ADVERTISEMENT

ಧಾರವಾಡ | ಕೃಷಿ ಮೇಳ: ಕೀಟಗಳಿಂದ ತಯಾರಿಸಿದ ಭಕ್ಷ್ಯ ಪ್ರದರ್ಶನ

ಬಿ.ಜೆ.ಧನ್ಯಪ್ರಸಾದ್
Published 10 ಸೆಪ್ಟೆಂಬರ್ 2023, 2:55 IST
Last Updated 10 ಸೆಪ್ಟೆಂಬರ್ 2023, 2:55 IST
ವಿಸ್ಮಯಕಾರಿ ಕೀಟ ಪ್ರಪಂಚ ಮಳಿಗೆಯಲ್ಲಿ ಫಲಕಗಳು, ಮಾದರಿಗಳು ಪ್ರಜಾವಾಣಿ ಚಿತ್ರ ಗೋವಿಂದರಾಜ ಜವಳಿ
ವಿಸ್ಮಯಕಾರಿ ಕೀಟ ಪ್ರಪಂಚ ಮಳಿಗೆಯಲ್ಲಿ ಫಲಕಗಳು, ಮಾದರಿಗಳು ಪ್ರಜಾವಾಣಿ ಚಿತ್ರ ಗೋವಿಂದರಾಜ ಜವಳಿ   

ಲೇಖಕರು : ಬಿ.ಜೆ.ಧನ್ಯಪ್ರಸಾದ್‌

ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನದಲ್ಲಿ ವಿವಿಧ ಕೀಟಗಳ ಜೀವನ ಚಕ್ರ, ವೈವಿಧ್ಯಗಳು ಅನಾವರಣಗೊಳಿಸಲಾಗಿದೆ.

ವಿಶ್ವವಿದ್ಯಾಲಯದ ಕೀಟ ಶಾಸ್ತ್ರ ವಿಭಾಗವು ಈ ಪ್ರದರ್ಶನ ಏರ್ಪಡಿಸಿದೆ. ಕೀಟ ಎಂದರೇನು? ರೋಗ ಹರಡುವ ಮತ್ತು ಹರಡದ ಕೀಟಗಳು, ಅವುಗಳ ವಿಶೇಷಗಳು ಇತರ ವಿವರಣೆಗಳು ಇಲ್ಲಿವೆ.

ADVERTISEMENT

ಜೇನು ನೋಣ, ಹಿಪ್ಪು ನೇರಳೆ ಹುಳು, ಗೆದ್ದಲ ಹುಳ್ಳು, ಸೀಕಾಡೆ ಕೀಟ, ಇರುವೆ ಸಿಂಹ ಮೊದಲಾದವುಗಳ ಜೀವನ ಚಕ್ರಗಳನ್ನು ಪ್ರದರ್ಶಿಸಲಾಗಿದೆ.

ಸಂದಿಪದಿ ವಂಶದ ವರ್ಗಗಳು, ಮರಿಹುಳುಗಳ ವೈವಿಧ್ಯತೆ, ಎರೆಹುಳ್ಳು ಗೊಬ್ಬರ ತಯಾರಿ ವಿಧಾನ, ಚಿಟ್ಟೆಗಳು, ಕಪ್ಪು ಸೈನಿಕ ನೋಣದ ಪ್ರಾಮುಖ್ಯತೆ, ಸೆಗಣಿ ಹುಳುವಿನ ನಿರ್ಮಲೀಕರಣ ಮೊದಲಾದ ವಿಷಯ, ವಿವರಣೆಗಳು ಇವೆ.

ಮೋಲ್‌ ಕ್ರಿಕೆಟ್‌ ಕೀಟಗಳ ಹೆಸರಿನ ಚಿಟ್ಟೆ ಸ್ವಾಮಿ ಕ್ರೀಡಾಂಗಣ ಗಮನ ಸೆಳೆಯುತ್ತದೆ. ಈ ಕ್ರಿಕೆಟ್‌ ಕ್ರೀಡಾಂಗಣದೋಪದಲ್ಲಿ ವಿನ್ಯಾಸ ಇದೆ. ಇದರ ಹಿಂದಿಯಲ್ಲೇ ಗೆದ್ದಲು ಹುತ್ತ ಇದೆ.

ವಿವಿಧ ಕೀಟ ಬಳಸಿ ಸಿದ್ಧಪಡಿಸಿರುವ 15 ಭಕ್ಷ್ಯಗಳನ್ನು ಪ್ರದರ್ಶಿಸಲಾಗಿದೆ. ಮಿಡತೆ/ಜಿರಳೆ ಕೀಟದ ಫ್ರೈ, ಕಪ್ಪು ಸೈನಿಕ ನೋಣದ ಮಸಾಲಾ, ರೇಷ್ಮೆ ಕೋಶದ ಸೂಪ್‌, ಬರ್ಗರ್‌, ಪನ್ನೀರ್‌ ಟಿಕ್ಕಾ, ಕೆಂಪು ಇರುವೆಯ ಫ್ರೈ ಮೊದಲಾದವು ಇವೆ.

‘ಚೀನಾ, ಥಾಯ್ಲೆಂಡ್‌, ಉತ್ತರ ಕೋರಿಯಾದ ದೇಶಗಳಲ್ಲಿ ಈ ಭಕ್ಷ್ಯಗಳನ್ನು ಸೇವಿಸುತ್ತಾರೆ. ಭಾರತದಲ್ಲಿ ಕೆಲವು ಕಡೆಯ ಆದಿವಾಸಿ ಸಮುದಾಯದವರು ಕೆಂಪು ಇರುವೆಯ ಫ್ರೈ ಸೇವಿಸುತ್ತಾರೆ’ ಎಂದು ಕೀಟಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನ ವಿದ್ಯಾರ್ಥಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಗೆಯ ಕೀಟಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಜಲಚರ ಕೀಟಗಳು ಕುರಿತು ಮಾಹಿತಿ ಇದೆ. ಕೀಟದ ವೈಶಿಷ್ಟ್ಯಗಳ ಬಗ್ಗೆ ವಿದ್ಯಾರ್ಥಿಗಳು ವಿವರಣೆ ನೀಡುತ್ತಾರೆ.

ಕೆಲ ಕೀಟಗಳು ಜೀವನ ವೃತ್ತಾಂತವನ್ನು ಟಿ.ವಿ ಪರದೆಯಲ್ಲೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಈ ಮಳಿಗೆಯೊಳಗೆ ಒಂದು ಸುತ್ತು ಹಾಕಿದರೆ ಕೀಟ ಲೋಕದ ವಿಸ್ಮಯಗಳನ್ನು ತಿಳಿದುಕೊಳ್ಳಬಹುದಾಗಿದೆ.

‘ಕರ್ನಾಟಕ ರಾಜ್ಯ ಕೀಟ ಎಂದು ಜೇನು ಹುಳು ಗುರುತಾಗಿದೆ. ಜೇನು ಹುಳುವಿನ ಜೀವನ ವಿಧಾನ, ಜೇನು ಸಂಸಾರ, ಗೂಡಿನ ವಿನ್ಯಾಸ ಇಲ್ಲಿ ಇವೆ. ಜಲಚರ ಕೀಟಗಳು ಪ್ರದರ್ಶನ ಈ ಬಾರಿಯ ವಿಶೇಷ’ ಎಂದು ಕೀಟಶಾಸ್ತ್ರ ವಿಭಾಗದ ಪ್ರೊ.ಉಡಕೇರಿ ತಿಳಿಸಿದರು.

ವಿಸ್ಮಯಕಾರಿ ಕೀಟ ಪ್ರಪಂಚ ಮಳಿಗೆಯಲ್ಲಿನ ಜೇನುಗೂಡಿನ ವಿನ್ಯಾಸ ಚಿತ್ರ ಪ್ರಜಾವಾಣಿ ಚಿತ್ರ ಗೋವಿಂದರಾಜ ಜವಳಿ
ವಿಸ್ಮಯಕಾರಿ ಕೀಟ ಪ್ರಪಂಚ ಮಳಿಗೆಯಲ್ಲಿನ ಕೀಟಲೋಕ ಚಿತ್ರ ಪ್ರಜಾವಾಣಿ ಚಿತ್ರ ಗೋವಿಂದರಾಜ ಜವಳಿ
ವಿಸ್ಮಯಕಾರಿ ಕೀಟ ಪ್ರಪಂಚ ಮಳಿಗೆಯಲ್ಲಿ ಪ್ರದರ್ಶಿಸಿರುವ ಕೀಟಗಳಿಂದ ತಯಾರಿಸಿದ ಭಕ್ಷ್ಯಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.