ADVERTISEMENT

ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದುಪಡಿಸಲು ವಿದೇಶಾಂಗ ಸಚಿವಾಲಯಕ್ಕೆ ಪತ್ರ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 20 ಮೇ 2024, 15:38 IST
Last Updated 20 ಮೇ 2024, 15:38 IST
ಜಿ. ಪರಮೇಶ್ವರ
ಜಿ. ಪರಮೇಶ್ವರ   

ಹುಬ್ಬಳ್ಳಿ: ‘ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ  ಬಂಧನಕ್ಕೆ ನ್ಯಾಯಾಲಯದಿಂದ ವಾರಂಟ್‌ ತೆಗೆದುಕೊಂಡಿದ್ದೇವೆ. ಇದನ್ನು ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಿ, ಅವರ ಪಾಸ್‌ಪೋರ್ಟ್‌ ರದ್ದುಪಡಿಸಲು ಅಧಿಕೃತವಾಗಿ ಪತ್ರ ಬರೆಯುತ್ತೇವೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

‘ಪ್ರಜ್ವಲ್‌ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಯವರನ್ನು ಕೋರಿದ್ದರು. ಈಗ ನಾವು (ಕರ್ನಾಟಕ ಸರ್ಕಾರ) ಅಧಿಕೃತವಾಗಿ ನ್ಯಾಯಾಲಯದ ವಾರಂಟ್‌ ಆದೇಶದ ಜೊತೆಗೆ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆಯುತ್ತೇವೆ. ಅದರಂತೆ ಪಾಸ್‌ಪೋರ್ಟ್‌ ಅಧಿಕಾರಿಗಳು ಕ್ರಮ ಕೈಗೊಳ್ಳಲೇಬೇಕು’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪಾಸ್‌ಪೋರ್ಟ್‌ ರದ್ದಾದ ತಕ್ಷಣ ಪ್ರಜ್ವಲ್‌ ಯಾವುದೇ ದೇಶದಲ್ಲಿದ್ದರೂ ವಾಪಸ್‌ ಭಾರತಕ್ಕೆ ಬರಲೇಬೇಕು. ಆಗ ಅವರನ್ನು ನಾವು ಬಂಧಿಸುತ್ತೇವೆ. ಪ್ರಜ್ವಲ್‌ ಎಲ್ಲಿದ್ದಾರೆಂದು ನಮಗೆ ಮಾಹಿತಿ ಇಲ್ಲ.ಅವರ ಬಂಧನಕ್ಕೆ ಸಹಕರಿಸಲು ಇಂಟರ್‌ಪೋಲ್‌ಗೆ 3 ಸಲ ಪತ್ರ ಬರೆದಿದ್ದೇವೆ. ಅವರಿಂದ ಉತ್ತರ ಬಂದಿಲ್ಲ. ಬ್ಲ್ಯೂ ಕಾರ್ನರ್ ನೋಟಿಸ್ ಕೂಡ ಹೊರಡಿಸಲಾಗಿದೆ’ ಎಂದರು.

ADVERTISEMENT

ಫೋನ್‌ ಟ್ಯಾಪಿಂಗ್‌ ದಾಖಲೆ ನೀಡಲಿ:

‘ಯಾವುದೇ ವ್ಯಕ್ತಿಗಳ ದೂರವಾಣಿ ಕರೆಗಳನ್ನು ಸರ್ಕಾರ ಟ್ಯಾಪಿಂಗ್‌ ಮಾಡುತ್ತಿಲ್ಲ. ಇಂತಹ ಯಾವುದೇ ದಾಖಲೆಗಳಿದ್ದರೆ ಎಚ್‌.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿ, ದೂರು ನೀಡಲಿ. ಕ್ರಮ ಕೈಗೊಳ್ಳುತ್ತೇವೆ’ ಎಂದು ಪರಮೇಶ್ವರ ತಿಳಿಸಿದರು.

‘ಸರ್ಕಾರ ಫೋನ್‌ ಟ್ಯಾಪಿಂಗ್‌ ಮಾಡಬೇಕಾದರೆ ಆದೇಶ ಹೊರಡಿಸುವುದು ಸೇರಿ ಹಲವು ವಿಧಾನಗಳಿವೆ. ಖಾಸಗಿ ಏಜೆನ್ಸಿ ಮೂಲಕ ಟ್ಯಾಪಿಂಗ್‌ ನಡೆದಿದ್ದರೆ, ಅದು ನಮ್ಮ ಗಮನಕ್ಕೆ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.