ಹುಬ್ಬಳ್ಳಿ: ದೀಪಾವಳಿಯ ಪಾರಂಪರಿಕ ಸೊಬಗು ಅರಳುವುದೇ ಮಣ್ಣಿನ ಹಣತೆಗಳಲ್ಲಿ. ಇಲ್ಲಿಯ ಮಾರುಕಟ್ಟೆಗಳಲ್ಲೂ ಈಗ ಝಗಮಗಿಸುವ ಅಲಂಕಾರಿಕ ಸಾಮಗ್ರಿಗಳ ಅಂಗಡಿಗಳ ನಡುವೆ ಅಲ್ಲಲ್ಲಿ ವೈವಿಧ್ಯಮಯ ಪಣತಿಗಳ ಲೋಕ ಅರಳಿದೆ.
ಕಳೆದ 10–15 ವರ್ಷಗಳಲ್ಲಿ ಸ್ಥಳೀಯ ಕುಂಬಾರರು ಹಣತೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ತಮಿಳುನಾಡಿನ ಕಾರ್ಖಾನೆಗಳಲ್ಲಿ ತಯಾರಾಗುವ ಹಣತೆಗಳನ್ನು ವ್ಯಾಪಾರಿಗಳು, ಕುಂಬಾರರು ಕೊಂಡು, ವಿವಿಧ ಬೀದಿಗಳಲ್ಲಿ ಮಾರುತ್ತಾರೆ,
‘15 ವರ್ಷಗಳಿಂದ ನಮ್ಮ ಕುಟುಂಬದ ನಾಲ್ಕೈದು ಮಂದಿ ದೀಪಾವಳಿಯ 1 ತಿಂಗಳ ಮುಂಚೆಯೇ ಹುಬ್ಬಳ್ಳಿಗೆ ಬಂದು ಪಣತಿ ವ್ಯಾಪಾರ ಶುರುವಿಟ್ಟುಕೊಳ್ಳುತ್ತೇವೆ. 5 ರಿಂದ 6 ವಿಧದ ಹಣತೆಗಲು ನಮ್ಮ ಬಳಿಯಿವೆ. ಈ ವರ್ಷ ಕಮಲದ ಮಾದರಿಯವು ಹೊಸದಾಗಿ ಬಂದಿವೆ. ಸಾಮಾನ್ಯ ಹಣತೆಯಲ್ಲಿ 3 ಅಳತೆಗಳು ಇವೆ. ಲಾಂಟರ್ನ್ ಮಾದರಿಯವು, ಅಲ್ಲಾವುದ್ದೀನ್ ದೀಪ ಮೊದಲಾದ ವಿಶಿಷ್ಟವಾದವೂ ಇವೆ. ಈ ವರ್ಷ ವ್ಯಾಪಾರ ಕಡಿಮೆ’ ಎಂದು ತಮಿಳುನಾಡಿನಿಂದ ಬಂದು ಕೊಪ್ಪಿಕರ್ ರಸ್ತೆಯಲ್ಲಿ ಹಣತೆ ಮಾರುತ್ತಿರುವ ಅಣ್ಣಾಮಲೈ ತಿಳಿಸಿದರು.
‘ಅತಿ ಚಿಕ್ಕ ಹಣತೆಗಳು ₹ 20ಕ್ಕೆ ಡಜನ್, ಚಿಕ್ಕವು ₹ 30, ಮಧ್ಯಮ ಗಾತ್ರದ್ದು ₹ 50, ದೊಡ್ಡವು ₹ 120, ತೆಂಗಿನಕಾಯಿ ಮಾದರಿಯವು ಜೋಡಿಗೆ 60, ಲ್ಯಾಂಪ್ ಮಾದರಿಯವು ಜೋಡಿಗೆ ₹ 100, ತುಳಸಿಕಟ್ಟೆ ಮಾದರಿಯವು ಜೋಡಿಗೆ ₹ 60’ ಎಂದು ದುರ್ಗದಬೈಲ್‌ನಲ್ಲಿ ಹಣತೆಗಳ ವ್ಯಾಪಾರ ಮಾಡುವ ಶ್ರೀನಿವಾಸ ಗಂಡಿಕೋಟಾ ತಿಳಿಸಿದರು.
ದುರ್ಗದಬೈಲ್‌ನಲ್ಲಿ ಕಳೆದ 10 ವರ್ಷಗಳಿಂದ ದೀಪಾವಳಿ ಸಂದರ್ಭದಲ್ಲಿ ಹಣತೆಗಳ ವ್ಯಾಪಾರ ಮಾಡುವ ಅಬ್ದುಲ್ ಘನಿ ಅವರ ಬಳಿ 50ಕ್ಕೂ ಹೆಚ್ಚು ವಿಧದ ಹಣತೆಗಳು ಇವೆ.
‘ಗುಜರಾತ್ ಹಾಗೂ ಚೆನ್ನೈಯಿಂದ ತರಿಸುತ್ತೇವೆ. ದಸರಾ ಮುಗಿದ ಕೂಡಲೇ ಈ ವ್ಯಾಪಾರ ಶುರು. ವ್ಯಾಪಾರ ಚೆನ್ನಾಗಿದೆ. ಇನ್ನೆರಡು ದಿನಗಳಲ್ಲಿ ಇನ್ನೂ ಜೋರಾಗುತ್ತದೆ. ಮಣ್ಣಿನ ಹಣತೆಗಳಲ್ಲೇ ಮೇಣ ತುಂಬಿದ ಹೊಸ ಮಾದರಿಯ ಹಣತೆ ಈ ವರ್ಷ ಬಂದಿದೆ. ಹಣತೆ ಹೊತ್ತ ಆನೆಯೂ ಮತ್ತೊಂದು ಆಕರ್ಷಣೆಯಾಗಿದೆ. ಕೈಯಿಂದ ಮಾಡಿದ ಹಣತೆಗಳು ₹ 50ಕ್ಕೆ ಡಜನ್’ ಎಂದು ಅವರು ತಿಳಿಸಿದರು.
ಆನ್‌ಲೈನ್‌ನಲ್ಲೇ ಹೆಚ್ಚಿನವರು ಕೊಳ್ಳುತ್ತಿರುವುದರಿಂದ ಹಣತೆ ವ್ಯಾಪಾರವೂ ಕುಸಿದಿದೆ ಎಂದು ವ್ಯಾಪಾರಿ ಶೌಕತ್ ತಿಳಿಸಿದರು.
ನನಗೆ ಮಣ್ಣಿನ ಹಣತೆಗಳೇ ಇಷ್ಟ. ಪ್ರತಿ ವರ್ಷ ನಾಲ್ಕಾದರೂ ಹೊಸ ಮಾದರಿಯವನ್ನು ಖರೀದಿಸಿ ದೀಪ ಬೆಳಗಿದರೆ ಖುಷಿ ಎನಿಸುತ್ತದೆ– ಸುಮಿತ್ರಾ ಹಿರೇಮಠ ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.