ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಕಾಯ್ದೆಗಳ ತಿದ್ದುಪಡಿ ಹಾಗೂ ಖಾಸಗೀಕರಣ ವಿರೋಧಿಸಿ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ಮುಷ್ಕರದ ಅಂಗವಾಗಿ ವಿವಿಧ ಸಂಘಟನೆಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದವು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಬ್ಯಾಂಕ್, ವಿಮಾ, ದೂರ ಸಂಪರ್ಕ, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ, ಆಶಾ, ಕಟ್ಟಡ, ಹಮಾಲಿ, ಗ್ರಾಮ ಪಂಚಾಯಿತಿ, ಆಟೊ ಚಾಲಕರು, ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಸಿಐಟಿಯು ಮುಖಂಡ ಮಹೇಶ ಪತ್ತಾರ, ‘ಕೋವಿಡ್‌ನಿಂದಾಗಿ ಬಂಡವಾಳಶಾಹಿಗಳಿಗೆ ಅನೇಕ ರಿಯಾಯಿತಿಗಳನ್ನು ಪ್ರಕಟಿಸಿದ ಸರ್ಕಾರ ಲಾಕ್‌ಡೌನ್‌ನಿಂದ ಸಂತ್ರಸ್ತರಾದ ವಲಸೆ ಕಾರ್ಮಿಕರು, ಅಸಂಘಟಿತರು, ಕೈಗಾರಿಕಾ ಕಾರ್ಮಿಕರು, ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಸ್ಕೀಂ ನೌಕರರು, ಪಂಚಾಯಿತಿ, ಮುನ್ಸಿಪಲ್ ಕಾರ್ಮಿಕರ ನೆರವಿಗೆ ಬಂದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಟಿಯುಸಿಯದೇವಾನಂದ ಜಗಾಪೂರ ಮಾತನಾಡಿ, ‘ಸರ್ಕಾರವು ಕೃಷಿ, ಎಪಿಎಂಸಿ, ಭೂ ಸುಧಾರಣೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಕಾರ್ಪೊರೇಟ್ ಬಂಡವಾಳಗಾರರಿಗೆ ಲಾಭ ಮಾಡಿ ಕೊಡುತ್ತಿದೆ. ಸಾರ್ವಜನಿಕ ಕ್ಷೇತ್ರದ ಉದ್ಯಮ ಮತ್ತು ಸೇವೆಗಳನ್ನು ಖಾಸಗೀಕರಣ ಮಾಡುತ್ತಿದೆ’ ಎಂದರು.
‘ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಕಾರ್ಮಿಕ ಸಂಹಿತೆಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಖಾಸಗೀಕರಣ ನಿಲ್ಲಿಸಬೇಕು. ನರೇಗಾದಡಿ 200 ದಿನ ಉದ್ಯೋಗ ನೀಡಬೇಕು. ಎಲ್ಲಾ ಕಾರ್ಮಿಕರಿಗೂ ಪಿಂಚಣಿ ನೀಡಬೇಕು. ಅಂಗನವಾಡಿ ನೌಕರರನ್ನು ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.
ಬಳಿಕ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಮತ್ತು ಪ್ರಧಾನಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಿದರು.ಟಿಯುಸಿಸಿಯ ಅಶೋಕ ಬಾರ್ಕಿ, ಎಐಯುಟಿಯುಸಿ ಗಂಗಾಧರ ಬಡಿಗೇರ, ಎಐಆರ್‌ಆರ್‌ಬಿಇಎ ಜಿ.ಎಂ. ವೈದ್ಯ, ಎಐಐಇಎ ಎಂ. ಗಿಲ್ಬರ್ಟ್, ಎಐಬಿಇಎ ಬಾಲಕೃಷ್ಣ, ಬಿಎಸ್‌ಎನ್‌ಎಲ್ಇಯು ಹರೀಶ ದೊಡ್ಡಮನಿ, ಪೌರ ಕಾರ್ಮಿಕ ಸಂಘದ ವಿಜಯ ಗುಂಟ್ರಾಳ, ಕಳಸಾ ಬಂಡೂರಿ ಹೋರಾಟ ಸಮಿತಿಯ ಅಮೃತ ಇಜಾರಿ, ಶಿವಣ್ಣ ಹುಬ್ಬಳ್ಳಿ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಹುಲಿಗೆಮ್ಮ ಚಲವಾದಿ, ಆಟೊ ರಿಕ್ಷಾ ಚಾಲಕರ ಸಂಘದ ಪುಂಡಲೀಕ ಬಡಿಗೇರ, ರಮೇಶ ಭೂಸ್ಲೆ, ಕಟ್ಟಡ ಕಾರ್ಮಿಕರ ಸಂಘದ ಎ.ಎಸ್. ಪೀರಜಾದೆ, ಎಂ.ಎಚ್. ಮುಲ್ಲಾ, ಹಮಾಲಿ ಕಾರ್ಮಿಕರ ಸಂಘದ ಗುರುಸಿದ್ಧಪ್ಪ ಅಂಬಿಗೇರ, ಬಸಣ್ಣ ನೀಲರಗಿ, ಅಕ್ಷರ ದಾಸೋಹ ನೌಕರರ ಸಂಘದ ವಿದ್ಯಾ ನಾಶೀಪುಡಿ, ದಾನಮ್ಮ ಕುಸ್ತಿ, ಅಂಗನವಾಡಿ ನೌಕರರ ಸಂಘದ ನೂರಜಹಾನ್ ಸಮುದ್ರಿ, ಕಸ್ತೂರಿ ಬೇಂದ್ರೆ, ಆಶಾ ಕಾರ್ಯಕರ್ತರ ಸಂಘದ ಭಾರತಿ ಶೆಟ್ಟರ, ನಿಂಗಮ್ಮ ಹುಡೇದ, ಔಷಧ ಪ್ರತಿನಿಧಿಗಳ ಸಂಘದ ಪ್ರವೀಣ ತಿಂಪೇರ, ಸಾರಿಗೆ ನೌಕರರ ಸಂಘದ ಆರ್.ಎಫ್. ಕವಳಿಕಾಯಿ ಹಾಗೂ ಗ್ರಾಮ ಪಂಚಾಯ್ತಿ ನೌಕರರ ಸಂಘದ ಮಹೇಶ ಹುಲಗೊಂಡ, ಮಂಜು ದೊಡ್ಡಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.