ADVERTISEMENT

ಕೆಪಿಎಸ್‌ಸಿ: ಉರ್ದು ಭಾಷೆ ವಿಷಯದ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟಣೆಗೆ ಗ್ರಹಣ

ಕೆಪಿಎಸ್‌ಸಿ: ಮೌಲಾಲಾ ಆಜಾದ್ ಮಾದರಿ ಶಾಲೆಗಳ ಶಿಕ್ಷಕರ ನೇಮಕಾತಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 10:41 IST
Last Updated 15 ಆಗಸ್ಟ್ 2021, 10:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ, ಉರ್ದು ಭಾಷೆ ವಿಷಯದ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟಣೆಗೆ ಗ್ರಹಣ ಹಿಡಿದಿದೆ.

2018ರಲ್ಲಿ ಕನ್ನಡ, ಇಂಗ್ಲಿಷ್, ಉರ್ದು, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಗಣಿತ ವಿಷಯಗಳ600 ಶಿಕ್ಷಕರು ಹಾಗೂ 100 ಮುಖ್ಯ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದ ಕೆಪಿಎಸ್‌ಸಿ, 2019ರ ಫೆಬ್ರುವರಿಯಲ್ಲಿ ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆನಡೆಸಿತ್ತು.

2020ರ ಫೆಬ್ರುವರಿಯಿಂದ ಏಪ್ರಿಲ್ ತಿಂಗಳ ಅವಧಿಯಲ್ಲಿ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹತಾ ಪಟ್ಟಿ ಕೂಡ ಪ್ರಕಟಿಸಿದ್ದ ಆಯೋಗ ಉಳಿದ ವಿಷಯಗಳ ಅಂತಿಮ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ನೇಮಕಾತಿ ಪ್ರಕ್ರಿಯೆಯೂ ನಡೆಯುತ್ತಿದೆ. ಆದರೆಉರ್ದು ವಿಷಯದ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟಣೆಗೆ ವಿಳಂಬ ಮಾಡುತ್ತಿ ರುವುದಕ್ಕೆ ಅಭ್ಯರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಒಂದೂವರೆ ವರ್ಷ ವಿಳಂಬ

‘ಒಂದೂವರೆ ತಿಂಗಳಲ್ಲಿ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಿದ್ದ ಆಯೋಗ, ಒಂದೂವರೆ ವರ್ಷವಾಗುತ್ತಾ ಬಂದರೂ ಕ್ಯಾರೇ ಎಂದಿಲ್ಲ. ಕರೆ ಮಾಡಿ ವಿಚಾರಿಸಿದಾಗಲೆಲ್ಲಾ ಸದ್ಯದಲ್ಲೇ ಬರಲಿದೆ ಎಂದಷ್ಟೇ ಹೇಳಿ ಕೈ ತೊಳೆದುಕೊಳ್ಳುತ್ತಾರೆ. ಕಾದು ಸಾಕಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ಶೀಘ್ರ ಮುಗಿದು, ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂಬ ಭರವಸೆಯಲ್ಲಿ ಕೆಲವರು ಇದ್ದ ಕೆಲಸ ತೊರೆದಿದ್ದಾರೆ. ಸರ್ಕಾರಿ ಕೆಲಸಕ್ಕೆ ಆಯ್ಕೆಯಾಗಿರುವ ವಿಷಯ ಗೊತ್ತಾಗಿದ್ದರಿಂದ, ಕೆಲ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದವರನ್ನು ತೆಗೆದು ಬೇರೆಯವರನ್ನು ನೇಮಿಸಿಕೊಂಡಿವೆ. ಬಹುತೇಕರು ಒಂದೂವರೆ ವರ್ಷದಿಂದ ನಿರುದ್ಯೋಗಿಗಳಾಗಿ ಮನೆಯಲ್ಲಿದ್ದೇವೆ. ಕೋವಿಡ್‌ನಿಂದಾಗಿ ಬೇರೆ ಕೆಲಸವೂ ಸಿಗದೆ,ಎಲ್ಲದಕ್ಕೂ ಮನೆಯವರನ್ನೇ ಅವಲಂಬಿಸಿ ಬದುಕು ದೂಡುತ್ತಿದ್ದೇವೆ’ ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದರು.

ಬೇಗ ಪ್ರಕಟಿಸದಿದ್ದರೆ ಪ್ರತಿಭಟನೆ

ತಾತ್ಕಾಲಿಕ ಪಟ್ಟಿ ಪ್ರಕಟಿಸಲು ವಿಳಂಬ ಮಾಡುತ್ತಿರುವ ಆಯೋಗದ ನಡೆಯಿಂದಬೇಸತ್ತಿರುವ ಅಭ್ಯರ್ಥಿಗಳು, ಪ್ರತಿಭಟನೆ ನಡೆಸಲು ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ.

‘ಪಟ್ಟಿ ಪ್ರಕಟಿಸುವಂತೆ ಹಲವು ಬಾರಿ ಕರೆ ಮಾಡಿ, ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ವಾರದೊಳಗೆ ಪಟ್ಟಿಯನ್ನು ಪ್ರಕಟಿಸಬೇಕು. ನಂತರ ಅಂತಿಮ ಪಟ್ಟಿ ಬಿಡುಗಡೆ ಮಾಡಿ, ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಮುಗಿಸಬೇಕು. ಇಲ್ಲದಿದ್ದರೆ 500ಕ್ಕೂ ಹೆಚ್ಚು ಅಭ್ಯರ್ಥಿಗಳು ಬೆಂಗಳೂರಿನಲ್ಲಿರುವ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ಅಭ್ಯರ್ಥಿಗಳು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.