ಧಾರವಾಡ: ‘ಕೋವಿಡ್–19 ಸೋಂಕು ಮತ್ತು ಬಸ್ ಮುಷ್ಕರದಿಂದಾಗಿ ಮುಂದೂಡಲಾಗಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಪರೀಕ್ಷೆಗಳು ಇದೇ ಆ. 16ರಿಂದ ಆರಂಭವಾಗಲಿದೆ. ಈ ಬಾರಿ ಬೆಸ ಸೆಮಿಸ್ಟರ್‌ಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ‘ ಎಂದು ಕುಲಪತಿ ಪ್ರೊ. ಕೆ.ಬಿ.ಗುಡಸಿ ತಿಳಿಸಿದರು.
‘ಈ ಮೊದಲು ಸಮ ಹಾಗೂ ಬೆಸ ಸೆಮಿಸ್ಟರ್ ಪರೀಕ್ಷೆಗಳನ್ನು ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮೂಲಕ ನಡೆಸಲು ನಿರ್ಧರಿಸಲಾಗಿತ್ತು. ಆದರೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ)ದ ನಿರ್ದೇಶನ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಬೆಸ ಸೆಮಿಸ್ಟರ್‌ಗಳಿಗೆ ಹಾಗೂ ಅಂತಿಮ ವರ್ಷದ ಬೆಸ ಹಾಗೂ ಸಮ ಸೆಮಿಸ್ಟರ್ ಪರೀಕ್ಷೆಯನ್ನು ವಿವರಣಾತ್ಮಕಪರೀಕ್ಷಾ ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ‘ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಒಂದು ಪರಿಕ್ಷೆ ನಡೆಸಲು ವಿಶ್ವವಿದ್ಯಾಲಯಕ್ಕೆ 70 ದಿನಗಳು ಬೇಕು. ಆದರೆ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸಲು ಹೆಚ್ಚು ಸಮಯಾವಕಾಶ ಇರಲಿಲ್ಲದ ಕಾರಣ ಬಹು ಆಯ್ಕೆ ಪ್ರಶ್ನೆಪತ್ರಿಕೆ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳೂ ಪೂರ್ಣಗೊಂಡಿದ್ದವು. ಆದರೆ ಈಗಾಗಲೇ ಬೇರೆ ವಿಶ್ವವಿದ್ಯಾಲಯಗಳಲ್ಲಿ ಕೆಲವೊಂದು ಪರೀಕ್ಷೆಗಳು ವಿವರಣಾತ್ಮಕ ಪ್ರಶ್ನೆಪತ್ರಿಕೆ ಮಾದರಿಯಲ್ಲಿ ನಡೆದಿರುವ ಕಾರಣ, ಅದೇ ಮಾದರಿಯನ್ನೇ ಎಲ್ಲಾ ವಿಶ್ವವಿದ್ಯಾಲಯಗಳೂ ಅನುಸರಿಸುವಂತೆ ಸರ್ಕಾರ ಸೂಚಿಸಿತು‘ ಎಂದು ತಿಳಿಸಿದರು.
‘ಹೀಗಾಗಿ ಸಮ ಸೆಮಿಸ್ಟರ್ ಪರೀಕ್ಷೆಗಳನ್ನು (2, 4) ನಡೆಸದೇ, ಹಿಂದಿನ ಬೆಸ ಸೆಮಿಸ್ಟರ್‌ನ ಫಲಿತಾಂಶ ಮತ್ತು ಸದ್ಯದ ಸೆಮಿಸ್ಟರ್‌ನ ಆಂತರಿಕ ಮೌಲ್ಯಮಾಪನದ ಫಲಿತಾಂಶವನ್ನು ಕ್ರೋಡೀಕರಿಸಿ ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಲಾಗಿದೆ. ಜತೆಗೆ ಇದೇ 26ರಿಂದ ಆಫ್‌ಲೈನ್ ತರಗತಿಗಳು ಆರಂಭವಾಗುತ್ತಿರುವುದರಿಂದ ಆ. 7ರವರೆಗೆ ಪುನಾರಾವರ್ತಿತ ತರಗತಿಗಳನ್ನು ನಡೆಸಲಾಗುವುದು. ಈ ಅವಧಿಯಲ್ಲಿ ಪ್ರಾಯೋಗಿಕ ತರಗತಿಗಳನ್ನೂ ನಡೆಸಲು ನಿರ್ಧರಿಸಲಾಗಿದೆ‘ ಎಂದರು.
‘ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ನಡೆಯುವ ಪರೀಕ್ಷೆಯ ಮೌಲ್ಯಮಾಪನವನ್ನು ಆಯಾ ಜಿಲ್ಲೆಯಲ್ಲೇ ನಡೆಸುವ ನಿಟ್ಟಿನಲ್ಲೂ ಚಿಂತನೆ ನಡೆದಿದೆ. ಇದರೊಂದಿಗೆ 70 ಹಾಗೂ 71ನೇ ಘಟಿಕೋತ್ಸವ ಆನ್‌ಲೈನ್ ಮೂಲಕ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತಂತೆ ರಾಜ್ಯಪಾಲರ ಅನುಮತಿ ಕೋರಲಾಗಿದೆ‘ ಎಂದು ಪ್ರೊ. ಗುಡಸಿ ತಿಳಿಸಿದರು.
‘ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಲಸಿಕೆ ನೀಡುವ ಕಾರ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಶೇ 99 ಗುರಿಸಾಧನೆಯೊಂದಿಗೆ ರಾಜ್ಯದ ಇತರ ವಿಶ್ವವಿದ್ಯಾಲಯಗಳಿಗಿಂತ ಉತ್ತಮ ಸಾಧನೆ ಮಾಡಿದೆ. ಒಟ್ಟು 1,08,915 ವಿದ್ಯಾರ್ಥಿಗಳಲ್ಲಿ 1,08,148 ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ‘ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.