂ ಪಂಗಡದ ಆಯೋಗ, ಉನ್ನತ ಶಿಕ್ಷಣ ಇಲಾಖೆ ಮತ್ತು ಅಭ್ಯರ್ಥಿ ಸಚಿನ್ ಕುರಾಡೆ ಅವರನ್ನು ಪ್ರತಿವಾದಿಯನ್ನಾಗಿಸಿದೆ. ಹೀಗಾಗಿ ಈ ಪ್ರಕರಣದ ಸಂಪೂರ್ಣ ಮಾಹಿತಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ವಿಶ್ವವಿದ್ಯಾಲಯಕ್ಕೆ ತಿಳಿಸಿದೆ.
ಆದರೆ, ಇದೇ ವಿಭಾಗದಲ್ಲಿ 2015ರಲ್ಲಿ ಅರ್ಹತೆ ಇದ್ದರೂ ಅವಕಾಶ ವಂಚಿತರಾಗಿದ್ದ ರಾಘವೇಂದ್ರ ಜಿಗಳೂರು ಎಂಬುವವರು ಹೈಕೋರ್ಟ್ ಮೊರೆ ಹೋಗಿದ್ದರು. ಆ ಸಂದರ್ಭದಲ್ಲಿ ಇವರ ಪರವಾಗಿಯೇ ಆದೇಶ ನೀಡಿದ್ದ ಹೈಕೋರ್ಟ್, ಒಂದು ಬಾರಿ ಪಿಎಚ್‌ಡಿ ಅಧಿಸೂಚನೆ ಪ್ರಕಟವಾದ ನಂತರ ಯಾವುದೇ ಪೂರಕ ಸುತ್ತೋಲೆಗಳನ್ನು ಹೊರಡಿಸಲು ಕುಲಸಚಿವರಿಗೆ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. 8 ಸೀಟುಗಳನ್ನು ಮೀಸಲಿಟ್ಟಿದ್ದ ಆ ವರ್ಷ, ಹೈಕೋರ್ಟ್ ಆದೇಶದಂತೆ ರಾಘವೇಂದ್ರ ಅವರಿಗೆ ಹೆಚ್ಚುವರಿ ಸೀಟನ್ನು ವಿಶ್ವವಿದ್ಯಾಲಯ ಸೃಜಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.