ಹುಬ್ಬಳ್ಳಿ: ‘ಬ್ರಾಹ್ಮಣ ಸಮಾಜಕ್ಕೆ ಸವಾಲುಗಳಿದ್ದಷ್ಟೇ ಅವಕಾಶಗಳಿವೆ. ಸದ್ಬಳಕೆಗೆ ಸಜ್ಜಾಗಬೇಕಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ವಿಶ್ವ ವಿಪ್ರ ಸೇವಾ ಟ್ರಸ್ಟ್ ಭಾನುವಾರ ಇಲ್ಲಿ ಆಯೋಜಿಸಿದ್ದ ‘ವಿಪ್ರ ಮಹಾ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು.
‘ಸಮಸ್ಯೆ ಕುರಿತು ಸಹಜವಾಗಿಯೇ ನಾವು ಹೆಚ್ಚು ಗಮನ ನೀಡುತ್ತೇವೆ. ಪರಿಹರಿಸಿಕೊಂಡು ಮುನ್ನಡೆಯುವ ಗುಣ ಕಡಿಮೆ ಇದೆ. ಒಟ್ಟಾಗಿ ಸವಾಲು ಸ್ವೀಕರಿಸಿದಾಗ ಎಲ್ಲ ಅಡೆತಡೆ ಮೀರಬಹುದು’ ಎಂದು ಹೇಳಿದರು.
‘ತಮ್ಮ ಅಗತ್ಯ ಪೂರೈಸಿಕೊಳ್ಳಲು ಜಗತ್ತು ಭಾರತದ ಕಡೆಗೆ ನೋಡುತ್ತಿದೆ. ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿ ಸಲು ನಾವು ಎಷ್ಟರ ಮಟ್ಟಿಗೆ ಸಿದ್ಧರಾಗಿದ್ದೇವೆ ಎಂಬುದು ಇಂಥ ಸಮಾವೇಶಗಳಲ್ಲಿ ಚರ್ಚೆಯಾಗಬೇಕು’ ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರಿ ಕಡಿಮೆ ಆಗಲಿದೆ: ‘ಸರ್ಕಾರಗಳು ಈಗ ಗುತ್ತಿಗೆ ಪದ್ಧತಿಯತ್ತ ಹೆಜ್ಜೆ ಹಾಕುತ್ತಿವೆ. ಕಡಿಮೆ ಖರ್ಚಿನಲ್ಲಿ ಕೆಲಸ ಮಾಡಿಸುವ ದಾರಿ ಹುಡುಕುತ್ತಿವೆ. ಆಗ ಮಾತ್ರ ರಾಜ್ಯಗಳು ಸುಸ್ಥಿರವಾಗಿರಲು ಸಾಧ್ಯ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರಿಗಳು ಗಣನೀಯವಾಗಿ ಕಡಿಮೆ ಆಗುತ್ತವೆ. ಯುವಜನರು ನೌಕರಿಗಾಗಿ ಅರ್ಜಿ ಹಾಕದೇ ಕೌಶಲಗಳನ್ನು ಪಡೆದು, ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
**
ಉಪ ಪಂಗಡ ಬಿಟ್ಟು ಹೊರಬನ್ನಿ...
‘ಜನಗಣತಿಯಂತೆ ಪ್ರಕಾರ ರಾಜ್ಯದಲ್ಲಿ ಬ್ರಾಹ್ಮಣರ ಸಂಖ್ಯೆ 13 ಲಕ್ಷ ಇದೆ. ಎಲ್ಲ 44 ಒಳ ಪಂಗಡಗಳನ್ನು ಸೇರಿಸಿದರೆ 43 ಲಕ್ಷಕ್ಕಿಂತ ಹೆಚ್ಚಾಗಿದೆ’ ಎಂದು ವಿಶ್ವ ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಚಿದಂಬರ ಕುಲಕರ್ಣಿ ತಿಳಿಸಿದರು.
‘ಗಣತಿಯಲ್ಲಿ ಬ್ರಾಹ್ಮಣರು ಎಂದು ಹೇಳದೇ ಉಪಪಂಗಡ ನಮೂದಿಸುವುದರಿಂದ ಈ ಸಮಸ್ಯೆಯಾಗಿದೆ. ಸಂಖ್ಯೆ ಕಡಿಮೆ ಇದ್ದರೆ ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಒಳ ಪಂಗಡಗಳ ಆಚಾರ ಬದಿಗಿಟ್ಟು, ಬ್ರಾಹ್ಮಣರು ಎಂದು ಹೇಳಿಕೊಳ್ಳಬೇಕಿದೆ. ಒಗ್ಗಟ್ಟಾದರೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಗುತ್ತದೆ’ ಎಂದು ಹೇಳಿದರು.
**
ಬ್ರಾಹ್ಮಣರು ಯಾವುದೇ ಪಕ್ಷದ ಗುಲಾಮರಾಗುವ ಅಗತ್ಯವಿಲ್ಲ. ನಮ್ಮ ಸಮುದಾಯದ ಜೊತೆಗಿರುವವರನ್ನು ಪಕ್ಷಭೇದ ಮರೆತು ಬೆಂಬಲಿಸೋಣ
–ದೀಪಕ ಚಿಂಚೋರೆ, ಕಾಂಗ್ರೆಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.