ADVERTISEMENT

ಸಾರಿಗೆ ಕೊರತೆ: ಕಾಲ್ನಡಿಗೆಯಲ್ಲಿಯೇ ಶಾಲೆಗೆ

ವಾಸುದೇವ ಮುರಗಿ
Published 27 ಆಗಸ್ಟ್ 2021, 19:30 IST
Last Updated 27 ಆಗಸ್ಟ್ 2021, 19:30 IST
ಕುಂದಗೋಳ ತಾಲ್ಲೂಕಿನ ಶಿರೂರ ಗ್ರಾಮದ ವಿದ್ಯಾರ್ಥಿಗಳು ಕಾಲ್ನಡಿಗೆ ಮೂಲಕ ಸಂಶಿ ಗ್ರಾಮದ ಶಾಲೆಗೆ ತೆರಳಿದರು 
ಕುಂದಗೋಳ ತಾಲ್ಲೂಕಿನ ಶಿರೂರ ಗ್ರಾಮದ ವಿದ್ಯಾರ್ಥಿಗಳು ಕಾಲ್ನಡಿಗೆ ಮೂಲಕ ಸಂಶಿ ಗ್ರಾಮದ ಶಾಲೆಗೆ ತೆರಳಿದರು    

ಗುಡಗೇರಿ: ಕೋವಿಡ್‌ ಸೋಂಕಿನ ಪ್ರಕರಣಗಳು ಇಳಿಮುಖವಾದ್ದರಿಂದರಾಜ್ಯ ಸರ್ಕಾರ ಶಾಲೆಗಳನ್ನು ಆರಂಭಿಸಿದೆ. ಆದರೆ, ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಾರಿಗೆ ಬಸ್‌ಗಳ ಸಂಚಾರ ಕಡಿಮೆಯಾಗಿದ್ದು, ವಿದ್ಯಾರ್ಥಿಗಳು ನಡೆದುಕೊಂಡೇ ಶಾಲೆಗೆಹೋಗಬೇಕಾದ ಪರಿಸ್ಥಿತಿಯಿದೆ.

ಹುಬ್ಬಳ್ಳಿ-ಲಕ್ಷ್ಮೇಶ್ವರ ಮಧ್ಯದ ಶಿರೂರ ಬಳಿ ಇರುವ ರೈಲ್ವೆ ಮೇಲ್ಸೆತುವೆ ದುರಸ್ತಿಗೊಂಡಿದ್ದರಿಂದ ಸಾರಿಗೆ ಸಂಪರ್ಕ ಸ್ಥಗಿತಗೊಂಡಿದೆ. ಸಂಶಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿಂದ ಪದವಿ ಕಾಲೇಜುವರೆಗೆ ತರಗತಿಗಳಿವೆ. ಈ ಗ್ರಾಮಕ್ಕೆ ಶಿರೂರು, ಚಾಕಲಬ್ಬಿ, ಯರೇಬೂದಿಹಾಳ, ಹಿರೇಗುಂಜಳ, ಬರದ್ವಾಡ, ಕೊಡ್ಲಿವಾಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಸಂಶಿಗೆ ಬರುತ್ತಾರೆ. ಸಾರಿಗೆ ಬಸ್‌ ಸೌಲಭ್ಯವಿಲ್ಲದ ಕಾರಣ ಖಾಸಗಿ ವಾಹನಗಳಲ್ಲಿ ಬರಬೇಕಾಗಿದೆ.ಯರೇಬೂದಿಹಾಳಗ್ರಾಮದಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಶಿಗೆ ಹೋಗುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದಕ್ಷೇತ್ರ ಶಿಕ್ಷಣಾಧಿಕಾರಿಜಿ.ಎನ್‌. ಮಠಪತಿ ‘ಸದ್ಯಕ್ಕೆ ಅರ್ಧ ದಿನ ಮಾತ್ರ ತರಗತಿಗಳನ್ನು ನಡೆಸಲಾಗುತ್ತಿದೆ. ಭೌತಿಕ ತರಗತಿಗಳನ್ನೂ ಕಡ್ಡಾಯ ಮಾಡಿಲ್ಲ. ಆನ್‌ಲೈನ್‌ ಮೂಲಕ ಪಾಲ್ಗೊಂಡರೂ ಹಾಜರಾತಿ ನೀಡಲಾಗುತ್ತದೆ. ಸಾರಿಗೆ ವ್ಯವಸ್ಥೆ ತೊಂದರೆಯಿದ್ದರೆ ವಿದ್ಯಾರ್ಥಿಗಳು ತಮ್ಮ ಗ್ರಾಮದ ಸಮೀಪದ ಶಾಲೆಗೆ ಹೋಗಿಯೂ ಪಾಠ ಕೇಳಲು ವ್ಯವಸ್ಥೆ ಮಾಡಿಕೊಡಲಾಗುವುದು. ಸಾರಿಗೆ ಇಲಾಖೆ ಅಧಿಕಾರಿಗಳಿಗೂ ಸಮಸ್ಯೆ ಗಮನಕ್ಕೆ ತರಲಾಗುವುದು’ ಎಂದರು.

ADVERTISEMENT

ಬಸ್‌ಗಳ ಸೌಲಭ್ಯ ಪೂರ್ಣ ಪ್ರಮಾಣದಲ್ಲಿ ಸಿಗದ ಕಾರಣ ಶೇ 20ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ನಿತ್ಯ ಗೈರಾಗುತ್ತಿದ್ದಾರೆ.
ಪ್ರೊ. ರಮೇಶ ಅತ್ತಿಗೇರಿ ಕೆಎಲ್‌ಇ ಕಾಲೇಜಿನ ಪ್ರಭಾರ ಪ್ರಾಚಾರ್ಯ

ಶಾಲೆ ಆರಂಭವಾದರೂ ಸಮರ್ಪಕ ಬಸ್‌ ಸೌಲಭ್ಯಗಳಿಲ್ಲ. ಇದರಿಂದಾಗಿ ನಿತ್ಯ 8 ಕಿ.ಮೀ. ನಡೆದುಕೊಂಡು ಹೋಗಬೇಕಾಗಿದೆ. ಕೆಲಬಾರಿ ರಸ್ತೆಗಳಲ್ಲಿ ಬರುವ ವಾಹನಗಳ ನೆರವು ಪಡೆಯಬೇಕಿದೆ ಗಣೇಶ ಪೂಜಾರ, ವಿದ್ಯಾರ್ಥಿ ಕೆಎಲ್‌ಇ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.