ADVERTISEMENT

ಕುಮಾರಸ್ವಾಮಿ ಮೊದಲು ಕುಟುಂಬ ನಿಭಾಯಿಸಲಿ, ಆಮೇಲೆ ರಾಜ್ಯ ಆಳಲು ಬರಲಿ: ಸಚಿವ ಜೋಶಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2023, 7:20 IST
Last Updated 26 ಫೆಬ್ರುವರಿ 2023, 7:20 IST
 ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: 'ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಟಿಕೆಟ್ ಕೊಟ್ಟರೂ ಅವರಲ್ಲಿ ಬಡೆದಾಟ ಸಾಮಾನ್ಯ. ಮೊದಲು ಕುಟುಂಬ ಸರಿ ಮಾಡಿಕೊಳ್ಳಲಿ. ಆಮೇಲೆ ರಾಜ್ಯ ಆಳಲು ಬರಲಿ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕುಟುಕಿದರು.

ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಕುಮಾರಸ್ವಾಮಿ ಅವರು ಮೊದಲು ಮನೆಯನ್ನು ನಿರ್ವಹಿಸಲಿ. ಕುಟುಂಬದ 10-12 ಮಂದಿ ಚುನಾವಣೆಯಲ್ಲಿ ನಿಂತರೂ ಅವರಿಗೆ ಸಮಾಧಾನವಿಲ್ಲ. ಹಾಗಿದ್ದ ಮೇಲೂ ಪರಸ್ಪರ ಬಡಿದಾಡುತ್ತಾರೆ. ಕುಟುಂಬವನ್ನೇ ನಿರ್ವಹಿಸಲಾಗದವರು ರಾಜ್ಯವನ್ನು ಹೇಗೆ ನಿಭಾಯಿಸುತ್ತಾರೆ' ಎಂದು ಪ್ರಶ್ನಿಸಿದರು.

'ಒಂಬತ್ತು ವರ್ಷಗಳಿಂದ ತೃತೀಯ ಶಕ್ತಿ ಒಂದಾಗಿಸುವ ಪ್ರಯತ್ನ ನಡೆಯುತ್ತಿದೆ. ಅವರಲ್ಲಿ ಒಗ್ಗಟ್ಟು ಹಾಗೂ ಸ್ಪಷ್ಟ ಉದ್ದೇಶವಿಲ್ಲದ್ದರಿಂದ ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ಪ್ರಧಾನಿಯಾಗಬೇಕು ಎನ್ನುವ ಉದ್ದೇಶ ಅವರದ್ದು. ಉದಾತ್ತ ಮನೋಭಾವ ಇದ್ದರೆ ತೃತೀಯ ರಂಗ ನಿರ್ಮಾಣವಾಗುತ್ತಿತ್ತು. ಮೂರನೇ ದರ್ಜೆಯ ರಂಗವಾಗಿ ಹೊರಹೊಮ್ಮಲಿದೆ. ಭಾರತ ಜಗತ್ತಿನ ದೊಡ್ಡಣ್ಣ ಆಗಬೇಕು, ಭಾರತ ಜಗನ್ಮಾತೆಯಾಗಬೇಕು ಎನ್ನುವ ಕಲ್ಪನೆ ಬಿಜೆಪಿಯಲ್ಲಿದೆ. ಅದರಿಂದಾಗಿ ನಮ್ಮಲ್ಲಿ ಒಮ್ಮೆಯೂ ಒಡಕಾಗಿಲ್ಲ' ಎಂದು ಹೇಳಿದರು.

ADVERTISEMENT

ಮಠಾಧೀಶರು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಜೋಶಿ, 'ಎಲ್ಲ ಮಠಾಧೀಶರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಯಾರು, ಯಾವ ಅರ್ಥದಲ್ಲಿ ಮಠಾಧೀಶರ ಬಗ್ಗೆ ಹಾಗೆ ಹೇಳಿದ್ದಾರೆ ಗೊತ್ತಿಲ್ಲ' ಎಂದರು.

'ರಾಹುಲ್ ಗಾಂಧಿಗೆ ಭಾರತ ಮತ್ತು ಇಲ್ಲಿಯ ವಿಜ್ಞಾನಿಗಳ ಬಗ್ಗೆ ನಂಬಿಕೆಯಿಲ್ಲ. ಹೀಗಾಗಿ ಕೋವಿಡ್ ವ್ಯಾಕ್ಸಿನ್ ಬಗ್ಗೆ ಆಗಾಗ ಸುಳ್ಳು ಸುದ್ದಿ ಹಬ್ಬಿಸಿ ಅಪಮಾನ ಮಾಡುತ್ತಾರೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.