ಧಾರವಾಡ: ‘ಕೃಷಿಮೇಳ ನೋಡಲು ಧಾರವಾಡಕ್ಕೆ ಬಂದೋರು, ಮುಖ್ಯದ್ವಾರ ಪ್ರವೇಶಿಸುತ್ತಲೆ ಎಡಕ್ಕೆ ತಿರುಗಿ ಬನ್ನಿ. ಸ್ವಲ್ಪ ದೂರ ಕ್ರಮಿಸಿದರೆ ನಾವು ಸಿಗುತ್ತೇವೆ. ಬೇರೆ ಬೇರೆ ಗಾತ್ರದ, ಬಣ್ಣದ, ಆಕಾರದ ನಮ್ಮನ್ನು ಕಂಡರೆ, ಕುತೂಹಲದಿಂದ ನಮ್ಮ ಬಗ್ಗೆ ಮಾಹಿತಿ ಸಂಗ್ರಹಿಸುತ್ತೀರಿ. ಸ್ವಲ್ಪ ಸಮಯ ನೋಡುತ್ತಲೇ ಇರುತ್ತೀರಿ...’
‘ನಾವು ವಿವಿಧ ಜಾತಿಯ ಜಾನುವಾರುಗಳು. ರೈತನ ಮಿತ್ರನಾಗಿ, ಹೈನುಗಾರಿಕೆ ಮತ್ತು ಕೃಷಿಯಲ್ಲಿ ಜವಾಬ್ದಾರಿಯಿಂದ ದುಡಿಯುತ್ತೇವೆ. ಪ್ರತಿ ಸಲದಂತೆ ಈ ವರ್ಷವೂ ಕೃಷಿಮೇಳಕ್ಕೆ ಬಂದಿದ್ದೇವೆ’
ನಾವು ಯಾರೆಲ್ಲ ಬಂದಿದ್ದೇವೆ, ನಮ್ಮ ವಿಶೇಷತೆಗಳೇನು ಎಂಬುದನ್ನು ನಾವೇ ಹೇಳುತ್ತೇವೆ, ಕೇಳಿ...
ದೇವಣಿ (ದಿಯೋನಿ) : ಕಪ್ಪು ಮಚ್ಚೆಗಳಿರುವ ಬಿಳಿ ಬಣ್ಣ, ಶಂಖಾಕಾರದ ಕೊಂಬು, ದೊಡ್ಡದಾದ ಗಂಗತೊಗಲು, ಇದು ನನ್ನ ರೂಪ. ಮಹಾರಾಷ್ಟ್ರದ ಲಾತೂರ್, ನಾಂದೆಡ್ ಉಸ್ಮಾನಬಾದ್, ಕರ್ನಾಟಕದ ಬೀದರ್ ನನ್ನ ಮೂಲ.
ಗಿರ್: ಉಬ್ಬಿದ ಹಣೆ, ಜೋತು ಬಿದ್ದ ಕಿವಿಗಳು, ಕೆಂಪು ಮತ್ತು ಹಳದಿ ಮಿಶ್ರಿತ ಬಣ್ಣ, ಮೃದು ಚರ್ಮ, ದೊಡ್ಡ ಗಾತ್ರದ ಕೆಚ್ಚಲು, ಇವು ನನ್ನ ಲಕ್ಷಣ. ಗುಜರಾತ್‌ನ ಜುನಾಗಢ, ಕಾತ್ಯಾವಾಡ, ರಾಜಕೋಟ್ ನನ್ನ ಮೂಲ.
ಥಾರ್ ಪಾರಕರ್: ಮಧ್ಯಮ ಗಾತ್ರದ ತಲೆ, ಚಪ್ಪಟ ಹಣೆ, ಉದ್ದ ಕಿವಿಗಳು, ಬಿಳಿ ಹಾಗೂ ಬೂದು ಬಣ್ಣ ನನ್ನ ಆಕಾರವಿದು. ಪಾಕಿಸ್ತಾನದ ಸಿಂಧ್ ಪ್ರಾಂತದ ಥಾರ್ಪಾರ್ಕರ್, ರಾಜಸ್ಥಾನ ಬಾರ್‌ಮೆರ್, ಜೋಧ್‌ಪುರ ನನ್ನ ಮೂಲ.
ಗಿರ್: ವಿಶಾಲವಾದ ಮುಂದಲೆ, ಜೋತುಬಿದ್ದ ಕಿವಿಗಳು, ಸಮತಟ್ಟಾದ ಹಿಂಭಾಗ ನನ್ನ ಲಕ್ಷಣ. ಗುಜರಾತ್‌ನ ಕಥಿಯಾವರಿ ನನ್ನ ಮೂಲ ನೆಲೆ.
ಎಚ್.ಎಫ್. ಮಿಶ್ರತಳಿ ಆಕಳು: ಭಾರತದ ತಳಿಗಳೊಂದಿಗೆ ವಿದೇಶದ ಎಚ್.ಎಫ್. (ಹೋಲ್‌ಸ್ಟೀನ್ ಫ್ರಿಜಿಯರ್) ತಳಿಯೊಂದಿಗೆ ಸಂಕರಣಗೊಂಡ ಮಿಶ್ರತಳಿ. ಕಪ್ಪು–ಬಿಳುಪು, ಕಪ್ಪು–ಕೆಂಪು, ಕೆಂಪು–ಬಿಳಿ ಮೈಬಣ್ಣ, ದೊಡ್ಡಗಾತ್ರ ನನ್ನದು.
ಬಳಿ ಹಾಗೂ ಬೂದು ಬಣ್ಣ, ಉದ್ದ ತಲೆಯುಳ್ಳ ನಾನು ‘ಹಳ್ಳಿಕಾರ್’, ವಿಶಾಲ ಎದೆ, ಸದೃಢ ಕಾಲು, ಮಧ್ಯಮ ಗಾತ್ರದ ಮೈಕಟ್ಟಿರುವ ನಾನು ‘ಖಿಲಾರಿ’ ಸಹ ಇದ್ದೇನೆ.
ನಮ್ಮಿಂದ ಅಣತಿ ದೂರದಲ್ಲೇ ರಾಷ್ಟ್ರೀಯ ಮನ್ನಣೆ ಪಡೆದ ಧಾರವಾಡ ಎಮ್ಮೆ, ಗುಜರಾತ್ ಮೂಲದ ಜಾಫರಾಬಾದಿ ಎಮ್ಮೆ, ಸೂರ್ತಿ ಎಮ್ಮೆ, ಪಂಜಾಬ್ ಹಾಗೂ ಹರ್ಯಾಣ ಮೂಲದ ಮುರ‍್ರಾ ಎಮ್ಮೆಗಳು ಸಹ ಇವೆ.
ನಮ್ಮ ಬಗ್ಗೆ ಹೆಚ್ಚು ಗೊತ್ತಾಗಬೇಕಾ? ಬಿಡುವು ಮಾಡಿಕೊಂಡು ಬನ್ನಿ ಕೃಷಿ ಮೇಳಕ್ಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.