ADVERTISEMENT

ಕಸೂತಿ ಕಲೆಯಲ್ಲಿ ಕನಸಿನ ಚಿತ್ರಗಳು...

ಮಹಮ್ಮದ್ ಶರೀಫ್
Published 9 ಮಾರ್ಚ್ 2024, 4:40 IST
Last Updated 9 ಮಾರ್ಚ್ 2024, 4:40 IST
<div class="paragraphs"><p>ತಮ್ಮ ಕಲಾಕೃತಿಯೊಂದಿಗೆ ಲತಾ ಕುಲಕರ್ಣಿ</p></div>

ತಮ್ಮ ಕಲಾಕೃತಿಯೊಂದಿಗೆ ಲತಾ ಕುಲಕರ್ಣಿ

   

ಹುಬ್ಬಳ್ಳಿ: ಬದುಕಿನ ಸಂಜೆಯಲ್ಲಿ ಖಾಲಿತನ ಆವರಿಸುವಾಗ, ಬಾಲ್ಯದಲ್ಲಿನ ಹವ್ಯಾಸ ಕೈಹಿಡಿದು ನಡೆಸುತ್ತದೆ. ಧಾರವಾಡದ ಸಾಧನಕೇರಿಯ ಈ ಹಿರಿಜೀವಕ್ಕೆ ಕಸೂತಿ ಕಲೆಯ ಮೇಲೆ ಪ್ರೀತಿ. ಹಲವಾರು ವರ್ಷಗಳಿಂದ ಕಸೂತಿ ಚಿತ್ರಗಳನ್ನು ರಚಿಸುತ್ತಿರುವ ಲತಾ ಕುಲಕರ್ಣಿ ಅವರ ಜೀವನೋತ್ಸಾಹಕ್ಕೆ ಇಷ್ಟದ ಕಲೆಯೇ ಸ್ಫೂರ್ತಿಯಾಗಿದೆ.

‘ನಾನು ಬೆಳೆದಿದ್ದು ಕಲೆ, ಸಾಹಿತ್ಯ, ಸಂಗೀತ, ನೃತ್ಯದ ಬಗ್ಗೆ ಒಲವು ಹೊಂದಿದ್ದ ಕುಟುಂಬದಲ್ಲಿ. ನನ್ನ ತಂದೆ ನಮ್ಮನ್ನು ಚೆನ್ನಾಗಿ‌ ಬೆಳೆಸಿದರು. ಏನನ್ನಾದರೂ ಕಲಿಯಲು ಪ್ರೋತ್ಸಾಹಿಸಿದರು. ಹೀಗಾಗಿ ಚಿತ್ರಕಲೆ, ಸಂಗೀತ, ನೃತ್ಯದಲ್ಲಿ ಆಸಕ್ತಿ ಬೆಳೆಯಿತು’ ಎನ್ನುತ್ತಾರೆ ಲತಾ.

ADVERTISEMENT

ಲತಾ ಅವರು ಶಿಕ್ಷಣ ಪಡೆದದ್ದು ಮುಂಬೈನಲ್ಲಿ. ಬಿ.ಕಾಂ.ವರೆಗೆ ಓದಿರುವ ಅವರು, ಶಾಲಾ ದಿನಗಳಿಂದಲೇ ಚಿತ್ರಗಳನ್ನು ಬರೆದರು. ಅವರ ಆಸಕ್ತಿಗೆ ತಕ್ಕ ಪ್ರೋತ್ಸಾಹವನ್ನೂ ಶಿಕ್ಷಕರು ನೀಡಿದರು. ‘ಕಲೆ ಹುಟ್ಟಿನಿಂದಲೇ ಬರುತ್ತದೆ. ಅದನ್ನು ಮುಂದುವರಿಸುವುದು ಅವರವರ ಆಯ್ಕೆ. ನನಗೆ ಚಿತ್ರಗಳನ್ನು ಬರೆಯುವುದೆಂದರೆ ಖುಷಿ’ ಎಂದು ಅವರು ಹೇಳಿದರು.

‘ಖಾಲಿ ಪುಟದ ಮೇಲೆ ಸಣ್ಣದಾಗಿ ಚಿತ್ರದ ಗುರುತು ಮಾಡಿ, ಅದಕ್ಕೆ‌ ತಕ್ಕ ಹಾಗೆ ಬಣ್ಣದ ದಾರಗಳನ್ನು ಜೋಡಿಸಬೇಕು. ಗಾಢ ಬಣ್ಣ ಬೇಕಾದಲ್ಲಿ ಹೆಚ್ಚು ದಾರ ಬಳಸಬೇಕು. ನಿಸರ್ಗದ ಚಿತ್ರಗಳಲ್ಲಿ ನೆರಳು ಬೆಳಕುಗಳಿಗೆ ತಕ್ಕ ಹಾಗೆ ದಾರಗಳನ್ನು ಬಳಸಬೇಕು. ಒಂದು ಚಿತ್ರ ಪೂರ್ತಿಯಾಗಲು ತಿಂಗಳುಗಳೇ ಬೇಕು’ ಎಂದು ಅವರು ವಿವರಿಸಿದರು.

‘ಲತಾಗೆ ಕಲೆಯಲ್ಲಿ ಮೊದಲಿನಿಂದಲೂ ಆಸಕ್ತಿ. ಮನೆಯಲ್ಲಿ ಖಾಲಿ ಕೂರುವ ಬದಲು ಯಾವುದಾದರೂ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ’ ಎಂದು ಲತಾ ಅವರ ಪತಿ, ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲ‍ಪತಿ ಜಗದೀಶ ಕುಲಕರ್ಣಿ ತಿಳಿಸಿದರು.

ಇಳಿವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೂ ಕಲೆಯ ಬಗೆಗಿನ ಅವರ ಉತ್ಸಾಹ ಬತ್ತಿಲ್ಲ. ಕಸೂತಿ ಕಲೆಯ ಜೊತೆಗೆ ಪೆನ್ಸಿಲ್‌ ಬಳಸಿಯೂ ಚಿತ್ರಗಳನ್ನು ಬರೆಯುತ್ತಾರೆ. ವಾಟ್ಸ್‌ಆ್ಯಪ್‌ನಲ್ಲಿ ಬರುವ ಚಿತ್ರಗಳನ್ನು ತೆಗೆದಿಟ್ಟುಕೊಂಡು, ಅದೇ ಮಾದರಿಯಲ್ಲಿ ಚಿತ್ರಗಳನ್ನು ಬರೆಯಲು ಪ್ರಯತ್ನಿಸುತ್ತಾರೆ. ತಿಂಗಳ ಹಿಂದೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಲತಾ ಅವರು, ಚಿತ್ರ ಬರೆಯಲು ಇನ್ನೂ ಒಂದಿಷ್ಟು ಬಿಳಿ ಹಾಳೆಗಳನ್ನು ತಂದಿರಿಸಿದ್ದಾರೆ.

ಲತಾ ಕುಲಕರ್ಣಿ ರಚಿಸಿರುವ ಕಸೂತಿ ಕಲೆ

ತಮ್ಮ ಕಲಾಕೃತಿಯೊಂದಿಗೆ ಲತಾ ಕುಲಕರ್ಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.