ADVERTISEMENT

ರೈತರಿಗೆ ‘ಕುಸುಮ್’ ವರದಾನ | ಸೌರ ಪಂಪ್‌ಸೆಟ್‌ಗೆ ಸಹಾಯಧನ: 18,000 ಅರ್ಜಿ ಸಲ್ಲಿಕೆ

ಪೂರ್ಣಿಮಾ ಗೊಂದೆನಾಯ್ಕರ
Published 15 ಜೂನ್ 2024, 23:50 IST
Last Updated 15 ಜೂನ್ 2024, 23:50 IST
   

ಹುಬ್ಬಳ್ಳಿ: ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಪಿಎಂ ಕುಸುಮ್ ಯೋಜನೆಯಡಿ ಪ್ರಸಕ್ತ ವರ್ಷದ ಮಾರ್ಚ್‌ ಅಂತ್ಯದವರೆಗೆ ರಾಜ್ಯದಲ್ಲಿ 18,000 ಅರ್ಜಿಗಳು ಸಲ್ಲಿಕೆಯಾಗಿವೆ.

ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಅತಿಹೆಚ್ಚು ಸಲ್ಲಿಕೆಯಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ರೈತರು ಹೆಸರು ನೋಂದಣಿ ಮಾಡಿಸಿದ್ದಾರೆ.

ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಈ ಯೋಜನೆಯಡಿ ರೈತರಿಗೆ ರಿಯಾಯಿತಿ ದರದಲ್ಲಿ ಸೌರ ಪಂಪ್‌ಸೆಟ್‌ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಶೇ 30ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 50ರಷ್ಟು ಸಹಾಯಧನ ಸೌಲಭ್ಯ ಕಲ್ಪಿಸಲಿದೆ. ಫಲಾನುಭವಿಗಳು ಕೇವಲ ಶೇ 20 ಹಣ ಭರಿಸಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ADVERTISEMENT

ಸೌರ ಪಂಪ್‌ಸೆಟ್ ಬಳಕೆಯಿಂದ 8 ಗಂಟೆ ಕಾಲ ಹಗಲಿನಲ್ಲಿ ವಿದ್ಯುತ್ ಪೂರೈಕೆ ಆಗುತ್ತದೆ. ಇದರಿಂದ ರಾತ್ರಿ ವೇಳೆ ರೈತರಿಗೆ ಸಮಸ್ಯೆ ಆಗುವುದಿಲ್ಲ. ವರ್ಷ ಪೂರ್ತಿ ಸೌರ ವಿದ್ಯುತ್ ಮೂಲಕ ಕೃಷಿ ಚಟುವಟಿಕೆಗೆ ನೀರು ಪೂರೈಸಬಹುದಾಗಿದೆ. 

‘ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಕಬ್ಬು ಬೆಳೆಯುವ ಕಾರಣ ನೀರಿನ ಬಳಕೆ ಹೆಚ್ಚಿದೆ. ಬಹುತೇಕ ರೈತರು ಕೊಳವೆಬಾವಿ, ಕಾಲುವೆಗಳನ್ನು ಅವಲಂಬಿಸಿದ್ದಾರೆ. ವಿದ್ಯುತ್‌ನ ಅಸಮರ್ಪಕ ಪೂರೈಕೆಯಿಂದ ಬೆಳೆಗಳಿಗೆ ನೀರು ಪೂರೈಸಲು ಆಗುವುದಿಲ್ಲ. ಕುಸುಮ್ ಯೋಜನೆಯಡಿ ಸೌರ ಪಂಪ್‌ಸೆಟ್‌ ಲಭಿಸುವುದದಿಂದ ನೀರು ಪೂರೈಕೆಗೆ ಹೆಚ್ಚು ಸಮಸ್ಯೆ ಆಗುವುದಿಲ್ಲ’ ಎಂದು ಆ ಜಿಲ್ಲೆಯ ರೈತರು ಹೇಳುತ್ತಾರೆ.

ಕುಸುಮ್‌ ‘ಬಿ’ ಯೋಜನೆಯಡಿ ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸಲು ಮತ್ತು ಸೌರಶಕ್ತಿ ಬಳಕೆಗೆ ಉತ್ತೇಜನ ನೀಡಲು ಸರ್ಕಾರದಿಂದ ಹೆಚ್ಚಿನ ಸಹಾಯಧನ ಸಿಗುತ್ತದೆ. ಕೃಷಿ ಭೂಮಿಯಲ್ಲಿ ಅಳವಡಿಸಲಾಗುವ ಸೌರಶಕ್ತಿ ಪಂಪ್‌ಸೆಟ್‌ಗಳನ್ನು ಪೂರೈಕೆದಾರರೇ ಐದು ವರ್ಷ ಉಚಿತವಾಗಿ ನಿರ್ವಹಿಸಲಿದ್ದಾರೆ.

ಕುಸುಮ್‌ ‘ಸಿ’ ಯೋಜನೆಯಡಿ ಸ್ವಂತ ಬಳಕೆಯ ಜೊತೆಗೆ, ಸೌರ ವಿದ್ಯುತ್ ಮಾರಾಟ ಮಾಡಿ ರೈತರು ಹೆಚ್ಚುವರಿ ಆದಾಯ ಪಡೆಯಬಹುದು. ಐಪಿ ಸೆಟ್‌ಗಳಿಗೆ ಸೌರ ವಿದ್ಯುತ್‌ ಮೂಲದಿಂದ ವಿದ್ಯುತ್‌ ಪೂರೈಸಬಹುದು. ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆ ಹೆಚ್ಚುವುದರಿಂದ ರೈತರ ಅಗತ್ಯಕ್ಕೆ ತಕ್ಕಂತೆ ಹಗಲು ವಿದ್ಯುತ್ ಪೂರೈಸಲು ಸಾಧ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.