ADVERTISEMENT

ಕೃಷಿ–ಖುಷಿ | ಹುಬ್ಬಳ್ಳಿ: ಬದುಕಿಗೆ ಭರವಸೆ ಮೂಡಿಸಿದ ಕೃಷಿ

ಸಮಗ್ರ ಕೃಷಿಯಲ್ಲಿ ಕಲಘಟಗಿ ತಾಲ್ಲೂಕಿನ ಕಾಸನಕೊಪ್ಪದ ರೈತ ಉತ್ತಮ ದಾದಾಗೋಳ ಸಾಧನೆ

ಕಲಾವತಿ ಬೈಚಬಾಳ
Published 22 ನವೆಂಬರ್ 2024, 4:31 IST
Last Updated 22 ನವೆಂಬರ್ 2024, 4:31 IST
ಆಡು ಸಾಕಾಣಿಕೆಯಲ್ಲಿ ತೊಡಗಿಕೊಂಡಿರುವ ಕಲಘಟಗಿ ತಾಲ್ಲೂಕಿನ ಕಾಸನಕೊಪ್ಪದ ರೈತ ಉತ್ತಮ ದಾದಾಗೋಳ
ಆಡು ಸಾಕಾಣಿಕೆಯಲ್ಲಿ ತೊಡಗಿಕೊಂಡಿರುವ ಕಲಘಟಗಿ ತಾಲ್ಲೂಕಿನ ಕಾಸನಕೊಪ್ಪದ ರೈತ ಉತ್ತಮ ದಾದಾಗೋಳ   

ಹುಬ್ಬಳ್ಳಿ: ಪಿಯುಸಿ ಮುಗಿಸಿ ಬಿ.ಎ ಪದವಿ ಓದಲು ಶುಲ್ಕ ಕಟ್ಟಲು ಹಣವಿಲ್ಲದೇ ಗ್ರಾಮಕ್ಕೆ ಮರಳಿದ ಕಲಘಟಗಿ ತಾಲ್ಲೂಕಿನ ಕಾಸನಕೊಪ್ಪದ ರೈತ ಉತ್ತಮ ದಾದಾಗೋಳ ಅವರು ಹೊರಳಿದ್ದು ಕೃಷಿ ಕ್ಷೇತ್ರದತ್ತ.

ಕೃಷಿ ಕುಟುಂಬದವರಾದ ಅವರು ತಮ್ಮ 16 ಎಕರೆ ಜಮೀನಿನಲ್ಲಿ 15 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, 10 ಎಕರೆಯಲ್ಲಿ ಕಬ್ಬು, ಎರಡು ಎಕರೆಯಲ್ಲಿ 80 ಮಾವಿನ ಗಿಡಗಳನ್ನು ಮತ್ತು ಗೋವಿನಜೋಳ (ಡಿಕೆಸಿ9178 ತಳಿ), ಅರ್ಧ ಎಕರೆ ಸುಬಾಬೂಲ್‌ ಮರಗಳನ್ನು ಬೆಳೆಸಿದ್ದಾರೆ. ಅಲ್ಲದೇ ಕೋಳಿ, ಆಡು, ಮೀನು ಸಾಕಾಣಿಕೆ ಮಾಡುತ್ತ ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

‘ಧಾರವಾಡದಲ್ಲಿ 4 ಕೆಜಿ ಗೋವಿನಜೋಳ ಬೀಜಗಳನ್ನು ಖರೀದಿಸಿರುವೆ. ಎಕರೆಗೆ 12 ಕ್ವಿಂಟಲ್‌ ಇಳುವರಿ ಸಿಗುವ ನಿರೀಕ್ಷೆ ಇದೆ.‌ ಹುಬ್ಬಳ್ಳಿ– ಧಾರವಾಡದಲ್ಲಿ ಮಾರುಕಟ್ಟೆಯನ್ನು ಕಂಡುಕೊಂಡಿದ್ದು, ಕ್ವಿಂಟಲ್‌ಗೆ ₹2,200 ದರ ಸಿಗಲಿದೆ’ ಎಂದು ಕೃಷಿಕ ಉತ್ತಮ ದಾದಾಗೋಳ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಏಳೆಂಟು ವರ್ಷಗಳಿಂದ ಕಬ್ಬು ಬೆಳೆಯುತ್ತ ಬಂದಿರುವ ಅವರು, ಈ ಮುನ್ನ 86032 ತಳಿಯ ಕಬ್ಬನ್ನೇ ಬೆಳೆಯುತ್ತಿದ್ದರು. ಕಬ್ಬು ಕಟಾವು ಮಾಡಲು ಬರುವವರ ಕೊರತೆ ಎದುರಾದ ಕಾರಣ ಅದನ್ನು ಕೈಬಿಟ್ಟು, ಈ ವರ್ಷ ಹಳಿಯಾಳದಿಂದ ₹2.40ಕ್ಕೆ ಒಂದರಂತೆ ಚಂದಗಡ ತಳಿಯ ಕಬ್ಬಿನ ಸಸಿಗಳನ್ನು ಖರೀದಿಸಿ, 10 ಎಕರೆಯಲ್ಲಿ ನಾಟಿ ಮಾಡಿದ್ದಾರೆ. ಕಳೆದ ವರ್ಷ ಒಟ್ಟು 386 ಟನ್‌ ಇಳುವರಿ ಪಡೆದ ಇವರು, ಬರೋಬ್ಬರಿ ₹9 ಲಕ್ಷ ಆದಾಯ ಪಡೆದಿದ್ದಾರೆ. ಹಳಿಯಾಳದ ಕಾರ್ಖಾನೆಗೆ ಕಬ್ಬು ಕಳಿಸುತ್ತೇವೆ. ಟನ್‌ಗೆ ₹3,400ರವೆಗೆ ದರ ಸಿಗಲಿದ್ದು, ₹10 ಲಕ್ಷಕ್ಕೂ ಅಧಿಕ ಆದಾಯದ ನಿರೀಕ್ಷೆಯಲ್ಲಿ ಇದ್ದಾರೆ.

‘ಕಳೆದ ವರ್ಷದಿಂದ 50 ಜವಾರಿ (ನಾಟಿ) ಕೋಳಿಗಳನ್ನು ಸಾಕುತ್ತಿರುವೆ. ವಾರಕ್ಕೆ ಕನಿಷ್ಟ 100 ಮೊಟ್ಟೆ ಪಡೆಯುತ್ತೇನೆ. ಮೊಟ್ಟೆ ಒಂದಕ್ಕೆ ₹12ರಂತೆ ಮಾರುತ್ತಿದ್ದು,, ಗೌಟಿ ಔಷಧ ತಯಾರಕರು, ಬಾಣಂತಿಯರು, ಗರ್ಭಿಣಿಯರಿಂದ ಹೆಚ್ಚು ಬೇಡಿಕೆ ಬರುತ್ತದೆ. ಕಳೆದ ದಸರಾ ಹಬ್ಬದಲ್ಲಿ ನಡೆದ ಜಾತ್ರೆಯಲ್ಲಿ ಹುಂಜಗಳಿಗೆ ಭಾರಿ ಬೇಡಿಕೆ ಇತ್ತು. ಒಟ್ಟು ₹10,000 ದಷ್ಟು ಹುಂಜಗಳನ್ನು ಮಾರಾಟ ಮಾಡಿರುವೆ’ ಎಂದು ಅವರು ತಿಳಿಸಿದರು.

‘ಮೂರ್ನಾಲ್ಕು ತಳಿಯ 40 ಆಡುಗಳು,  2 ಎಮ್ಮೆ, 2 ಎತ್ತು, ಜರ್ಸಿ ಆಕಳು ಸಾಕುತ್ತಿರುವೆ. ನಿತ್ಯ ಮನೆ ಬಳಕೆಯಾಗಿ ಉಳಿಯುವ ಅಂದಾಜು ನಾಲ್ಕೈದು ಲೀಟರ್‌ ಎಮ್ಮೆ ಹಾಲನ್ನು ₹35ರಂತೆ ಮಾರುತ್ತೇವೆ. ಕೃಷಿ ಇಲಾಖೆ ನೆರವಿನಿಂದ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, ಕಳೆದ ವರ್ಷ ಮುಂಡಗೋಡಿನಿಂದ ಸಾವಿರ ಮೀನು ಮರಿಗಳನ್ನು ಮತ್ತು ಈ ವರ್ಷ ಎರಡು ಸಾವಿರ ಮೀನಿನ ಮರಿಗಳನ್ನು ಹೊಂಡದಲ್ಲಿ ಬಿಟ್ಟಿರುವೆ. ಆರು ತಿಂಗಳಲ್ಲಿ ಒಂದೂವರೆ ಕೆ.ಜಿ ವರೆಗೆ ತೂಕ ಬರುವಂತೆ ಮರಿಗಳನ್ನು ಬೆಳೆಸಬೇಕಾಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕೆ.ಜಿಗೆ ₹40ರಂತೆ ದರ ಸಿಗಲಿದೆ’ ಎಂದರು.

ಕೃಷಿ ಸಂಬಂಧಿ ಏನೇ ಸಂದೇಹ ಸಮಸ್ಯೆಗಳಿದ್ದರೂ ಕೃಷಿ ಇಲಾಖೆಯ ಅಧಿಕಾರಿಗಳನ್ನು ತಕ್ಷಣ ಸಂಪರ್ಕಿಸಿ ಮಾರ್ಗದರ್ಶನ ಪಡೆಯುತ್ತೇನೆ. ಕೂಡು ಕುಟುಂಬದ ಸಹಕಾರವಿದೆ
–ಉತ್ತಮ ದಾದಾಗೋಳ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.