ADVERTISEMENT

ಹುಬ್ಬಳ್ಳಿ | ಸೊಳ್ಳೆ ಉತ್ಪತ್ತಿ ತಾಣವಾದ ‘ಗ್ರೀನ್ ಕಾರಿಡಾರ್‌’: ನಿರ್ವಹಣೆ ಕೊರತೆ

ಸ್ಮಾರ್ಟ್‌ ಸಿಟಿ ಯೋಜನೆಯಡಿ ರಾಜಕಾಲುವೆ ಅಭಿವೃದ್ಧಿ

ಸತೀಶ ಬಿ.
Published 2 ಜೂನ್ 2024, 5:05 IST
Last Updated 2 ಜೂನ್ 2024, 5:05 IST
ಹುಬ್ಬಳ್ಳಿಯ ಶಿರೂರು ಪಾರ್ಕ್‌ ಬಳಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಅಭಿವೃದ್ಧಿ ಪಡಿಸಿರುವ ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ಕಳೆ ಬೆಳೆದಿದೆ
–ಪ್ರಜಾವಾಣಿ ಚಿತ್ರ/ಗುರು ಹಬೀಬ
ಹುಬ್ಬಳ್ಳಿಯ ಶಿರೂರು ಪಾರ್ಕ್‌ ಬಳಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಅಭಿವೃದ್ಧಿ ಪಡಿಸಿರುವ ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ಕಳೆ ಬೆಳೆದಿದೆ –ಪ್ರಜಾವಾಣಿ ಚಿತ್ರ/ಗುರು ಹಬೀಬ   

ಹುಬ್ಬಳ್ಳಿ: ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವಂತೆ ನಗರದಲ್ಲಿ ರಾಜಕಾಲುವೆಯನ್ನು ಹಸಿರು ಸಂಚಾರಿ ಪಥದ (ಗ್ರೀನ್ ಮೊಬಿಲಿಟಿ ಕಾರಿಡಾರ್‌) ಹೆಸರಿನಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದ ಕಾರಣಕ್ಕೆ ಈ ರಾಜಕಾಲುವೆ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.

ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಹುಬ್ಬಳ್ಳಿಯ ಉಣಕಲ್‌ನಿಂದ ಕಾರವಾರ ರಸ್ತೆವರೆಗೆ 5.6 ಕಿ.ಮೀ ಉದ್ದ ರಾಜಕಾಲುವೆಯನ್ನು ಅಭಿವೃದ್ಧಿಪಡಿಸಲಾಗಿದೆ. ರಾಜಕಾಲುವೆಯನ್ನು ಎರಡು ಹಂತಗಳಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಮೂರನೇ ಹಂತದ ಕಾಮಗಾರಿ ನಡೆಯುತ್ತಿದೆ. ನಾಲಾಗೆ ಗೇಬಿಯನ್ ವಾಲ್, ತಡೆಗೋಡೆ ನಿರ್ಮಿಸಲಾಗಿದೆ.

ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲ ಮಾಡಿರುವ ಜತೆ ಒಳಚರಂಡಿ ನೀರು ಹೋಗಲು ನಾಲಾದಲ್ಲಿ ಎರಡು ಮೀಟರ್ ಆಳದ ಯುಜಿಡಿ ನಿರ್ಮಿಸಲಾಗಿದೆ. ಆದರೆ, ಇದಕ್ಕೆ ಬಹುತೇಕ ಒಳಚರಂಡಿಗಳನ್ನು ಸಂಪರ್ಕಿಸಿಲ್ಲ.

ADVERTISEMENT

ಈ ಕಾರಣಕ್ಕೆ ನಾಲಾದಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ಅಲ್ಲಲ್ಲಿ ಸಂಗ್ರಹವಾಗಿ ದುರ್ನಾತ ಬೀರುತ್ತಿದೆ. ಅಲ್ಲದೆ, ನಾಲಾ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಜತೆಗೆ ವಿವಿದ ಕಳೆ ಗಿಡಗಳು ಸಹ ಬೆಳೆದಿವೆ.

ನಾಲಾಗೆ ಮಳೆ ನೀರು ಹರಿದು ಬರಲು ಕೆಲವೆಡೆ ಪೈಪ್ ಅಳವಡಿಸಲಾಗಿದೆ. ಆ ಮೂಲಕವೂ ಒಳಚರಂಡಿ ನೀರನ್ನು ಬಿಡಲಾಗುತ್ತಿದೆ. ನಗರದ ಕ್ಲರ್ಕ್ಸ್‌ ಇನ್‌ ಹೋಟೆಲ್‌ ಬಳಿ, ಶಿರೂರು ಪಾರ್ಕ್‌ ಬಳಿ ಕಟ್ಟಡಗಳಿಂದ ಕೊಳಚೆ ನೀರು ನಾಲಾ ಸೇರುತ್ತಿದ್ದು, ಕೈಗಾರಿಕಾ ಪ್ರದೇಶದಿಂದ ಯುಜಿಡಿ ನೀರನ್ನು ಇಲ್ಲಿನ ನ್ಯಾಯಾಲಯ ಸಂಕೀರ್ಣದ ಬಳಿ ನಾಲಾಗೆ ಹರಿಸಲಾಗುತ್ತಿದೆ.

‘ನಾಲಾ ಬೆಡ್‌ಗೆ ಸಮಾನಾಂತರವಾಗಿ ಇರುವ ಚರಂಡಿಗಳನ್ನು ಮಾತ್ರ ಯುಜಿಡಿಗೆ ಸಂಪರ್ಕ ಕಲ್ಪಿಸಲಾಗಿದೆ. ಕಾಮಗಾರಿ ಆರಂಭಿಸುವ ಮುನ್ನ ಯುಜಿಡಿ ಗುರುತಿಸಿ ಕೊಡುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿತ್ತು. ಈವರೆಗೂ ಪಾಲಿಕೆ ಸ್ಪಂದಿಸಿಲ್ಲ’ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಲಾದಲ್ಲಿ ಬ್ರಿಡ್ಜ್‌ ಇರುವ ಕಡೆ ಚೇಂಬರ್‌ ಬಿಡಲಾಗಿದೆ. ಯುಜಿಡಿಯನ್ನು ಆ ಚೇಂಬರ್‌ಗೆ ಸಂಪರ್ಕಿಸಿದರೆ ಈ ಸಮಸ್ಯೆ ನಿವಾರಣೆ ಆಗಲಿದೆ ಎನ್ನುತ್ತಾರೆ ಅವರು.

‘ಈ ಹಿಂದೆ ಸೊಳ್ಳೆ ಕಾಟ ಅಷ್ಟಾಗಿ ಇರಲಿಲ್ಲ. ಈ ಅವೈಜ್ಞಾನಿಕ ಕಾಮಗಾರಿಯಿಂದಾಗಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಸೊಳ್ಳೆ ಕಾಟ ಹೆಚ್ಚಾಗಿದ್ದು, ಡೆಂಗಿ, ಚಿಕೂನ ಗುನ್ಯ ಭೀತಿ ಎದುರಾಗಿದೆ’ ಎಂದು ಶಿರೂರು ಪಾರ್ಕ್ ನಿವಾಸಿ ಸಾವಿತ್ರಮ್ಮ ಹೇಳಿದರು.

‘ಮೊದಲ ಹಂತದಲ್ಲಿ ಉಣಕಲ್ ಕೆರೆಯಿಂದ ಲಿಂಗರಾಜನಗರದವರೆಗೆ 2022ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ.  ಗುತ್ತಿಗೆ ಒಪ್ಪಂದದ ಪ್ರಕಾರ ಕಾಮಗಾರಿ ಮುಗಿದ ಒಂದು ವರ್ಷದವರೆಗೆ ಗುತ್ತಿಗೆದಾರ ನಿರ್ವಹಣೆ ಮಾಡಬೇಕು. ಗುತ್ತಿಗೆದಾರನ ನಿರ್ವಹಣೆ ಅವಧಿ ಸಹ ಮುಗಿದಿದೆ’ ಎನ್ನುತ್ತವೆ ಮೂಲಗಳು.

‘ಕಾಮಗಾರಿ ಮುಗಿದ ನಂತರ ಅದನ್ನು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಗೆ ಹಸ್ತಾಂತರಿಸಬೇಕು. ಆದರೆ, ಇನ್ನೂ ಪಾಲಿಕೆಗೆ ಹಸ್ತಾಂತರವಾಗಿಲ್ಲ. ಸ್ಮಾರ್ಟ್‌ ಸಿಟಿ ಸಂಸ್ಥೆಯಲ್ಲಿ ಯೋಜನೆಗಳ ನಿರ್ವಹಣೆಗೆ ಅನುದಾನ ಇಲ್ಲ’ ಎನ್ನುತ್ತಾರೆ ಅಧಿಕಾರಿಗಳು.

ಏನೇನು ಸೌಲಭ್ಯ?: ನಾಲಾ ಪಕ್ಕದಲ್ಲೇ ನಡಿಗೆ ಪಥ ಹಾಗೂ ಸೈಕಲ್ ಪಥ ನಿರ್ಮಿಸಲಾಗಿದ್ದು, ವಾಯುವಿಹಾರಿಗಳ ಅನುಕೂಲಕ್ಕಾಗಿ ಆಸನಗಳನ್ನು ಅಳವಡಿಸಲಾಗಿದೆ. ನಾಲ್ಕು ಕಡೆ ಕಿರು ಉದ್ಯಾನಗಳನ್ನು ನಿರ್ಮಿಸಲಾಗಿದ್ದು, ಮಕ್ಕಳ ಆಟಕ್ಕೆ ಸಲಕರಣೆಗಳು ಇವೆ.

ರಾಜಕಾಲುವೆಯಲ್ಲಿ ಕಸ ಚೆಲ್ಲುವುದನ್ನು ತಡೆಯಲು ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ 24 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಕಾಮಗಾರಿ ವಿವರ

ಮೊದಲ ಹಂತದಲ್ಲಿ ₹8 ಕೋಟಿ ವೆಚ್ಚದಲ್ಲಿ 0.6 ಕಿ.ಮೀ ಎರಡನೇ ಹಂತದಲ್ಲಿ ₹96 ಕೋಟಿ ವೆಚ್ಚದಲ್ಲಿ 4.4 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಕೆಲವೆಡೆ ಲ್ಯಾಂಡ್‌ಸ್ಕೇಪ್‌ ಕಾಮಗಾರಿ ನಡೆಯುತ್ತಿದೆ. ಮೂರನೇ ಹಂತದಲ್ಲಿ ಕಾರವಾರ ರಸ್ತೆಯಿಂದ ಹಳೆ ಹುಬ್ಬಳ್ಳಿ ಬ್ರಿಡ್ಜ್‌ವರೆಗೆ ₹35 ಕೋಟಿ ವೆಚ್ಚದಲ್ಲಿ 2 ಕಿ.ಮೀ ಉದ್ದದ ನಾಲಾ ಅಭಿವೃದ್ಧಿಗೆ ಕಾರ್ಯಾದೇಶ ನೀಡಲಾಗಿದ್ದು ಕಾಮಗಾರಿ ನಡೆಯುತ್ತಿದೆ ಎಂದು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಮಾಹಿತಿ ನೀಡಿದರು.

ಹಸ್ತಾಂತರವಾದ ನಂತರ ಕ್ರಮ

ಸ್ಮಾರ್ಟ್ ಸಿಟಿ ಯೋಜನೆ ಅಡಿ ರಾಜಕಾಲುವೆಯನ್ನು ಹಸಿರು ಸಂಚಾರಿ ಪಥದ ಹೆಸರಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಈವರೆಗೆ ಅಭಿವೃದ್ಧಿಪಡಿಸಲಾಗಿರುವ ರಾಜಕಾಲುವೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಪಡೆಯುವ ಪಕ್ರಿಯೆಗಳು ನಡೆಯುತ್ತಿವೆ. ಕೆಲವು ಕಡೆ ಆಗಿರುವ ಲೋಪಗಳನ್ನು ಸರಿಪಡಿಸುವಂತೆ ಸೂಚಿಸಲಾಗಿದೆ. ಶೀಘ್ರ ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಹಸ್ತಾಂತರಗೊಂಡ ನಂತರ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು –ಈಶ್ವರ ಉಳ್ಳಾಗಡ್ಡಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ

ಹಸಿರು ಸಂಚಾರಿ ಪಥದ ಹೆಸರಿನಲ್ಲಿ ರಾಜಕಾಲುವೆ ಅಭಿವೃದ್ಧಿ ಪಡಿಸಿದ್ದು ಉತ್ತಮ. ಆದರೆ ಸೊಳ್ಳೆ ಕಾಟ ನಿವಾರಣೆಗೆ ಕ್ರಮ ಕೈಗೊಳ್ಳಬೇಕು.
–ಶರಣಪ್ಪ, ಸಿದ್ಧೇಶ್ವರ ಪಾರ್ಕ್
ನಾಲಾ ಕೊಳಚೆ ನೀರು ಹರಿಯುತ್ತಿದ್ದು ಇದರಿಂದಾಗಿ ಕಾಮಗಾರಿಯ ಉದ್ದೇಶ ಈಡೇರಿಲ್ಲ. ನಾಲಾಗೆ ಕೊಳಚೆ ನೀರು ಸೇರದಂತೆ ನೋಡಿಕೊಳ್ಳಬೇಕು
–ಸುರೇಶ ಸ್ವಾಮಿ, ಶಿರೂರ ಪಾರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.