ADVERTISEMENT

ಪ್ರಿಯದರ್ಶಿನಿ ಶವ ಪತ್ತೆ ಪ್ರಕರಣ; ಆಸ್ಟ್ರೇಲಿಯಾ ಸರ್ಕಾರದ ನಡೆಯಿಂದ ಪುತ್ರಿ ಹತಾಶೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 3:24 IST
Last Updated 26 ಆಗಸ್ಟ್ 2023, 3:24 IST
ಪ್ರಿಯದರ್ಶಿನಿ ಪಾಟೀಲ
ಪ್ರಿಯದರ್ಶಿನಿ ಪಾಟೀಲ   

ಧಾರವಾಡ: ಬೆಳಗಾವಿ ಜಿಲ್ಲೆಯ ಸವದತ್ತಿ ಸಮೀಪ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದ ಅನಿವಾಸಿ ಭಾರತೀಯ (ಧಾರವಾಡ ಮೂಲ) ಮಹಿಳೆ ಪ್ರಿಯದರ್ಶಿನಿ ಪಾಟೀಲ (44) ಸಾಯುವ ಮುನ್ನ ಹುಬ್ಬಳ್ಳಿಯಿಂದ ‘ಡೆತ್‌ನೋಟ್‌’ ಮತ್ತು ಬ್ಯಾಗನ್ನು ಕುಟುಂಬವರಿಗೆ ಪಾರ್ಸಲ್ ಕಳಿಸಿದ್ದಾರೆ.

‘ಪ್ರಿಯದರ್ಶಿನಿ ಹುಬ್ಬಳ್ಳಿ ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಪಾರ್ಸಲ್ ಕಳುಹಿಸಿದ್ದ ಬ್ಯಾಗ್‌ನಲ್ಲಿ ಡೆತ್‌ ನೋಟ್‌ ಇತ್ತು. ಸಾವಿಗೆ ಆಸ್ಟ್ರೇಲಿಯಾ ಸರ್ಕಾರ ಕಾರಣ ಎಂದು ಬರೆದಿದ್ದಾಳೆ. ಬ್ಯಾಗ್‌ನಲ್ಲಿದ್ದ ಪತ್ರ, ಟಿಕೆಟ್‌ಗಳನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ’ ಎಂದು ಪ್ರಿಯದರ್ಶಿನಿ ತಂದೆ ಎಸ್‌.ಎಸ್‌.ದೇಸಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಿಯದರ್ಶಿನಿಗೆ ಇಬ್ಬರು ಮಕ್ಕಳು, ಪುತ್ರ ಅಮರ್ತ್ಯ 11ನೇ ತರಗತಿ ಹಾಗೂ ಪುತ್ರಿ ಅಪರಾಜಿತಾ 7ನೇ ತರಗತಿ. ಇಬ್ಬರನ್ನೂ ಧಾರವಾಡದಲ್ಲಿ ಶಾಲೆಗೆ ಸೇರಿಸಲು ಪ್ರಯತ್ನ ನಡೆದಿತ್ತು. ಆಗಸ್ಟ್ 31ರೊಳಗೆ ಸೇರಿಸಬೇಕಿತ್ತು. ಆಸ್ಟ್ರೇಲಿಯಾ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಇದರಿಂದ ಮನಸ್ಸಿಗೆ ಬಹಳ ನೋವಾಗಿದೆ ಎಂದು ಮಗಳು ತಿಳಿಸಿದ್ದಾಳೆ’ ಎಂದು ಅವರು ಹೇಳಿದರು.

ADVERTISEMENT

‘ಮಕ್ಕಳಿಬ್ಬರು ಆಸ್ಟ್ರೇಲಿಯಾ ಸಂಜಾತರಾಗಿದ್ದರಿಂದ ಅವರು ಭಾರತದಲ್ಲಿ ಶಿಕ್ಷಣ ಪಡೆಯಲು ಅಲ್ಲಿನ ಸರ್ಕಾರದ ಅನುಮತಿ ಬೇಕಿತ್ತು. ಅನುಮತಿ ಸಿಗದೆ ಸಾವಿಗೆ ಶರಣಾಗಿದ್ದಾಳೆ’ ಎಂದು ಅವರು ದುಃಖಿಸಿದರು.

ಏನಿದು ಪ್ರಕರಣ: ಧಾರವಾಡದ ಪ್ರಿಯದರ್ಶಿನಿ ಮತ್ತು ಅವರ ಪತಿ ಸಾಫ್ಟ್‌ವೇರ್‌ ಎಂಜಿನಿಯರ್‌ ಲಿಂಗರಾಜ ಪಾಟೀಲ  ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು.

ಆಗಸ್ಟ್ 18ರಂದು ಪ್ರಿಯದರ್ಶಿನಿ ಆಸ್ಟ್ರೇಲಿಯಾದಿಂದ ಊರಿಗೆ ಹೊರಟು ಬೆಂಗಳೂರಿಗೆ 19ರಂದು ತಲುಪಿದ್ದರು. 19ರಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಜೆ ಬಂದಿಳಿದಿದ್ದರು. ಹುಬ್ಬಳ್ಳಿ ನಿಲ್ದಾಣದಿಂದ ಬ್ಯಾಗ್‌ ಅನ್ನು ಕುಟುಂಬದವರಿಗೆ ಕೊರಿಯರ್‌ ಮಾಡಿ ಗೋಕಾಕ್‌ಗೆ ತೆರಳಿದ್ದರು. 20ರಂದು ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಅವರ ದೇಹ ಶವವಾಗಿ ಪತ್ತೆಯಾಯಿತು..

‘ಡೆತ್‌ ನೋಟ್‌, ಏರ್‌ ಟಿಕೆಟ್‌, ಬಸ್‌ ಟಿಕೆಟ್‌ಗಳನ್ನು ವಶಕ್ಕೆ ಪಡೆದಿದ್ದೇವೆ. ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದು ಸವದತ್ತಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಲಿಂಗರಾಜ ಪಾಟೀಲ ಅವರು ಸಿಡ್ನಿಯಿಂದ ಧಾರವಾಡಕ್ಕೆ ಬಂದಿದ್ದು, ಪ್ರಿಯದರ್ಶಿನಿ ಅಂತ್ಯಕ್ರಿಯೆ ನೆರವೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.