ADVERTISEMENT

ಚೋಪ್ರಾ ವ್ಯಕ್ತಿತ್ವ ಮಾದರಿಯಾಗಲಿ: ಕಾಶೀನಾಥ ನಾಯ್ಕ ಕಿವಿಮಾತು

ಕ್ರೀಡಾ ದಿನಾಚರಣೆ: ಕಾಶೀನಾಥ ನಾಯ್ಕ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 16:09 IST
Last Updated 30 ಆಗಸ್ಟ್ 2021, 16:09 IST
ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಹುಬ್ಬಳ್ಳಿಯ ಚೈತನ್ಯ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ಸೋಮವಾರ ಭಾರತ ಅಟ್ಯಾಪಟ್ಯಾ ತಂಡದ ಆಟಗಾರ್ತಿ ಅನಿತಾ ಬಿಚಗತ್ತಿ ಅವರನ್ನು ಸನ್ಮಾನಿಸಲಾಯಿತು
ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಹುಬ್ಬಳ್ಳಿಯ ಚೈತನ್ಯ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ಸೋಮವಾರ ಭಾರತ ಅಟ್ಯಾಪಟ್ಯಾ ತಂಡದ ಆಟಗಾರ್ತಿ ಅನಿತಾ ಬಿಚಗತ್ತಿ ಅವರನ್ನು ಸನ್ಮಾನಿಸಲಾಯಿತು   

ಹುಬ್ಬಳ್ಳಿ: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಬಳಿಕವೂ ಮೊದಲಿನ ರೀತಿಯಲ್ಲಿಯೇ ಸರಳತೆ ಹಾಗೂ ವಿನಯವಂತಿಕೆ ಉಳಿಸಿಕೊಂಡಿರುವ ನೀರಜ್‌ ಚೋಪ್ರಾ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಲಿ ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್‌ ತರಬೇತುದಾರ ಕಾಶೀನಾಥ ನಾಯ್ಕ ಹೇಳಿದರು.

ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ನಗರದ ಚೈತನ್ಯ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಅವರು ‘ಕ್ರೀಡಾಪಟುಗಳಿಗೆ ಪ್ರತಿಭೆ ಇದ್ದರಷ್ಟೇ ಸಾಲದು. ಎಲ್ಲರೊಂದಿಗೆ ಬೆರೆಯುವ, ಎಲ್ಲರನ್ನೂ ಗೌರವಿಸುವ ಮನೋಭಾವನೆ ಇರಬೇಕು. ಇದರಿಂದ ಸಾಧಕನ ಘನತೆ ದುಪ್ಪಟ್ಟಾಗುತ್ತದೆ. ಕ್ರೀಡಾ ಬದ್ಧತೆ, ಕಠಿಣ ಪರಿಶ್ರಮದ ಜೊತೆ ಸುಂದರ ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು’ ಎಂದರು.

‘ಜಾವೆಲಿನ್‌ ಎಸೆತ ಅರಂಭಿಸಿದ ದಿನಗಳಲ್ಲಿ ನೀರಜ್‌ ಹೇಗಿದ್ದನೊ, ಈಗಲೂ ಹಾಗೆಯೇ ಇದ್ದಾನೆ. ಇದರಿಂದಾಗಿ ನೀರಜ್‌ ಗೆಲ್ಲಬೇಕು ಎಂದು ದೇಶದ ಕೋಟ್ಯಂತರ ಜನ ಹಾರೈಸಿದರು. ಅವರ ಸಾಧನೆ ಸಾಕಷ್ಟು ಯುವ ಅಥ್ಲೀಟ್‌ಗಳಲ್ಲಿ ದೊಡ್ಡ ಸಾಧನೆಯ ಆಶಾಭಾವ ಮೂಡಿಸಿದೆ’ ಎಂದರು.

ADVERTISEMENT

ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಕಾರ್ಯದರ್ಶಿ ಕೆ. ಎಸ್‌. ಭೀಮಣ್ಣನವರ ಮಾತನಾಡಿ ‘ನಮ್ಮ ಮುಂದೆ ಓದು ಹಾಗೂ ಕ್ರೀಡಾ ಕೌಶಲ ಕಲಿತ ಅನೇಕರು ಈಗ ದೊಡ್ಡ ಸಾಧನೆ ಮಾಡಿದ್ದಾರೆ. ನೀವೂ ಅವರಂತೆ ಆಗಬೇಕು. ದೊಡ್ಡ ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮ ಪಡಬೇಕು’ ಎಂದರು.

ಸೆಪಕ್‌ಟಕ್ರಾ ಕೋಚ್‌ ಪಿ. ಮಂಜುನಾಥ, 2019ನೇ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪಡೆದ ಭಾರತ ಅಟ್ಯಾ ಪಟ್ಯಾ ತಂಡದ ಆಟಗಾರ್ತಿ ಹುಬ್ಬಳ್ಳಿಯ ಅನಿತಾ ಬಿಚಗತ್ತಿ, ಅಥ್ಲೀಟ್‌ ನಾಗರಾಜ ಕುಡಬಾವಿ, ವಾಲಿಬಾಲ್‌ ಆಟಗಾರ ಅಮನ್‌ ಕುಸುಗಲ್‌ ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿಯ ಮುಖ್ಯಸ್ಥ ವಿಲಾಸ ನೀಲಗುಂದ, ಕ್ರಿಕೆಟ್‌ ಕೋಚ್‌ ನಿತಿನ್‌ ಭಿಲ್ಲೆ, ಮಾಸ್ಟರ್‌ ಅಥ್ಲೀಟ್‌ ನಂದಾ ಕಲ್ಲೂರ ಹಾಗೂ ಸಿ.ಬಿ. ಕಲ್ಲೂರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.