ಹುಬ್ಬಳ್ಳಿ: ನಗರದ ಹೆಗ್ಗೇರಿಯ ಇಂಡಿ ಪಂಪ್ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಆಟದ ಮೈದಾನವು ಸಮರ್ಪಕ ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಮೈದಾನದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಬಿದ್ದಿದೆ. ಇಡೀ ಮೈದಾನದಲ್ಲಿ ತಗ್ಗು ಗುಂಡಿಗಳು ಆವರಿಸಿಕೊಂಡಿದ್ದು, ಕ್ರೀಡಾ ಚಟುವಟಿಕೆ ನಡೆಸಲು ಯೋಗ್ಯವಾಗಿಲ್ಲ.
ಸುತ್ತಮುತ್ತಲಿನ ಭುವನೇಶ್ವರಿ ನಗರ, ಜಗದೀಶ ನಗರದ, ಮಾರುತಿ ನಗರ, ಕೆ.ಎಚ್.ಕಾಲೊನಿ, ಪ್ರಶಾಂತ ನಗರ ಸೇರಿ ಹತ್ತಾರು ಬಡಾವಣೆಯ ನಿವಾಸಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಈ ಕ್ರೀಡಾಂಗಣವನ್ನು ಮಹಾನಗರ ಪಾಲಿಕೆ ನಿರ್ಮಿಸಿತ್ತು. ಇದಕ್ಕಾಗಿ ₹1 ಕೋಟಿ ಅನುದಾನ ವೆಚ್ಚ ಮಾಡಿದ್ದರೂ ಮೈದಾನವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡದಿರುವುದರಿಂದ
ಹಾಳಾಗಿದೆ.
ಆವರಣ ಗೋಡೆ ನಿರ್ಮಿಸದೆ ರಾತ್ರಿ ವೇಳೆಯಲ್ಲಿ ಮೈದಾನವು ಕುಡುಕರ ಅಡ್ಡೆಯಾಗುತ್ತದೆ. ಕೆಲವರು ಇದನ್ನೇ ಬಯಲು ಶೌಚಾಲಯ ಮಾಡಿಕೊಂಡಿದ್ದಾರೆ. ಮೈದಾನದಲ್ಲಿ ಎಲ್ಲಿ ನೋಡಿದರೂ ಮದ್ಯದ ಬಾಟಲಿಗಳು, ಗಾಜಿನ ಚೂರು, ಬಳಸಿ ಬಿಸಾಡುವ ಪ್ಲೇಟ್‌ಗಳು, ಗ್ಲಾಸ್‌ಗಳ ರಾಶಿ ಕಾಣಿಸುತ್ತವೆ.
ಮುಂಚೆ ಹೀಗಿರಲಿಲ್ಲ: ಈ ಹಿಂದೆ ಮೈದಾನದಲ್ಲಿ ಅನೇಕ ಕ್ರೀಡಾಕೂಟ ಆಯೋಜಿಸಲಾಗುತಿತ್ತು. ಸಭೆ ಸಮಾರಂಭಗಳು ಕೂಡಾ ನಡೆಯುತ್ತಿದ್ದವು. ಈ ಮುಂಚೆ ಮೈದಾನ ಚೆನ್ನಾಗಿತ್ತು. ಮಳೆಗಾಲದಲ್ಲಿ ಹಾಳಾಗಿದೆ. ಮಳೆನೀರು ಸಮರ್ಪಕವಾಗಿ ಹರಿದು ಹೋಗುವುದಕ್ಕೆ ವ್ಯವಸ್ಥೆ ಇಲ್ಲ. ಹೀಗಾಗಿ ನೀರು ಸಂಗ್ರಹವಾಗಿ ಅದರಲ್ಲಿ ಹಂದಿಗಳು ಬೀದಿ ನಾಯಿಗಳು ಮನೆ ಮಾಡಿಕೊಂಡಿವೆ ಎನ್ನುತ್ತಾರೆ ಸ್ಥಳೀಯರು.
‘ಮೈದಾನದಲ್ಲಿ ಕೊಕ್ಕೊ ಹಾಗೂ ವಾಲಿಬಾಲ್ ಆಡುವುದಕ್ಕೆ ವ್ಯವಸ್ಥೆ ಮಾಡಬೇಕು. ಸುತ್ತಲೂ ಆವರಣ ಗೋಡೆನಿರ್ಮಿಸಿದರೆ ಉತ್ತಮ’ ಎನ್ನುವುದು ಕ್ರೀಡಾಪಟುಗಳ ಅಭಿಪ್ರಾಯ.
ಹೆಗ್ಗೇರಿ ಭಾಗದಲ್ಲಿ ಇದೊಂದೇ ಸಾರ್ವಜನಿಕ ಮೈದಾನ. ಈ ಮೈದಾನದಲ್ಲಿ ಕ್ರಿಡಾಪಟುಗಳಿಗಿಂತ ಕುಡುಕರೆ ಹೆಚ್ಚಾಗಿ ಓಡಾಡುವಂತಾಗಿದೆ. ಮೈದಾನಕ್ಕೆ ಕಾಲಕಲ್ಪ ನೀಡಿ ಅನುಕೂಲ ಮಾಡಿಕೊಡಬೇಕು–ರಾಹುಲ್ ದೇವರಮನಿ, ಯುವ ಕ್ರಿಡಾಪಟು
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮೈದಾನದ ಸಮಸ್ಯೆಗಳನ್ನು ಪರಿಶೀಲಿಸಬೇಕು. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು–ಸಾಧಿಕ್, ಮೆಕ್ಯಾನಿಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.