ಹುಬ್ಬಳ್ಳಿ: ಅಮಾವಾಸ್ಯೆಯ ಕತ್ತಲನ್ನು ಸೀಳಿದ ಬೆಳಕು, ಕಣ್ಣು ಹಾಯಿಸದಲ್ಲೆಲ್ಲ ದೀಪಗಳ ಸಾಲು, ಲಕ್ಷಾಂತರ ಭಕ್ತರಿಂದ ಶಿವನಾಮ ಸ್ಮರಣೆ, ಕಣ್ಮುಚ್ಚಿ ಪ್ರಾರ್ಥಿಸಿ ದೀಪ ಹಚ್ಚುವ ಪರಿ... ಒಟ್ಟಾರೆ ಕತ್ತಲೆಯೇ ಸುಳಿಯದ ಆವರಣ.
ಇದು ನಗರದ ಸಿದ್ಧಾರೂಢಮಠದಲ್ಲಿ ಬುಧವಾರ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಾವಳಿ. ಕಾರ್ತಿಕ ಮಾಸದ ಕೊನೆಯ ದಿನವಾದ (ಅಮಾವಾಸ್ಯೆ) ಬುಧವಾರ ಮಠದ ಆವರಣದಲ್ಲಿ ದೀಪ ಹಚ್ಚುವ ಸಂಭ್ರಮ ಮನೆಮಾಡಿತ್ತು. ಎಲ್ಲ ವಯೋಮಾನದವರು ಒಂದೆಡೆ ಸೇರಿ ದೀಪ ಬೆಳಗಿದರು. ಧರ್ಮ, ಜಾತಿಗಳ ಸಂಕೋಲೆಯನ್ನು ಕಳಚಿ ದೀಪಜ್ಯೋತಿಗೆ ನಮಿಸಿದರು. ಮನದ ಕತ್ತಲೆಯೆಲ್ಲ ಅಳಿದು, ಬೆಳಕು ಮೂಡಲಿ ಎಂದು ಸಿದ್ಧಾರೂಢ, ಗುರುನಾಥರೂಢರಲ್ಲಿ ಕೈ ಮುಗಿದು ಪ್ರಾರ್ಥಿಸಿದರು.
ಹಣತೆ ಮತ್ತು ಎಣ್ಣೆ ಹಿಡಿದು ಮಾರಾಟಕ್ಕೆ ನಿಂತವರಲ್ಲಿ, ಭಕ್ತರು ಯಾವ ಚೌಕಾಶಿಯೂ ಮಾಡದೆ ಖರೀದಿಸಿ, ದೀಪ ಹಚ್ಚಿದರು. ಕೆಲವರು ಮನೆಯಿಂದಲೇ ಹಣತೆ, ಎಣ್ಣೆ ತಂದು ದೀಪ ಹಚ್ಚಿದರು. ಮತ್ತೆ ಕೆಲವರು ಸಿಕ್ಕಜಾಗದಲ್ಲಿಯೇ ರಂಗೋಲಿ ಬಿಡಿಸಿ ದೀಪ ಬೆಳಗಿದರು. ಮಹಾರಾಷ್ಟ್ರ, ಗೋವಾ, ತಮಿಳುನಾಡು ಸೇರಿದಂತೆ ಬೆಳಗಾವಿ, ವಿಜಯಪುರ, ಕಲಬುರ್ಗಿ, ಉತ್ತರಕನ್ನಡ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಯ ಭಕ್ತರು ಬಂದು, ದೀಪ ಹಚ್ಚಿ ಹರಕೆ ತೀರಿಸಿದರು. ಧಾರವಾಡ, ಹುಬ್ಬಳ್ಳಿ ಭಾಗದ ಭಕ್ತರು ಮುಸ್ಸಂಜೆ ಆರಕ್ಕೇ ಬಂದು ಮಠದ ಆವರಣದಲ್ಲಿ ದೀಪ ಹಚ್ಚಿದು. ಯುವಕ, ಯುವತಿಯರು ಹಚ್ಚಿದ ದೀಪದ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಂಭ್ರಮಿಸಿದರು.ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ಕೆಡಿಟ್‌ಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದ್ದರು.
‘ಕತ್ತಲೆಯನ್ನು ಹೋಗಲಾಡಿಸುವುದಕ್ಕೆ ದೀಪ ಹಚ್ಚುತ್ತಾರೆ. ದೀಪ ಎಂದರೆ ಶುಭಸಂಕೇತ. ಜಗತ್ತು ಉದ್ಧಾರ ಮಾಡಲು ಶಪಥ ಮಾಡಿದಂತೆ, ಅದು ತಾನು ಉರಿದು ಬೆಳಕು ನೀಡುತ್ತದೆ. ಮನುಷ್ಯನ ಬದುಕು ಸಹ ಹಾಗೆಯೇ ಆದರೆ, ಜಗತ್ತು ಸದಾ ಬೆಳಗುತ್ತಿರುತ್ತದೆ’ ಎಂದು ಶ್ರೀಮಠದ ಆಡಳಿತಾಧಿಕಾರಿ ನ್ಯಾಯಾಧೀಶೆ ಕೆ.ಜಿ. ಶಾಂತಿ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಪ್ರತಿಯೊಬ್ಬ ವ್ಯಕ್ತಿಯೂ ಜಾತಿ, ಧರ್ಮ ಮರೆತು ಸರ್ವರ ಏಳಗ್ಗೆಗೆ ಮುಂದಾಗಬೇಕು. ಸಂಕುಚಿತ ಹಾಗೂ ನಕಾರಾತ್ಮಕ ಮನೋಭಾವ ಬಿಟ್ಟು, ಎಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಬದುಕಲ್ಲಿ ಎದುರಾಗುವ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿ, ಸಾಧನೆಯತ್ತ ಸಾಗಬೇಕು. ದೊರೆತ ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಂಡು ಎಲ್ಲರೊಳಗೊಂದಾಗಿ ಬದುಕಬೇಕು. ಹಾಗೆಯೇ ದೀಪದಂತೆ ಬೆಳಗಬೇಕು’ ಎಂದು ಹೇಳಿದರು.
ದಯಾನಂದ ಸರಸ್ವತಿ ಸ್ವಾಮೀಜಿ, ರಾಮಾನಂದ ಸ್ವಾಮೀಜಿ, ನ್ಯಾ. ನಾಗಶ್ರೀ, ಶ್ರೀಮಠದ ಟ್ರಸ್ಟ್ ಸಮಿತಿ ಅಧ್ಯಕ್ಷ ಧರಣೇಂದ್ರ ಜವಳಿ, ಧರ್ಮದರ್ಶಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.