ಧಾರವಾಡ: ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ಖಾದಿ ಕ್ಷೇತ್ರದ ಕಾರ್ಮಿಕರಿಗೆ ಸಿಗುವಂತೆ ಮಾಡಬೇಕು, ಖಾದಿ ಉದ್ಯಮ ಪುನಶ್ಚೇತನಕ್ಕೆ ವಿಶೇಷ ಅನುದಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ ಒತ್ತಾಯಿಸಿದರು.
ಧಾರವಾಡದಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು, ಉದ್ಯಮಗಳ ನೌಕರರು, ಎಲ್ಲರೂ ವಾರದಲ್ಲಿ ಒಂದು ದಿನ ಖಾದಿ ಉಡುಪು ತೊಡುವಂತೆ ನಿರ್ದೇಶನ ನೀಡಬೇಕು. ಖಾದಿ ಉತ್ಪಾದನೆಗೆ ಆಸಕ್ತಿ ತೋರುವಂತೆ ಮಾಡಬೇಕು. ನಶಿಸುವ ಹಂತದಲ್ಲಿರುವ ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
30 ಸಾವಿರಕ್ಕೂ ಹೆಚ್ಚು ಜನ, ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಖಾದಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರಿಯಾದ ಸಂಬಳ ಇಲ್ಲದೆ ಬೇರೆ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ. ಕೆಲವರು ಅದೇ ಕಾಯಕ ಮುಂದುವರಿಸಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ ತಾಲ್ಲೂಕಿನ ಗರಗದ ಖಾದಿ ಗ್ರಾಮೋದ್ಯೋಗ ಗುರುತಿಸಿ ಗಾಂಧಿ ಪುರಸ್ಕಾರ ನೀಡಿರುವುದು ಸ್ವಾಗತ. ಖಾದಿ ಉದ್ಯಮಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸುಮಾರು ₹7 ಕೋಟಿ ಮೌಲ್ಯದ ಖಾದಿ ಬಟ್ಟೆ ವಿವಿಧ ಕೇಂದ್ರಗಳಲ್ಲಿ ದಾಸ್ತಾನು ಇದೆ. ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಖಾದಿ ಉತ್ಪಾದನೆ ಜೊತೆಗೆ ಭಾವನಾತ್ಮಕ ಮಿಡಿತ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗಮನಹರಿಸಬೇಕು. ಅವರ ಬಳಿಗೆ ನಿಯೋಗ ಕರೆದೊಯ್ದು ಮನವರಿಕೆ ಮಾಡುತ್ತೇನೆ ಎಂದರು.
ಎನ್.ಕೆ.ಕಾಗಿನೆಲೆ ಮಾತನಾಡಿ, ದೇಶದಲ್ಲಿ ಆರಂಭದಲ್ಲಿ 18 ಲಕ್ಷ ಕಾರ್ಮಿಕರು ಖಾದಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಸಹಕಾರ ಸಿಗದೆ ಈ ಉದ್ಯಮ ತೊರೆಯುತ್ತಿದ್ದಾರೆ. ಹೀಗಾಗಿ ಖಾದಿ ಉದ್ಯಮ ನಶಿಸುತ್ತಿದೆ. ಸರ್ಕಾರ ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಶೈನಾಜ್ ಸೈಯದ್, ಸಿದ್ದಣ್ಣ ಕಂಬಾರ, ಲಲಿತಾ ಮಡ್ಡೆಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.