ADVERTISEMENT

ಧಾರವಾಡ ಕೃಷಿ ಮೇಳ: ಹವಾಮಾನ ವೈಪರೀತ್ಯಕ್ಕೆ ರೈತರ ಉತ್ತರ

ಕೃಷಿ ಮೇಳದಲ್ಲಿ 7 ಜಿಲ್ಲೆಗಳ ಸಾಧಕ ರೈತರಿಂದ ಮಾಹಿತಿ

ಸ್ಮಿತಾ ಶಿರೂರ
Published 24 ಸೆಪ್ಟೆಂಬರ್ 2024, 6:03 IST
Last Updated 24 ಸೆಪ್ಟೆಂಬರ್ 2024, 6:03 IST
<div class="paragraphs"><p>ಧಾರವಾಡದ ಕೃಷಿ ಮೇಳದಲ್ಲಿ ಹವಾಮಾನ ವೈಪರೀತ್ಯ ಪರಿಸ್ಥಿತಿಯಲ್ಲಿ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿ ಸಾಧನೆಗೈದ ರೈತ ಸಾಧಕರ ಮಳಿಗೆಗಳಲ್ಲಿ ಸಾವಿರಾರು ರೈತರು ಮಾಹಿತಿ ಪಡೆದರು</p></div>

ಧಾರವಾಡದ ಕೃಷಿ ಮೇಳದಲ್ಲಿ ಹವಾಮಾನ ವೈಪರೀತ್ಯ ಪರಿಸ್ಥಿತಿಯಲ್ಲಿ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿ ಸಾಧನೆಗೈದ ರೈತ ಸಾಧಕರ ಮಳಿಗೆಗಳಲ್ಲಿ ಸಾವಿರಾರು ರೈತರು ಮಾಹಿತಿ ಪಡೆದರು

   

ಧಾರವಾಡ: ಒಂದು ವರ್ಷ ಅತಿಯಾದ ಮಳೆ, ಮತ್ತೊಂದು ವರ್ಷ ಅತಿ ಕಡಿಮೆ ಮಳೆ, ಒ‌ಮ್ಮೊಮ್ಮೆ ಮಳೆಯೇ ಇಲ್ಲ. ಹೀಗಾದರೆ ಕೃಷಿ ಮಾಡುವುದು ಹೇಗೆ?... ಇಂತಹ ಹಲವು ಸಮಸ್ಯೆಗಳಿಗೆ ರೈತರು ಸಮಗ್ರ ಕೃಷಿ ಮೂಲಕ ಉತ್ತರ ಕಂಡುಕೊಂಡಿದ್ದಾರೆ.

ಹವಾಮಾನ ವೈಪರೀತ್ಯ ಎದುರಿಸಿ, ಕೃಷಿಯಲ್ಲಿ ಯಶಸ್ವಿಯಾದ ರೈತರು ಹಾಗೂ ಅವರ ಕೃಷಿ ಮಾದರಿ ಪರಿಚಯಿಸುವ ಮಾಹಿತಿ ಕೇಂದ್ರವನ್ನು  ಕೃಷಿ ಮೇಳದಲ್ಲಿ ತೆರೆಯಲಾಗಿದ್ದು, ಸಾವಿರಾರು ರೈತರು ಈ ರೈತರಿಂದ ಮಾಹಿತಿ ಪಡೆದರು.

ADVERTISEMENT

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ 20 ಎಕರೆಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಯುವ ರೈತ ಸುಜಯ್‌ ರಾಘವೇಂದ್ರ ಭಟ್ಟ ಅಡಿಕೆಯೊಂದಿಗೆ ಕಾಳುಮೆಣಸು, ಕಾಫಿ, ಜಾಯಿಕಾಯಿ, ಕಿತ್ತಳೆ, ಪೇರಲೆ, ಸರ್ವ ಋತು ನಿಂಬೆ, 35ಕ್ಕೂ ಅಧಿಕ ತಳಿಯ ಹಲಸು, 15ಕ್ಕೂ ಹೆಚ್ಚು ತಳಿಯ ಜೀರಿಗೆ ಮಿಡಿ ಮಾವಿನಕಾಯಿ, ಮಾಡಹಾಗಲ, ವಿದೇಶಿ ತಳಿಯ ರಂಬೂಟಾನ್‌, ಮ್ಯಾಂಗೋಸ್ಟಿನ್‌, ಬೆಣ್ಣೆಹಣ್ಣು, ಸೊಪ್ಪಿನ ಬೆಟ್ಟದಲ್ಲಿ ಮಿಶ್ರಬೆಳೆಯಾಗಿ ಶಮೆ ಬಿದಿರು ಕೃಷಿ ಮಾಡುತ್ತಿದ್ದಾರೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಕೀಟಶಾಸ್ತ್ರದಲ್ಲಿ ಎಂಎಸ್‌ಸಿ ಪದವಿ ಪಡೆದಿರುವ ಸುಜಯ್‌ ತಮ್ಮ ಜಮೀನಿನಲ್ಲಿ ಕಳೆದ 6 ವರ್ಷಗಳಿಂದ ಸಾಂಪ್ರದಾಯಿಕ ಕೃಷಿಗೆ ತಂತ್ರಜ್ಞಾನ ಅಳವಡಿಸಿದ್ದಾರೆ.

ಟ್ರ್ಯಾಕ್ಟರ್‌, ಇತರ ಕೃಷಿ ಉಪಕರಣಗಳು, ಅಡಿಕೆ ಒಣಗಿಸುವ ಡ್ರೈಯರ್‌ಗಳನ್ನು ಪ್ರಮುಖವಾಗಿ ಬಳಸುತ್ತಾರೆ. ನೀರಿನ ಮಿತ ಬಳಕೆ, ನೀರಿನ ಸಂರಕ್ಷಣೆ, ಮಣ್ಣಿನ ತೇವಾಂಶ ಹಾಗೂ ಸವಕಳಿ ತಡೆಯಲು ಆದ್ಯತೆ ನೀಡಿದ್ದಾರೆ. ಇನ್‌ಲೈನ್‌ ಡ್ರಿಪರ್‌, ರಸಾವರಿ ಘಟಕ, ಕೃಷಿ ಹೊಂಡ, ಇಂಗುಗುಂಡಿಗಳು ಇವೆ. ಅಡಿಕೆ ಹಾಗೂ ಇತರ ಉತ್ಪನ್ನಗಳನ್ನು ಒಣಗಿಸಲು ಸ್ವತಃ ಡ್ರೈಯರ್‌ ತಯಾರಿಸಿದ್ದಾರೆ. 

ಅಡಿಕೆ ಹಾಗೂ ತೆಂಗಿನ ಸಿಪ್ಪೆ–ಕೃಷಿ ತ್ಯಾಜ್ಯದಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಕೆ, ಜೇನು ಸಾಕಣೆ ಹೀಗೆ ಕೃಷಿಯ ಸಮಗ್ರ ದರ್ಶನ ಇವರ ತೋಟದಲ್ಲಿ ಲಭ್ಯವಿದೆ. ಜವಳು ಭೂಮಿಯ ಸಮರ್ಪಕ ನಿರ್ವಹಣೆಗೆ ಅಂತರ್ಗತ ಬಸಿಗಾಲುವೆ ನಿರ್ಮಾಣ, ಸಸ್ಯ ಸಂರಕ್ಷಣೆಗಾಗಿ ಮೋಹಕ ಬಲೆ, ಐಬೆಕ್ಸ್‌ ಬೇಲಿ, ಸಾವಯವ ಕೀಟನಾಶಕಗಳ ಬಳಕೆ ಹೀಗೆ ಕೃಷಿಕರ ಹಲವು ಪ್ರಶ್ನೆಗಳಿಗೆ ಉತ್ತರ ಇವರ ಬಳಿ ಇತ್ತು. 

ಹೊಲದಲ್ಲಿ ಬದು ಮಾಡಿ ಹಣ್ಣಿನ ಗಿಡಗಳನ್ನು ಬೆಳೆಯುವುದು, ಕವಳಿ ಹಣ್ಣಿನ ಗಿಡಗಳನ್ನು ಬೇಲಿಯಂತೆ ಬೆಳೆಸುವುದು, ಕುರಿ ಸಾಕಣೆ, ಸಾವಯವ ಮುಚ್ಚಿಗೆ, ಇಂಗುಗುಂಡಿಗಳ ನಿರ್ಮಾಣ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಯಾವ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ ಎಂಬುದನ್ನು ರೈತರು ಈ ಮಳಿಗೆಗಳಲ್ಲಿ ನೋಡಬಹುದು.

‘ತಂತ್ರಜ್ಞಾನಗಳ ಸಾಧಕ– ಬಾಧಕಗಳನ್ನು ಅರಿತು ಅವು ತಮ್ಮ ಪ್ರದೇಶಕ್ಕೆ ಹೊಂದುತ್ತವೆಯೋ ಇಲ್ಲವೋ ಎಂಬುದನ್ನು ಯಶಸ್ವಿ ರೈತರ ಬಳಿ ಚರ್ಚಿಸಲು ಅನುವಾಗಲಿ ಎಂಬ ಉದ್ದೇಶದಿಂದ ಈ ಬಾರಿ 7 ಜಿಲ್ಲೆಗಳಿಂದ ತಲಾ ಒಬ್ಬ ಯಶಸ್ವಿ ರೈತರನ್ನು ಕರೆಸಲಾಗಿದೆ’ ಎಂದು ಕೃಷಿ ಮೇಳದ ರೈತ ಸಾಧಕರು ಸ್ಪೆಷಲ್‌ ಪೆವಿಲಿಯನ್‌ ಅಧ್ಯಕ್ಷ ಎಸ್‌.ಕೆ. ದೇಶಪಾಂಡೆ ತಿಳಿಸಿದರು. ಸಮಿತಿ ಸದಸ್ಯ ರವೀಂದ್ರ ಹೊಸಪೇಟೆ ಮಾಹಿತಿ ನೀಡಿದರು.

ವಿವಿಧ ಜಿಲ್ಲೆಯ ಸಾಧಕರು
ಬಾಗಲಕೋಟೆಯ ಶೇಖರ್‌ ಮನೋಜಿ ಬೆಳಗಾವಿಯ ಕಲ್ಲಪ್ಪ ಯಲಡಗೆ ಧಾರವಾಡದ ಬಸವರಾಜ ಬೆಳವಟಗಿ ಗದಗದ ವಿರೇಶ್‌ ನೇಗಳಿ ಹಾವೇರಿಯ ಈರಣ್ಣ ಬಾರಕೇರ್‌ ಉತ್ತರಕನ್ನಡದ ಸುಜಯ್‌ ಭಟ್ಟ ವಿಜಯಪುರದ ವೀರಪ್ಪ ವಗ್ಗಿ ಅವರು ತಾವು ಕೃಷಿಯಲ್ಲಿ ಅಳವಡಿಸಿಕೊಂಡ ತಂತ್ರಜ್ಞಾನಗಳನ್ನು ರೈತರಿಗೆ ಚಿತ್ರ ಸಮೇತ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.