ADVERTISEMENT

ಕುಂದಗೋಳ | ಅಭಿವೃದ್ಧಿಗೆ ಕಾದಿದೆ ಶಂಭುಲಿಂಗೇಶ್ವರ ದೇಗುಲ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 5:54 IST
Last Updated 18 ಜೂನ್ 2024, 5:54 IST
ಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬಿದ್ದಿರುವ ಕಸ.
ಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬಿದ್ದಿರುವ ಕಸ.   

ಕುಂದಗೋಳ: ಎಲ್ಲೆಡೆ ಬೆಳೆದಿರುವ ಹುಲ್ಲು, ಅಲ್ಲಲ್ಲಿ ಎಲೆ-ಅಡಕೆ ಮತ್ತು ಗುಟ್ಕಾ ತಿಂದು ಉಗುಳಿರುವ ಕಲೆ. ಪ್ಲ್ಯಾಸ್ಟಿಕ್ ಕಸ, ತಾಜ್ಯದಿಂದ ತುಂಬಿರುವ ಕಸದ ಡಬ್ಬಿಗಳು ಇವೆಲ್ಲ ಕಂಡು ಬಂದದ್ದು ಕುಂದಗೋಳ ಪಟ್ಟಣದಲ್ಲಿರುವ ಐತಿಹಾಸಿಕ ಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ.

ಗಣೇಶ, ಪಾರ್ವತಿ, ನಂದಿ, ಕನ್ನಡಿಯಂತಿರುವ ಕಂಬಗಳು, ದೇವಸ್ಥಾನದ ಗೋಡೆ ಮೇಲೆ ಅಲ್ಲಲ್ಲಿ ಕಾಣುವ ಅಕ್ಷರಗಳ ಕೆತ್ತನೆ, ಗೋಪುರ ಈ ದೇವಸ್ಥಾನದ ಆಕರ್ಷಣೆಗಳು. ಇತರೆ ಶಿವ ದೇವಾಲಯದಲ್ಲಿ ಸಾಮಾನ್ಯವಾಗಿ ಶಿವಲಿಂಗ ಕಪ್ಪು ಬಣ್ಣದಲ್ಲಿ ಕಂಡು ಬಂದರೆ ಈ ದೇವಸ್ಥಾನದ ದೈವ ಶಿವಲಿಂಗ ಕಂದು ಬಣ್ಣದಲ್ಲಿ ಕಂಡುಬರುತ್ತದೆ ಇದೆ ಇಲ್ಲಿನ ವಿಶೇಷತೆ.

ಈ ದೇವಸ್ಥಾನಕ್ಕೆ ಸರಿಯಾದ ಭದ್ರತೆ ಇಲ್ಲ. ಸಿಸಿ ಟಿವಿ ಕ್ಯಾಮೆರಾದ ವ್ಯವಸ್ಥೆಯಿಲ್ಲ. ಪ್ರವಾಸಿಗರು ಬಂದರೆ ಕುಳಿತುಕೊಳ್ಳಲು ಆಸನಗಳಿಲ್ಲ. ಅಸಮರ್ಪಕ ವಿದ್ಯುತ್ ವ್ಯವಸ್ಥೆ, ದೇವಸ್ಥಾನದ ಇತಿಹ್ಯ ತಿಳಿಯಲು ದೊಡ್ಡ ಫಲಕದ ಕೊರತೆ, ದೇವಸ್ಥಾನದ ಬಗ್ಗೆ ವಿವರಿಸಲು ಒಬ್ಬ ಗೈಡ್ ಅವಶ್ಯಕತೆಯಿಲ್ಲ. ಒಟ್ಟಾರೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ದೇವಸ್ಥಾನ ಸೊರಗಿದೆ.

ADVERTISEMENT

11ನೇ ಶತಮಾನದಲ್ಲಿ ಪಶ್ಚಿಮ ಚಾಲುಕ್ಯರ ಅವಧಿಯಲ್ಲಿ ನಿರ್ಮಾಣವಾದ ದೇವಸ್ಥಾನ ಇಂದು ಅನಾಥ ಸ್ಥಿತಿಯಲ್ಲಿದೆ. ಉತ್ತರ ಕರ್ನಾಟಕಕ್ಕೆ ಬರುವ ಪ್ರವಾಸಿಗರು, ಶೇಕ್ಷಣಿಕ ಪ್ರವಾಸದ ನಿಮಿತ್ತ ಬರುವ ವಿದ್ಯಾರ್ಥಿಗಳು ಕುಂದಗೋಳ ಪಟ್ಟಣದಲ್ಲಿರುವ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿವುದು ಸಾಮಾನ್ಯವಾಗಿತ್ತು. ಆದರೆ ಇದೀಗ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.

ದೇವಸ್ಥಾನದ ಪಕ್ಕ ಸರ್ಕಾರಿ ಪ್ರಾಥಮಿಕ ಶಾಲೆ, ಮತ್ತು ಅಂಗನವಾಡಿಯಿದ್ದು, ಮಕ್ಕಳು ದೇವಸ್ಥಾನದ ಶಿಲ್ಪಗಳ ಮೇಲೆ ಹತ್ತುವುದು, ಆಟಕ್ಕೆ ದೇವಸ್ಥಾನದ ಗೋಡೆ, ಕಂಬ ಬಳಸಿಕೊಳ್ಳುವುದರಿಂದ ಅವು ಅಪಾಯದಲ್ಲಿವೆ. ಅಲ್ಲಲ್ಲಿ ಕೆಲವು ಕಡೆ ವಿರೂಪಗೊಂಡಿವೆ. ದೇವಸ್ಥಾನದ ಅವರಣದಲ್ಲಿ ದನ ಕರು ಕಟ್ಟಲಾಗುತ್ತಿದೆ. ಪ್ರವೇಶ ದ್ವಾರ ಸ್ಥಳೀಯರ ಹರಟೆ ಕಟ್ಟೆಯಾಗಿದೆ. ಉತ್ತಮ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರ ಇಂದು ಈ ಸ್ಥಿತಿಯಲ್ಲಿರುವುದು ನೋವು ತಂದಿದೆ ಎನ್ನುತ್ತಾರೆ ಸ್ಥಳೀಯರು.

ಕುಂದಗೋಳ ಪಟ್ಟಣದಲ್ಲಿರುವ ಶಂಭುಲಿಂಗೇಶ್ವರ ದೇವಸ್ಥಾನ ಗೋಡೆ ಪಕ್ಕವೇ ದ್ವಿಚಕ್ರ ವಾಹನ ನಿಲ್ಲಿಸಲಾಗಿದೆ.
ಶಂಭುಲಿಂಗೇಶ್ವರ ದೇವಸ್ಥಾನ ಕೆತ್ತನೆಯಿರುವ ಗೋಡೆ ಮೇಲೆರಿ ಮಕ್ಕಳು ಅಟವಾಡುತ್ತಿರುವುದು.
ಕುಂದಗೋಳ ಪಟ್ಟಣದಲ್ಲಿರುವ ಶಂಭುಲಿಂಗೇಶ್ವರ ದೇವಸ್ಥಾನ

ಸಮಸ್ಯೆ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವೆ. ದೇವಸ್ಥಾನಕ್ಕೆ ಮೂಲಸೌಕರ್ಯ ಒದಗಿಸಲಾಗುವುದು.

-ಎಂ.ಆರ್.ಪಾಟೀಲ, ಶಾಸಕ

 ದೇವಸ್ಥಾನದ ಪಕ್ಕದ ಶಾಲೆ ಅಂಗನವಾಡಿಯನ್ನು ಬೇರೆಡೆ ಸ್ಥಳಾಂತರವಾಗಬೇಕು. ಸೂಕ್ತ ಭದ್ರತೆ ಒದಗಿಸಿದರೆ ಉತ್ತಮ ಪ್ರವಾಸಿ ಕೇಂದ್ರವಾಗುತ್ತದೆ.  

-ಸಂಗಮೇಶ ಕೆ.ಎನ್. ಕುಂದಗೋಳ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.