ADVERTISEMENT

ಗಣಿ ಗುತ್ತಿಗೆ ರದ್ದತಿಗೆ ಶಿಫಾರಸು ಮಾಡಲು ನ್ಯಾಯಮೂರ್ತಿಗೆ ಪತ್ರ: SR ಹಿರೇಮಠ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 17:39 IST
Last Updated 8 ಜುಲೈ 2024, 17:39 IST
<div class="paragraphs"><p>ಗಣಿ (ಪ್ರಾತಿನಿಧಿಕ ಚಿತ್ರ)</p></div>

ಗಣಿ (ಪ್ರಾತಿನಿಧಿಕ ಚಿತ್ರ)

   

ಧಾರವಾಡ: ‘ಕುದುರೆಮುಖ ಕಬ್ಬಿಣ ಅದಿರು ಕಂಪೆನಿ (ಕೆಐಒಸಿಎಲ್‌) ಹಾಗೂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿಗೆ (ವಿಐಎಸ್‌ಎಲ್‌) ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ  ನೈಸರ್ಗಿಕ ಅರಣ್ಯ ಪ್ರದೇಶದಲ್ಲಿ ಗಣಿ ಗುತ್ತಿಗೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿದ್ಧವಾಗಿದ್ದು, ಗುತ್ತಿಗೆ ಪ್ರಸ್ತಾವ ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಬೇಕು ಎಂದು ಮೇಲ್ವಿಚಾರಣಾ ಪ್ರಾಧಿಕಾರದ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಅಧ್ಯಕ್ಷ (ಎಸ್‌ಪಿಎಸ್‌) ಎಸ್‌.ಆರ್‌.ಹಿರೇಮಠ ತಿಳಿಸಿದರು. 

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್‌ಪಿಎಸ್‌ ಮತ್ತು ಜನ ಸಂಗ್ರಾಮ ಪರಿಷತ್‌ (ಜೆಎಸ್‌ಪಿ) ವತಿಯಿಂದ ಪತ್ರ ಬರೆಯಲಾಗಿದೆ. ಸೆಂಟ್ರಲ್‌ ಎಂಪವರ್ಡ್‌ ಕಮಿಟಿ (ಸಿಇಸಿ) ಮತ್ತು ಮೇಲ್ವಿಚಾರಣಾ ಪ್ರಾಧಿಕಾರ ಸಂಸ್ಥೆಗಳು ಬಳ್ಳಾರಿ, ಹೊಸಪೇಟೆ ಮತ್ತು ಸಂಡೂರು ಪ್ರದೇಶದಲ್ಲಿನ ವಾಸ್ತವ ಕಬ್ಬಿಣ ಅದಿರು ನಿಕ್ಷೇಪ, ಸಂಪನ್ಮೂಲ ಪ್ರಮಾಣದ ಬಗ್ಗೆ ಕರಾರುವಾಕ್‌ ಮಾಹಿತಿ ಪಡೆದುಕೊಳ್ಳಬೇಕು. ಅದನ್ನು ಸುಪ್ರೀಂ ಕೋರ್ಟ್‌ಗೆ ತಾವು ಸಲ್ಲಿಸುವ ಜಂಟಿ ವರದಿಯಲ್ಲಿ ಉಲ್ಲೇಖಿಸ‌ಬೇಕು. ಸರ್ಕಾರವು ಕೆಐಒಸಿಎಲ್‌, ವಿಐಎಸ್‌ಎಲ್‌ಗೆ ನೀಡಬೇಕೆಂದಿರುವ ಗಣಿ ಗುತ್ತಿಗೆ ರದ್ದುಪಡಿಸುವಂತೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದ್ದೇವೆ’ ಎಂದರು. 

ADVERTISEMENT

‘ಗಣಿಗಾರಿಕೆ ನಡೆದರೆ 450 ಹೆಕ್ಟೇರ್‌  ನೈಸರ್ಗಿಕ ಅರಣ್ಯ ಪ್ರದೇಶದಲ್ಲಿನ 99 ಸಾವಿರ ವೃಕ್ಷಗಳು ಹಾಗೂ 60.7 ಹೆಕ್ಟೇರ್‌ ನೈಸರ್ಗಿಕ ಅರಣ್ಯ ಪ್ರದೇಶದ 29 ಸಾವಿರ ವೃಕ್ಷಗಳ ಹನನವಾಗುತ್ತವೆ. ಅರಣ್ಯದಲ್ಲಿ ಗಣಿ ಗುತ್ತಿಗೆ ನೀಡಬಾರದು ಅರಣ್ಯಾಧಿಕಾರಿಗಳು (ಡಿಸಿಎಫ್‌, ಪಿಸಿಸಿಎಫ್‌) ಅಭಿಪ್ರಾಯ ವ್ಯಕ್ತಪಡಿಸಿ ವರದಿ ನೀಡಿದ್ದಾರೆ’ ಎಂದು ತಿಳಿಸಿದರು. 

‘ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ತರಾತುರಿಯಲ್ಲಿ ‌ಗಣಿ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಂಡಿದ್ದಾರೆ. ಸಂಬಂಧಿಸಿದ ಕಡತವನ್ನು ಅವರು ವಿವರವಾಗಿ ಪರಿಶೀಲಿಸಿಲ್ಲ. ಕುಮಾರಸ್ವಾಮಿ ಅವರ ಜೊತೆ ಚರ್ಚೆಗೆ ಸಿದ್ಧನಿದ್ದೇನೆ. ಗಣಿಗಾರಿಕೆಯಿಂದ ಆಗುವ ಮಾರಕದ ಕುರಿತು ದಾಖಲೆ ನೀಡುತ್ತೇನೆ’ ಎಂದರು.

‘ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಬ್ಲಾಕ್‌ನ ದೇವದಾರಿ ಗುಡ್ಡ ಪ್ರದೇಶದಲ್ಲಿ  ಅರಣ್ಯ ತಿರುವಳಿಗೆ ಗುತ್ತಿಗೆ ಪತ್ರ ಮಾಡಿಕೊಳ್ಳದಂತೆ, ಅರಣ್ಯ ಜಾಗವನ್ನು ಹಸ್ತಾಂತರಿಸದಂತೆ ಅರಣ್ಯ ಸಚಿವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ‌ಪತ್ರ ಬರೆದಿರುವುದು ಸ್ವಾಗತಾರ್ಹ’ ಎಂದರು. 

ಸುದ್ದಿಗೋಷ್ಠಿಯಲ್ಲಿ ಜೆಎಸ್‌ಪಿಯ ಲಕ್ಷ್ಮಣ ಬಕ್ಕಾಯಿ, ಶಮಿ ಮುಲ್ಲಾ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.