ADVERTISEMENT

ಕುಂದಗೋಳ: ಮೂಲಸೌಕರ್ಯ ವಂಚಿತ ಯರಗುಪ್ಪಿ, 4 ಶಾಸಕರನ್ನು ನೀಡಿದರೂ ತಪ್ಪದ ಬವಣೆ

ಪ್ರಜಾವಾಣಿ ವಿಶೇಷ
Published 3 ಜನವರಿ 2024, 5:44 IST
Last Updated 3 ಜನವರಿ 2024, 5:44 IST
ಯರಗುಪ್ಪಿಯ ಬಸವೇಶ್ವರ ದೇವಸ್ಥಾನದ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದೆ
ಯರಗುಪ್ಪಿಯ ಬಸವೇಶ್ವರ ದೇವಸ್ಥಾನದ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದೆ   

ಕುಂದಗೋಳ: ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಅಂದಾಜು ಹತ್ತು ಸಾವಿರ ಜನಸಂಖ್ಯೆ ಇದೆ. ಮೊಹರಂ ಹಬ್ಬಕ್ಕೆ ಪ್ರಸಿದ್ಧಿ ಪಡೆದಿರುವ ಈ ಗ್ರಾಮ ಅಗತ್ಯ ಮೂಲಸೌಕರ್ಯಗಳಿಂದ ವಂಚಿತವಾಗಿದೆ.

ನಾಲ್ವರು ಶಾಸಕರನ್ನು ನೀಡಿದರೂ ಗ್ರಾಮದ ಜನರ ಬವಣೆ ತಪ್ಪಿಲ್ಲ. ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸಲು ಎರಡು ಪ್ರತ್ಯೇಕ ಡಸ್ಟ್‌ಬಿನ್ ನೀಡಿಲ್ಲ. ಗ್ರಾಮದಲ್ಲಿ ಸಂಗ್ರಹಿಸಿದ ಕಸವನ್ನು ಮುಳ್ಳೊಳ್ಳಿ ಹಳ್ಳದ ದಂಡೆ ಮೇಲೆ ಸುರಿದು ಸುಡಲಾಗುತ್ತಿದೆ ಎಂಬುದು ಗ್ರಾಮಸ್ಥರ ದೂರು.

ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಕಲಾ ಪದವಿಪೂರ್ವ ಕಾಲೇಜಿನಲ್ಲಿ ಬಾಲಕರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಬಾಲಕರು ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿದ್ದಾರೆ.

ADVERTISEMENT

ಸರ್ಕಾರಿ ಕಿರಿಯ ಹೆಣ್ಣು ಮಕ್ಕಳ ಶಾಲೆ ಮತ್ತು ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ನೀರಿನ ಸೌಲಭ್ಯವಿಲ್ಲ. ನೀರನ್ನು ಮನೆಯಿಂದಲೇ ತರಬೇಕು. ಆ ನೀರು ಖಾಲಿಯಾದರೆ ಶಾಲೆಯ ಅಕ್ಕಪಕ್ಕದ ಅಂಗಡಿಳಲ್ಲಿ ನೀರು ಪಡೆದು ಕುಡಿಯಬೇಕಾದ ಪರಿಸ್ಥಿತಿ ಇದೆ.

ಪ್ರೌಢಶಾಲೆ ಆವರಣ ಕುಡುಕುರ ತಾಣವಾಗಿದೆ. ಆವರಣದಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಸ್ವಚ್ಛತೆ ಮಾಯವಾಗಿದೆ.

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ನೀರಿನ ಟ್ಯಾಂಕ್ ಮಲಿನವಾಗಿದೆ. ಟ್ಯಾಂಕ್‌ಗೆ ನೀರು ತುಂಬಿಸಲು ಅಳವಡಿಸುರುವ ಮೋಟರ್‌ ಕಳವಾಗಿದೆ. ಆಸ್ಪತ್ರೆಯ ಆವರಣದಲ್ಲಿ ವಿದ್ಯುತ್ ದೀಪದ  ವ್ಯವಸ್ಥೆಯಿಲ್ಲ. ಸರಿಯಾದ ಆರೋಗ್ಯ ಸೇವೆ ಸಿಗುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದಲ್ಲಿ ವಿಶಾಲವಾದ ಎರಡು ಕೆರೆಗಳಿದ್ದು, ನೀರು ಕುಡಿಯಲು ಯೋಗ್ಯವಾಗಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಜನರು ಅಶುದ್ಧ ನೀರು ಸೇವಿಸಬೇಕಾಗಿದೆ. ಇದರಿಂದ ಕಾಯಿಮೆ ಭೀತಿ ಎದುರಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಮೃತ್ಯುಂಜಯ ಫ್ಲಾಟ್‍ನಲ್ಲಿ ಕಾಂಕ್ರೀಟ್ ರಸ್ತೆಯಿಲ್ಲ. ಮಳೆಗಾಲದಲ್ಲಿ ಇಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ.  ಸಾರ್ವಜನಿಕ ಗ್ರಂಥಾಲಯ ಬಾಗಿಲು ತೆರೆದು ವರ್ಷಗಳೇ ಕಳೆದಿವೆ. ಸೋಲಾರ್ ಬೀದಿ ದೀಪಗಳು ಕಳುವಾಗಿವೆ. ಕೆಲವೆಡೆ ವಿದ್ಯುತ್ ಕಂಬಗಳು ಬಾಗಿವೆ. ಒಂದನೇ ವಾರ್ಡನಲ್ಲಿ ಬಸ್ ನಿಲ್ದಾಣವಿಲ್ಲ ಎಂದು ಗ್ರಾಮಸ್ಥರು ದೂರಿದರು.

ಶಾಲೆಯ ಮುಖ್ಯಶಿಕ್ಷಕರೊಂದಿಗೆ ಮಾತನಾಡಿ ಕುಡಿಯುವ ನೀರು ಶೌಚಾಲಯ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.
-ಸಂಜೀವ್‍ಕುಮಾರ್, ಬೆಳವಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕುಂದಗೋಳ
Quote - ಮಳೆ ಬಂದರೆ ರಸ್ತೆ ಕೆಸರುಮಯವಾಗುತ್ತದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಸಂಚಾರಕ್ಕೆ ಹರಸಾಹಸ ಪಡಬೇಕಿದೆ.
-ವೀರಪ್ಪ ಈಟಿ, ಮೃತ್ಯುಂಜಯ ಫ್ಲಾಟ್ ನಿವಾಸಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.